೬೧
ವೀಣಾ ವಿಶಾರದೆಗೆ

ಗಾನಮಧು ತುಂಬಿ ಸಿಡಿಯುವ ತಂತಿ ಮಿಡಿಯಲ್ಕೆ
ಹಾತೊರೆವ ವಲ್ಲಕೀ ವಧುವಿನಂತೆ
ನೀನೆಸೆವುದನು ನೋಡಿ ಕಾತರಿಪ ಕವಿಯೆನಗೆ
ವೈಣಿಕನದಾರೆಂಬುದೊಂದೆ ಚಿಂತೆ!

೩-೫-೧೯೪೨

 ೬೨

ಕೆಲಸಬಿಡುವು

ಗೋಡೆ ಗೋಡೆಯ ನಡುವಣೆದೆ ಸಾರ್ಥಕಂ
ಗೋಡೆಯಿರ್ಪುದಕೆ:
ಬದುಕೆಲ್ಲ ಬದುಕಲ್ಕೆ ಬಿಯಮಾಗಲಾ
ಬುದಕೊಂದೆ ಬದುಕೆ?

೨೨-೧೧-೧೯೪೨ 

೬೩

ಕಾಲಿಲ್ಲದಾ ಅಶ್ವ
ಗೂನಾದರೇನು?
ನಾನಿಲ್ಲದೀ ವಿಶ್ವ
ಏನಾದರೇನು?

೬-೧೨-೧೯೪೨

೬೪

 

ಹೂವನೀಂಟುವ ಬಣ್ಣಬಣ್ಣದ ಚಿಟ್ಟೆಹಕ್ಕಿ,
ಸಗ್ಗ ಸೊರಗಿದೆ, ನೋಡ, ಹೊಟ್ಟೆಕಿಚ್ಚಿಗೆ ಸಿಕ್ಕಿ!

೬-೧೨-೧೯೪೨

 ೬೫

ಅವಿದ್ಯಾ

ಆಶ್ಚರ್ಯಗಳ ಮಧ್ಯೆ
ಪ್ರಶ್ನಚಿಹ್ನೆ;
ಸರ್ವವನು ಸುತ್ತಿಹುದು
ಒಂದು ಸೊನ್ನೆ!

೭-೧-೧೯೪೩ 

೬೬

ಸುತ್ತಲೂ ಮರಿಕಾಡು;
ಮನೆ ಹಕ್ಕಿಗೂಡು:
ಎಲ್ಲಿದೆ, ಹುಡುಕಿ ನೋಡು,
ಕಬ್ಬಿಗನ ಬೀಡು!

೧೩-೧-೧೯೪೩ 

೬೭
ಶ್ರೀ ಶಂಕರಾಚಾರ್ಯ ಶಿವಮಾನಸ ಪೂಜಾ

ನೀನಾತ್ಮಂ; ಮತಿ ಗಿರಿಜೆ; ಸಹಚರರ್ ಪ್ರಾಣಗಳ್;
ಮನೆ ಶರೀರಂ; ವಿಷಯೋಪಭೋಗರಚನೆಯೆ ಪೂಜೆ;
ನಿದ್ರೆಯೆ ಸಮಾಧಿ; ಸಂಚಲನೆ ತಾಂ ಪ್ರದಕ್ಷಿಣಂ;
ನುಡಿವುದೆಲ್ಲಂ ನುತಿ, ನೆಗಳ್ಕೆಯಖಿಲಂ ನಿನಗೆ,
ಓ ಗುರುವೆ, ತಾನಪ್ಪುದಾರಾಧನೆ!

೨೮-೯-೧೯೪೩ 

೬೮
ತೇಜೋsಸಿ ತೇಜೋ ಮಯಿ ಧೇಹಿ

ತೇಜಕ್ಕೆ ನೀ ತೇಜವೆನ್ನೊಳುದ್ಭವಿಸು ಬಾ;
ವೀರ್ಯಕ್ಕೆ ನೀ ವೀರ್ಯವೆನ್ನೊಳದ್ಭವಿಸು ಬಾ;
ಬಲಕೆ ನೀನೇ ಬಲಂ ನನ್ನೊಳುದ್ಭವಿಸು ಬಾ;
ಓಜಸಿಗೆ ನೀನೋಜೆ ನನ್ನೊಳದ್ಭವಿಸು ಬಾ;
ಮನ್ಯುವಿಗೆ ನೀ ಮನ್ಯುವೆನ್ನೊಳುದ್ಭವಿಸು ಬಾ;
ಸಹನೆಗೆ ಸಹನೆ ನೀನೆನ್ನೊಳುದ್ಭವಿಸು ಬಾ!

೧-೪-೧೯೪೪ 

೬೯

ಸಿದ್ಧಗುರು ವಾಕ್ಯಕಿಂ ಮಿಗಿಲಿಹುದೆ ಬುದ್ಧಿ?
ಗುರುಬ್ರಹ್ಮಸಿದ್ಧಿಗಿಂ ಮಿಗಿಲಿಹುದೆ ಸಿದ್ಧಿ?

೧೯-೧-೧೯೪೫ 

೭೦

ಬಿಂದು ಬಿಂದು ಸೇರಿ ಸಿಂದು:
ಇಂದು ಇಂದು ಸೇರಿ ಮುಂದು!
ಬರಿದೆ ಮುಂದು ಮುಂದು ಎಂದು
ಕುಳಿತರೆಮಗೆ ಸೊನ್ನೆ ಇಂದೂ!

೨೧-೧-೧೯೪೫