೯೧

ಬಡವ?
ವಿಪರೀತನಾದರೆ ವಡಬ!
ಬಡವ:
ತಿರುಗಿ ನಿಂತರೆ ವಡಬ!
ಬಡವ ವಡಬನಾಗುವ ತನಕ ಕಾಯಬೇಕೆ?

೧೦-೫-೧೯೫೪ ೯೨

ಹೊನ್ನಿನ ಪ್ರಶ್ನೆಗೆ ಮಣ್ಣಿನ ಉತ್ತರ

ಹೊನ್ನೆಂದಿತು ತಳತಳ ಮಿಂಚಿ:
“ಮೈಸೂರಿನ ಮಣ್ಣು
ಗಡಿದಾಟಲು ಹೊನ್ನು!
ಎಲೆ ಮಣ್ಣೆ,
ಏಕಿಲ್ಲಿಹೆ ನೀನಿನ್ನೂ?”
ಮಣ್ಣೆಂದಿತು ಪಸುರ್ನಗೆ ಸೂಸಿ:
“ಅದೆ ನಿನಗೆನಗಿಹ ವ್ಯತ್ಯಾಸ:
ಬೆಲೆ ಬರುವಲ್ಲಿಗೆ ನೀ ನೆಗೆವೆ;
ನಿಲೆ ಇಲ್ಲದ ನೀ ಬೆಲೆವೆಣ್ಣು!
ನಾನಿರುವಲ್ಲಿಗೆ ಬೆಲೆ ಬಹುದು;
ನೆಲೆಯಾಗಿಹ ನಾ ನೆಲವೆಣ್ಣು!”

೧೦-೫-೧೯೫೪ 

೯೩

ನಿನ್ನ ಪಾದಕೆ ನನ್ನ ಮಸ್ತಕ
ಎಟುಕುವನಿತೇ
ನನ್ನನುನ್ನತಗೊಳಿಸು, ಸಾಕು:
ಅನ್ಯಕಾರಣಕೆನ್ನ ಔನ್ನತ್ಯವನು ನಾ ಬಯಸಿದರೆ
ಅದು ಬರಿ ಅಹಂಕಾರವದಕೆ ಸೊನ್ನೆಹಾಕು!

೧೩-೪-೧೯೫೬ 

೯೪

ಏನು ಸುಮದರ, ಏನು ಸುಖಕರ,
ಏನು ರಸಮಯ ಕವಿಗೆ ಲೋಕ!
ಪೂರ್ಣಪ್ರಜ್ಞಾ ಶಿವ ಅನುಗ್ರಹ
ಹೃದಯಕೊದಗಿರೆ: ನಿಲವೆ ನಾಕ!

೧೩-೪-೧೯೫೬ 

೯೫

ಏನು ಸುಂದರ ಈ ತದಿಗೆ ಚಂದಿರ:
ಆಕಾಶವೆ ತಾನಾಗಿದೆ ಆನಂದ ಮಂದಿರ!

೧೪-೪-೧೯೫೬ 

೯೬

ಒಲುಮೆ ಒಂದು ದಿವ್ಯ ರಕ್ಷೆ
ಇಹ ಸಮಸ್ಯೆಗೆ:
ಮದುವೆ ಅದಕೆ ಮಧುರ ದೀಕ್ಷೆ
ಗೃಹತಪಸ್ಯೆಗೆ!

೧೯-೪-೧೯೫೬ 

೯೭

ಅದಕೆ ಏಕೆ ಅಂಜಿಕೆ?
ಮರಣ ನಿನ್ನ ಚರಣದೆಡೆಗೆ
ತೆರೆವ ಬಾಗಿಲಾಗಿರೆ,
ಶರಣಗೇಕೆ ಅಂಜಿಕೆ?

೧೯-೪-೧೯೫೬

 ೯೮

ಮಾನಸಗಂಗೋತ್ರಿಯಲ್ಲಿ ಶ್ರಾವಣಹೊತ್ತಾರೆ

ಕೆಂಪು ಕೊಕ್ಕಿನಾ ಹಸುರು ಪುಕ್ಕದಾ
ವಿಹಗ ಬಾಣ ದಂಡು
ಆಕಾಶವೆಲ್ಲ ಗಿಲಿಗಿಚ್ಚಿಯಾಗೆ
ಹೋಯ್ತು ಗಿಣಿಯ ಹಿಂಡು:
ಐವತ್ತು ವರ್ಷ ಐದಾಗಿ ಹೋಗಿ
ಕಂಡು ಕಂಡು ಕಂಡು,
ಕವಿ ಬೆರಗಿ ಬಡಿದು, ಕುಲಪತಿಯು ಕೆಡೆದು,
ಹಸುಳೆತನದ ಬೆಂಡು
ತೇಲಿ ರಸಧಿಯಾ ಶಿಶುಸಮಾಧಿಯಲಿ
ಮಗ್ನ, ಮಧುವನುಂಡು!

೩೦-೯-೧೯೫೬ 

೯೯

ಆ ಚರಂಡಿಯ ನೆನೆವುದೇತಕೀ
ಮಲ್ಲಿಗೆಯ ಹೊದರೆಡೆಯೆ ನಿಂತು?
ಅಲ್ಲಿ ದುರ್ನಾತವಿರೆ ಇದನೂ
ಅದನೆ ಗೈದರೆ ಏನು ಬಂತು?

೧೬-೧೨-೧೯೫೬ 

೧೦೦

ಮರದ ಬುಡದ ಈ ರಾಕರಿಯಲ್ಲಿ
ದೇವಿಯ ಆವಿರ್ಭೂತಿಯೆ ತಾನು
ಉದ್ಭವಿಸಿದೆ ಹೂವಿನವೋಲ್: ಲಿಲ್ಲಿ!
ಅಂದಾ ಕಂಭವನೊಡೆದೈತಂದುದು ಅತಿಶಯವೆನು?

೧೭-೪-೧೯೫೭