೭೧

ಸುತ್ತಮುತ್ತ ಸುಖದ ಹುತ್ತ,
ನಡುವೆ ತಾನು ದುಃಖಫಣಿ;
ಸುತ್ತಮುತ್ತ ಸಿರಿಯ ಮೊತ್ತ,
ನಡುವೆ ತಾನು ನಿತ್ಯಋಣಿ;
ಗಣಿಯ ಕೂಲಿಯಂತೆ ಶೂಲಿ
ಕವಿಯ ಲೇಖನಿ!

೨೦-೨-೧೯೪೫

೭೨

ನೀ ನಿಯಂತೃ, ನಾನೆ ಯಂತ್ರ;
ನಡೆಸಿದಂತೆ ನಡೆಯುವೆ,
ನೀನೆ ಮಂತ್ರ, ನೀನೆ ತಂತ್ರ:
ನೀನಾಗಿಯೆ ಬರೆ, ಪಡೆಯುವೆ!
ಸರ್ವತಂತ್ರ ನೀ ಸ್ವತಂತ್ರ:
ನಿನ್ನನುಳಿದು ಅಸ್ವತಂತ್ರ
ಜಗವತಂತ್ರ!
‘ನಾ ಸ್ವತಂತ್ರ’ ಎಂಬ ಮಂತ್ರ
ಭಾವಮಾತ್ರ ಪ್ರಕೃತಿಸೂತ್ರ;
ಬರಿ ಅತಂತ್ರ!

೨೫-೨-೧೯೪೫ 

೭೩

ಎಲ್ಲಿ ಪೂಜೆ ನಡೆಯುತಿಹುದೊ
ಅಲ್ಲೆ ನನ್ನ ದೇಗುಲ:
ಪ್ರಾರ್ಥಿಸಿರುವುದಾರ ಹೃದಯ
ಅದುವೆ ನನ್ನ ಗುರುಕುಲ;
ದೇವರೇಗಳಾರ್ಗೆ ನೆನಪೊ
ನಾನವರ ಕುಲ!

೨೨-೩-೧೯೪೬ 

೭೪

ಅನ್ಯರಿಗೆ ನನ್ನಿಂದ ಅನ್ಯಾಯವಾಗುವೊಡೆ
ಅಗಲಿಸೆನ್ನನು ಅವರ ಸರಣಿಯಿಂದ;
ನಿಂದು ನಿನ್ನಡಿವುಡಿಯ ಧನ್ಯತಾದೂರದಲಿ
ವಂದಿಸುವೆ, ಓ ಗುರುವೆ, ದೈನ್ಯದಿಂದ,

೨೨-೩-೧೯೪೬ 

೭೫

ಹೊಲದಂದದಿ ಹಬ್ಬಿದೆ ದೇವರ ಮೆಯ್
ತೆನೆ ತೆನೆ ಜೋಳದ ನವಿರ್ನಿಮಿರಿ:
ತೆರೆ ತೆರೆ; ಪೊದೆ ಪೊದೆ; ಮರ ಮರವಾಗಿದೆ;
ಮೊಗವದೊ ದಿಗುತಟದೆದ್ದ ಗಿರಿ!

೮-೭-೧೯೪೬ 

೭೬

ಭುವಃ ಸ್ಥಿತ ಜಗತ್ ಪಿತ!
ಲೋಕದ ಪಥ, ಜೀವನ ರಥ,
ಸುರಕ್ಷಿತ, ಸುರಕ್ಷಿತ,
ಸರ್ವದಾ ಸರ್ವಥಾ!

೧೪-೫-೧೯೪೬ 

೭೭

ಉಸಿರು ಮನಸು ಹೊಟ್ಟೆ ಬಟ್ಟೆ
ಬಡತನಮಂ ನೀಗಲಿ;
ನಿಮ್ಮೆಲ್ಲರ ಬಾಳ ಬಟ್ಟೆ
ಬಾನ್ಮೊಗಂ ಸಾಗಲಿ.
ಅಲ್ಪದೂರವಾಗಲಿ
ಭೂಮದೆಡೆಗೆ ಬಾಗಲಿ!

೫-೧೨-೧೯೪೭ 

೭೮

ದೇವತೆಗಳಿಗಿದು ಸಮೆದಿಹ ನೋಟ:
ಓ ಮನುಜಾ, ಎದು ನಿನಗೆಲ್ಲೊ:
ಬರ್ದಿಲರಿಗಿಕ್ಕಿಮರ್ದಿನ ಊಟ;
ಇದು ಬರಿ ಚಂದ್ರೋದಯವಲ್ಲೊ!

೨೭-೩-೧೯೪೮ 

೭೯

ಈ ವೀಣೆಯ ದನಿ
ತಾಯಿಯ ಪಾದದ ಹಾದಿಯೆಳೆನ್ನನು
ಒಯ್ಯನೆ ತೇಲಿಸುತೊಯ್ಯುತ್ತಿದೆ ಆ
ದೂರದ ನಿನ್ನೆಡೆಗೆ!

೨೦-೩-೧೯೪೯ 

೮೦

ವಿರಹಕಿಂತ ನರಕವಿಲ್ಲ
ಮಿಲನಕಿಂತ ನಾಕವಿಲ್ಲ
ಒಲಿದ ಉಸಿರಿಗೆ!

೨೦-೩-೧೯೪೯