೫೧

ಹರಿಯುತಿದೆ ತೆರಪಿಲ್ಲದೆಯೆ, ಕಂಬಿಯಂದದಲಿ
ನಾವ್ ತೆರುವ ಫೀಜು;
ರಜದ ರೈಲಿನ ಮೇಲೆ ಮಿಂಚಿ ಮಝಮಾಡುತಿದೆ
ನಮ್ಮ ಕಾಲೇಜು.

೧೧-೯-೧೯೪೦

 ೫೨

ಸೆನೆಟ್

ಪೇಳರ್ಥವಾಗುವುದೆ ಮಣ್ಣೊಡ್ಡರಿಗೆ ಕಾವ್ಯಸೃಷ್ಟಿ?
ಮಣ್ಣು ಹೊತ್ತರೆ ಮಾತ್ರ ಕೆಲಸ ಕಾಣುವುದವರ ದೃಷ್ಟಿ!

೧೨-೯-೧೯೦ 

೫೩
ಬೆಂಗಳೂರು ಕಾಲೇಜ್

ನಮ್ಮ ಕಾಲೇಜಿನಲಿ ದಿನವೂ ಕಲಸ ನಡೆಯುತಿದೆ:
ಕಲ್ಪಿ ಶಿಲ್ಪಿಗೆ ಕೂಲಿಮಾಡುತ ಪಡಿಯ ದುಡಿಯುತಿದೆ.

೧೨-೯-೧೯೪೦ 

೫೪

ಭೂಮ ಸತ್ಯವನಲ್ಪ ತರ್ಕದೊಳಗಿಟ್ಟು
ವಿದ್ವತ್ತು ಕಟ್ಟಿದೊಣಮರದ ಚೌಕಟ್ಟು;
ವಿಜ್ಞಾನ ತತ್ತ್ವವೆಂಬುವ ಹೆಸರನದಕಿಟ್ಟು
ಅಚ್ಚುಕಟ್ಟಿಗೆ ಮೆಚ್ಚಿದರೆ ಹೊಳೆಯವುದೆ ಗುಟ್ಟು?
ಅದು ಬರಿ ಬಿಸಿಲ್ಗುದುರೆಯಟ್ಟು!

೧೭-೯-೧೯೪೦

೫೫

ವೀಣಾರೂಪಿ ದೇವರ ದನಿಯಿದು
ಹನಿ ಹನಿ ಹನಿ ತಂತಿ:
‘ಆನಂದಂ ಪ್ರಯಂತ್ಯಭಿಸಂವಿಶಂತಿ!’

೨೩-೯-೧೯೪೦ 

೫೬

ಕವಿಗೆ ಕರ್ಣಂ ಪ್ರಮಾಣಂ
ವ್ಯಾಕರಣಮಲ್ತು:
ವ್ಯಾಕರಣಮೇಕೆಂಬೆಯೇಂ?
ಮರೆವುದಕೆ ಕಲ್ತು!

೩-೧೨-೧೯೪೦ 

೫೭

ಗೋ ಕಾಕ ವಿಕೃತಗಳ್ ಕಾಲ್ಗೊಳೆ ಚಿಕಿತ್ಸೆಯಂ,
ಪಲ್ ಕೋಡು ಕೊಕ್ಕಿಗಿದೆ, ಮೆದುಳಿಗುಂಟೇ ಶ್ರಮಂ?

೨೨-೩-೧೯೪೧ 

೫೮

ಕಡಲ ತೆರೆಯ ಗಾನ
ಕೇಳೆ ತಾನ ತಾನ
ಕವಿಯ ಜೀವಮಾನ
ಸಮುದ್ರಯಾನ!

೨೭-೨-೧೯೪೧ 

೫೯

ಕತ್ತಲೆಯ ಕೊಲೆಗೈವ ಕಾಂತಿಖಡ್ಗದ ವೀರ.
ಆತ್ಮ ಉದಯಾಚಲವನೇರಿ ಬಾರ:
ಸತ್ಯಮಾರ್ಗಕೆ ನಡೆವ ಧರ್ಮದೀಪವ ತೋರ;
ಚಿತ್ತ ತಿಮಿರವನಟ್ಟಿ ಕಳೆಯೊ ದೂರ,
ಹೇ ಜ್ಯೋತಿರವತಾರ!

೨೫-೫-೧೯೪೧ 

೬೦
ವಿರಹಿಯ ವ್ಯಥೆ

ನಿನಗೆ ತಿಳಿವುದೆಂತು ನನ್ನ
ವಿರಹಿಯಾತನೆ?
ದೂರವಿರಲು ಆರಿಯಲಾರೆ;
ಅರಿಯಲೆಂದು ಬಳಿಗೆ ಸಾರೆ –
ಅಯ್ಯೆ ಸೋತೆನೆ!

೧೮-೬-೧೯೪೧