೪೧

ಮೆಚ್ಚಿನ ಗಿಡಗಿಡಕೂ ಒಯ್ದು
ಬೈಗಿನ ಸರದಿಯ ನೀರ್ವೊಯ್ದು
ಕವಿ ಕುಳಿತಿರೆ ಹೂದೋಟದಲಿ
ಗಿಡಗಳು ನೀರನು ಸಂಭೋಗಿಸಿದುವು

ಬೇರಿನ ಬೇಟದಲಿ;
ಅವರಾನಂದವನೆಲ್ಲಾ ಒಟ್ಟಿಗೆ
ಸವಿದನು ನೋಟದಲಿ
ಕವಿ ಕಣ್ ಕೂಟದಲಿ!

೨೪-೩-೧೯೩೯ 

೪೨
ಮಡಿಮೈಲಿಗೆ

ಮನಸಿಗೆ ಮೈಲಿಗೆಯಾಗಿದೆ, ಗುರುವೇ:
ಬಿದ್ದಿತು ಕೋಪದ ಕೊಚ್ಚೆಯಲಿ,
ಪಶ್ಚಾತ್ತಾಪದ ಸೀಗೆಯೊಳುಜ್ಜಿ
ಮಡಿಮೀಯಿಸೊ ತೀರ್ಥೇಚ್ಛೆಯಲಿ!

೨೮-೩-೧೯೩೯ 

೪೩

ಏರಿತು ಇಳಿಯಿತು
ಹೊಲ ಹೊಲ ಹೊಲ
ಸಸಿರಾಗಿ;
ಉಬ್ಬಿತು ತಗ್ಗಿತು
ಅಲೆ ಅಲೆ ಅಲೆ
ತಲೆದೂಗಿ;
ತಗ್ಗುತ್ತುಬ್ಬುತ್ತೇರುತ್ತಿಳಿಯುತ್ತದೊ
ನಿಂತನು ಕವಿ ಹಸುರಾಗಿ!

೨೯-೯-೧೯೩೯ 

೪೪

ಪ್ರೇಮವೆ ಶಿವ ಶಿವನೇ ಪ್ರೇಮ;
ಪ್ರೀತಿಸುವುದೆ ಪ್ರಾಣದ ನೇಮ!

೩೦-೯-೧೯೩೯ 

೪೫

ನಿನ್ನ ಮಹದಿಚ್ಛೆಗೆ
ನನ್ನ ಆಲ್ಪೇಚ್ಛೆ
ಶರಣು, ಶರಣು, ಶರಣು!

೭-೧೧-೧೯೩೯ 

೪೬

ಮೋಕ್ಷಪತಿ ನೀಂ; ನಿನ್ನ ಬಲ ತಪ್ಪಿದರೆ ನನಗೆ
ಲಕ್ಷ ನಕ್ಷತ್ರ ಬಲವೇವುದಯ್ಯಾ?
ನಿನ್ನ ಬಲವೊಂದಿರಲ್ ಕೋಟಿ ತಾರಾ ಬಲಂ
ನನ್ನ ಸೇವೆಯನೊಲಿವ ತೊಳ್ತಿರಯ್ಯಾ!

೯-೧೧-೧೯೩೯ 

೪೭

ಭವಬಂಧನವನು ಸವಿಗೊಳಿಸಯ್:
ಸವಿಯಾದರೆ ಸೆರೆ-ಬಿಡುಗಡೆಯಯ್!

೧-೧೨-೧೯೩೯ 

೪೮

ಮಾತು ನನ್ನ ಕಲೆ,
ಮೌನ ನನ್ನ ನೆಲೆ,

೬-೨-೧೯೪೦

 ೪೯

ನನ್ನ ಕಾದಂಬರಿ

ಕಲೆ ಹಡೆದ ಕಲ್ಪನೆಯೆ
ಕತ್ತರಿಯು, ಕೇಳ;
ಹಾಳೆ ಹಾಳೆಗಳಾಗಿ
ಕತ್ತರಿಸಿ ಬಾಳ
ರಟ್ಟು ಹಾಕಿದೆನೊಟ್ಟು:
ಕಾದಂಬರಿಯ ಹುಟ್ಟು
ಗುಟ್ಟೆಲ್ಲ ರಟ್ಟು!

೨-೪-೧೯೪೦ 

೫೦

ಇಂದ್ರನೊಡನೆ ನಂದನದಲಿ
ಅಪ್ಸರಿಯರ ಮೀಂಟುತಾ
ಇಂದ್ರಿಯಗಳನಾಲಿಂಗಿಸಿ
ಅತೀಂದ್ರಿಯಕೆ ದಾಂಟುತಾ
ವಿಹರಿಸೆ ಬಾ, ವಿಮರ್ಶಕಾ,
ಅಮೃತರಸವನೀಂಟುತಾ!

೫-೪-೧೯೪೦