೮೧

ನಮಸ್ಕರಿಸು ಅಹಂಕಾರ.
ನಮಸ್ಕಾರವೆ ಉದ್ಧಾರ:
ನಮಸ್ಕಾರದ ನೈವೇದೈಕೆ
ಇಳಿವನು ಜಗದಾಧಾರ!
ನಮಸ್ಕಾರಕೆ ಸೆರೆಯಾಗುವ
ಭಗವಂತನೆ ಅವತಾರ!
ನಮಸ್ಕರಿಸು, ಅಹಂಕಾರ:
ನಮಸ್ಕಾರವೆ ಉದ್ಧಾರ!

೧೦-೯-೧೯೪೯

೮೨

ಏಕತಾ ಅನೇಕದಿಂ
ಅನೇಕತಾ ಏಕಕೆ
ಧ್ಯೇಯಮೇಕಮಾತ್ರಮಲ್ತೆ
ವಿಕಾಸ ಶೀಲ ಲೋಕಕೆ!

೨೫-೮-೧೯೫೦ 

೮೩

ಹೇ ಅತಿಮಾನಸ ಮಸ್ತಕೇ,
ಸರ್ವಶಾಸ್ತ್ರ ಪುಸ್ತಕೇ,
ಕೊಳ್ ರಥದೆ ಚಕ್ರಮಂ
ನಿನ್ನ ದಿವ್ಯಹಸ್ತಕೆ;
ನಾ ನಿಮಿತ್ತ ಮಾತ್ರನಲ್ತೆ,
ಸಕಲ ಸೃಷ್ಟಿಸಾರಥಿ?
ಸಮರ್ಪಣಂ ಪದಕೆ, ದೇವಿ,
ಇದೆಕೊ ಹೃದಯದಾರತಿ!

೨೬-೧-೧೯೫೧ 

೮೪

ಏರು, ಏರು, ಮನವೆ, ಏರು;
ಭೂಮಿ ವ್ಯೋಮಗಳಲಿ ಹಾರು;
ಲೋಕ ಲೋಕಗಳನು ಮೀರು;
ಮಾತೃ ಚರಣತಲವ ಸೇರು;
ಏರು, ಮನವೆ, ಏರು, ಏರು!

೩೧-೧-೧೯೫೧ 

೮೫

ಬಾಳಿನಶ್ವತ್ಥಕ್ಕೆ ಭಗವಂತನೆಯೆ ಬೇರು.
ನಿಲ್ಲದೆಲ್ಲೂ ಮುಂದೆ ಸಾಗಲಿ ಬದುಕುದೇರು,
ನೂರು ಸಂದೇಹಗಳ ಸೋಪಾನಗಳನೇರು:
ಶ್ರದ್ಧೆಯಿಂ ತುದಿಗೆ ಆ ಸಿದ್ಧಿಯಂ ಸೇರು!

೨೬-೧-೧೯೫೨

 ೮೬

 

ನಿನ್ನ ನೆನೆವುದೆ ತಪಂ
ನಿನ್ನ ಕರೆವುದೆ ಜಪಂ
ನಿನ್ನ ಕೃಪೆಯವತರಣಕೆಮ್ಮ ಸಾಧನೆ ಬರಿ ನೆಪಂ,

೪-೩-೧೯೫೨

 ೮೭

ಪಠ್ಯಪುಸ್ತಕದ ಪದ್ಯರಚಕನಿಗೆ

ನಿನ್ನ ಕೀರ್ತಿ ನಿನಗೆ ನರಕ ಸದೃಶ ಕೂಪ;
ನಿನ್ನ ಕವನ ನಿನಗಪ್ಪುದೊ ಘೊರ ಪಾಪ!
ನಿನ್ನ ನಾಮ ನಿನಗೆ ಮಾತ್ರ ಇಂದ್ರಚಾಪ:
ಆ ಹೆಸರ ಹೆಮ್ಮೆಗೇಕೆ
ಈ ಮಕ್ಕಳಿಗೀ ದುಸ್ತರ
ಕ್ರೂರಶಾಪ:
ಕವನ ಪಠನದೊಂದು ಕಠಿನ ಮರುನೀರಸ ತಾಪ?

೨೩-೯-೧೯೫೨

 ೮೮

 

ಹೋದ ನಾಕ ಮರಳಿತು;
ಮೋದ ಕಮಲವರಳಿತು:
ಹರಸೆ ಬಾನ ಮಕ್ಕಳು
ಮುನಿದ ಕಾಂತೆ ನಕ್ಕಳು!

೧೫-೭-೧೯೫೩ 

೮೯

ಮತ್ತಿ ಮತ್ತೆ ಗೆಲ್ಲಬೇಕು;
ನಿತ್ಯ ಗೆಲ್ಲುತಿರಲೆ ಬೇಕು.
ಗೆಲ್ಲುತಿಹುದೆ ಗೆಲ್ಲ!
ನಿನ್ನ ಗೆದ್ದು ಪೂರೈಸಿದೆ
ಎಂಬ ಮಾತೆ ಸಲ್ಲ:
ಪಡೆದು, ಪಡೆದು, ಪಡೆದು ನಿನ್ನ. . . .
ಕಡೆಗೆ? ― ಕಡೆಯೆ ಇಲ್ಲ!

೮-೫-೧೯೫೪ 

೯೦

ಕುಂಡದಲ್ಲಿ ಕಾವ್ಯ:
ಅಃ ಎನಿತು ಶ್ರಾವ್ಯ!
ದೇವನೊಂದು ದಿವ್ಯ ಕವನ
ಅವತರಣಕೆ ಈ ಭುವನ
ಬಿತ್ತಿ ಮಾತ್ರ!
ಅದನರಿಯಲೆ ಅದ ಸವಿಯಲೆ
ಕವಿಯ ಪಾತ್ರ:
ಕವಿಯೆ ಪಾತ್ರ!

೧೦-೫-೧೯೫೪