೩೧
ಮಾರ್ಗದರ್ಶಿ
ನಾ ನಡೆದ ಹಾದಿಯನು ಹಿಂತಿರುಗಿ ನೋಡಿದರೆ
ಬಗೆಯ ಬಾಯಲಿ ನೆನಹುಗಳ ಮೆಲಕು ಹಾಕಿದರೆ
ಹಜ್ಜೆಹೆಜ್ಜೆಗೆ ನೀನೆ ಕೈಹಿಡಿದು ನಡೆಸಿರುವೆ
ಎಂಬುದನು ನಾನರಿವೆ, ನನ್ನ ಗುರುವೆ!
೯-೧೨-೧೯೩೭
೩೨
ರಸದಳನೀರಾರಿ ಹೋಗೆ
ಭಾವದ ತಿರುಳೊಣಗಿಹೋಗೆ
ಕರ್ತವ್ಯದ ಕರಟವು
ಕವಿಯ ಹೃದಯಕೊಂದು ಶೂಲೆ!
ತಿಳಿಯನೆಲ್ಲ ಹೀರ್ದ ಮೇಲೆ
ಉಳಿವುದೇನು? ಚರಟವು!
೨೭-೧೨-೧೯೩೭
೩೩
ಬುದ್ಧಿಸುಖಿ**
ಬುದ್ದಿಯೀಟಿಯ ಮೊನೆಯ ತುದಿಯಲಿ
ತತ್ತ್ವ ಕುಣಿಯುತಿದೆ;
ರಸ ಸಮಾಧಿಯೊಳೀಂಟಿ ಸಿದ್ಧಿಯು
ಸತ್ತ್ವ ತಣಿಯುತಿದೆ!
ಬದ್ಧಿ ಭಾವಗಳೆರಡರಲ್ಲಿಯು
ಅದ್ರಿಶಿರಕೆ ಸಮುದ್ರದಾಳಕೆ
ಮುಳುಗುತೇರುವ ಕವಿಯ ಕಣ್ಣಿಲಿ
ನೀರು ಹರಿಯುತಿದೆ!
೨೮-೧೨-೧೯೩೭
೩೪
ಮಲರುತಿದೆ ಕಣ್ಣೀರ ಕೆರೆಯಲ್ಲಿ ನಗೆದಾವರೆಯ ಮುಗುಳು;
ಮುನಿದತ್ತು ಮತ್ತೆ ನಗುತಿಹಳೆನ್ನ ಅತ್ತೆಮಾವರ ಮಗಳು!
೧೯೩೮
೩೫
ಒಬ್ಬನೆಯೆ ಬಂದೆ
ಕಣಿಗಿಲೆಯ ಗಿಡದಲ್ಲಿ ಹೂ ಗೋಂಚಲಾಗರಳಿ
ರಂಜಿಸಿರೆ (ಕವಿಯಂತೆ ನಾನು!) ಕಂಡೆದೆ ಬೆಂದೆ:
ತಂತಿ ಬರೆ, ಜೊತೆಗೂಡಿ ನಾವಿಬ್ಬರೂ ತೆರಳಿ,
ನಲ್ಲೆ ತವರೊಳಗುಳಿಯೆ, ನಾನೊಬ್ಬನೆಯೆ ಬಂದೆ!
೬-೩-೧೯೩೮
೩೬
ವಿರಹಿ ಕವಿ
ಎದೆಯೊಳೊಂದು ಮಸೆವ ಬಾಣ;
ಕೊರಲೊಳೊಂದು ಕೊರೆವ ಗಾಣ!
ಕುದಿಯುತಿಹವು ಪಂಚ ಪ್ರಾಣ:
ಹೊಮ್ಮಲಹುದೆ ಕವಿಯ ಗಾನ?
೧೬-೩-೧೯೩೮
೩೭
ವಿವಾಹ ವರ್ಧಂತಿ
ಮುಗಿಯಿತಿಂದಿಗೊಂದು ವರುಷ:
ಮುಗಿಯದಿರಲಿ ನಮ್ಮ ಹರುಷ.
ಕರುಣಿಸಯ್ಯ, ಮಹಾಪುರುಷ,
ಕಯ್ಯ ಮುಗಿವೆವು.
ಚರಣತಳದೊಳನವರತವು
ಶರಣು ಹೊಗುವೆವು!
೧-೫-೧೯೩೮
೩೮
ಅಹಂಕಾರ
ನಾನು ಮಾದಿದೆನೆಂಬ ಬಲೆಯಲಿ
ನಾನರಿಯದಂತೆ
ಬೀಳಗೊಡಿಸದಿರೆನ್ನ ದೇವನೆ,
ಮೀನು ಬೀಳ್ವಂತೆ!
೭-೬-೧೯೩೮
೩೯
ದೃಷ್ಟಿ ವಿಷಾಹಿ
ಬಿಡು ಸಾಕೀ ಹುಡುಗಾಟದ ದೃಷ್ಟಿ;
ಕಾಮರಾಜ್ಯದಲಿ ದೃಷ್ಟಿಯೆ ಸೃಷ್ಟಿ;
ನೋಟಹುತ್ತದಿಂ ಬೇಟದ ಹಾವು
ಮೂಡಿತ್ತೆನೆ ನಿನಗದೆ ವಿಷಮೇವು.
ರಾವಣನನೆ ತಿಂದಿತೊ ಆ ನೋವು!
– ತಪ್ಪದೊ ನಿನ್ನಾತ್ಮಕೆ ಸಾವು!
೨೮-೯-೧೯೩೮
೪೦
ನಿರುಪಮನೆ ಜೋ!
ನಿರ್ಗುಣನೆ ಜೋ!
ಆನಂದಮಯಾ ಜೋ ಜೋ!
ಆಕಾಶ ತೂಗಲಿ ಜೋ!
ಸಾಗರ ತೂಗಲಿ ಜೋ!
ಬೆಟ್ಟತೂಗಲಿ ಜೋ!
ಕಾಡು ತೂಗಲಿ ಜೋ!
ಭೂಮಿ ತೂಗಲಿ ತಿರುಗಿ ಸೂರ್ಯನ ಸುತ್ತ – ಜೋ ! ಜೋ! ಜೋ!
೧೫-೩-೧೯೩೯
** ಎಡ್ಡಿಂಗ್ಟನ್ ಮತ್ತು ಜೀನ್ಸ್ ಅದರ ವಿಜ್ಞಾನಗ್ರಂಥಗಳನ್ನೋದುತ್ತಾ.
Leave A Comment