ಇದು ಮಂತ್ರಗಳ ಮತ್ತು ಹಲವಾರು ಸನ್ನಡವಳಿಕೆ ಸಂಹಿತೆಗಳ ಒಂದು ಸಂಕಲನ. ಮಂತ್ರ ಎಂಬ ಪದ ತನ್ನ ಧ್ವನಿಶಕ್ತಿಯ ವಿಶಾಲಾರ್ಥದಲ್ಲಿ ಸ್ತೋತ್ರ ಪ್ರಾರ್ಥನೆ. ಹಾರೈಕೆ ಮೊದಲಾದ ಮಾನವೀಯ ಆಶಯಗಳನ್ನೆಲ್ಲ ಒಳಗೊಳ್ಳುತ್ತದೆ. ನಮ್ಮ ದೇಶದ ಋಷಿಗಳೂ ದಾರ್ಶನಿಕರೂ ಸಂತರೂ ರಚಿಸಿದ ಮಂತ್ರ. ಸ್ತೋತ್ರ. ಪ್ರಾರ್ಥನೆಗಳು ಇಲ್ಲಿವೆ. ಇದರೊಡನೆ ಗಂಡು ಹೆಣ್ಣುಗಳಿಗೆ ಮದುವೆ ಮಾಡಿಸುವ ಹಿರಿಯರು ಅವರಿಗೆ ಉಪದೇಶಿಸಬೇಕಾದ ಮಾರ್ಗದರ್ಶಕ ನಡವಳಿಕೆ ಸಂಹಿತೆಯೂ ಇದೆ. ತಮ್ಮ ಜೀವನವು ಮಂಗಳಮಯವಾಗಲೆಂದು ಎಲ್ಲರೂ ನಿತ್ಯವೂ ಈ ಮಂತ್ರಗಳನ್ನು ಧ್ಯಾನಿಸಿ ತಮ್ಮ ತಮ್ಮ ಜೀವನ ಸಂದರ್ಭಗಳಲ್ಲಿ ಅವುಗಳಿಂದ ಹೊಮ್ಮುವ ಆರ್ಥಗಳನ್ನು ಗ್ರಹಿಸಿ ಬದುಕಿನ ಸತ್ಯಾನ್ವೇಷಣೆಯ ಪಥದಲ್ಲಿ ಮುಂದುವರಿಯಬಹುದು. ಇವುಗಳಿಗೆ ಪೂರಕವಾಗಿರುವ ವಿವಾಹ ಸಂಹಿತೆ ಪ್ರತಿ ವಧೂವರರಿಗೂ ನಿರ್ದಿಷ್ಟ ಸಾಮಾಜಿಕ ಮೌಲ್ಯಗಳನ್ನು ಬೋಧಿಸುತ್ತದೆ.

ಮಂತ್ರ ಮಾಂಗಲ್ಯ ಎನ್ನುವುದು ಒಂದು ಪುಸ್ತಕದ, ಒಂದು ಸಂಕಲನದ ಹೆಸರು ಮಾತ್ರವಲ್ಲ. ಇದೊಂದು ವಿವಾಹ ವಿಧಾನ. ಸಹಸ್ರಾರು ವರ್ಷಗಳ ಕಾಲ ಯಾವ ಮೌಲ್ಯಗಳನ್ನು ಭಾರತೀಯರು ದೊಡ್ಡದು ಎಂದು ಭಾವಿಸಿ ಆರಾಧಿಸುತ್ತಾ ಬಂದಿದ್ದಾರೋ ಆ ಎಲ್ಲಕ್ಕೂ ಸಂಕೇತಗಳಾಗಿರುವ ಶಕ್ತಿಯನ್ನು ವಧೂವರರು ತಮ್ಮ ಬದುಕಿನ ಅಮೃತ ಮುಹೂರ್ತಲ್ಲಿ ಈ ಮಂತ್ರಗಳ ಮೂಲಕ. ವಿವಾಹ ಸಂಹಿತೆಯ ಪ್ರತಿಜ್ಞಾ ವಿಧಿಗಳ ಮುಖಾಂತರ ತಮ್ಮ ಚೇತನಕ್ಕೆ ಆಹ್ವಾನಿಸುತ್ತಾರೆ. ಈ ವಿವಾಹ ವಿಧಾನವು ಕ್ರಮೇಣ ವಧೂವರರ ಜೀವನ ವಿಧಾನವೂ ಆಗಬೇಕೆಂಬುದು ‘ಮಂತ್ರ ಮಾಂಗಲ್ಯ’ದ ಮೂಲ ಆಶಯ. ಆದ್ದರಿಂದಲೇ ಈ ಕ್ರಮದಲ್ಲಿ ಮದುವೆಯಾಗುವ ವಧೂವರರೂ ಅವರ ಮಾತಾಪಿತೃಗಳೂ, ಬಂಧುಮಿತ್ರರೂ ಕೆಲವು ಕನಿಷ್ಠ ಶಿಸ್ತನ್ನು ಕಡ್ಡಾಯವಾಗಿ ಪರಿಪಾಲಿಸಬೇಕು.

ಮಂತ್ರ ಮಾಂಗಲ್ಯ ಸರಳ ವಿವಾಹವಿಧಿಯೆಂದೇ ರೂಪಸಿರುವುದರಿಂದ ಈ ವಿವಾಹದ ಯಾವೊಂದು ಕಾರ್ಯಕ್ರಮವನ್ನೂ ಅದ್ದೂರಿಯಾಗಿ ನೆರವೇರಿಸಕೂಡದು. ಯಾವ ರೂಪದಿಂದಲೂ ಪ್ರತ್ಯಕ್ಷವಾಗಿ ಅಥವಾ ಪರೊಕ್ಷವಾಗಿ ವರದಕ್ಷಿಣೆಯನ್ನಾಗಲಿ. ವಧುದಕ್ಷಿಣೆಯನ್ನಾಗಲಿ ಯಾರು ಸ್ವೀಕರಿಸಕೂಡದು. ವಧೂವರರನ್ನು ಆತ್ಮಗೌರವವಿಲ್ಲದ ಮೃಗಗಳನ್ನಾಗಿ ಪರಿಗಣಿಸುವ ಈ ದುಡ್ಡಿನ ದಳ್ಳಾಳಿ ವ್ಯವಹಾರ ಮಂತ್ರಮಾಂಗಲ್ಯದಲ್ಲಿ ಸಂಪೂರ್ಣ ನಿಷೇಧಿಸಲಾಗಿದೆ. ಹೆಣ್ಣು ಭ್ರೂಣ ಹತ್ಯೆಯಿಂದ ಹಿಡಿದು ಮದುವೆ ಮಾಡಿಕೊಂಡ ಹೆಣ್ಣುಮಗಳನ್ನು ಬೆಂಕಿಹಚ್ಚಿ, ಸುಡುವ ಪರಮ ಪಾತಕಗಳವರೆಗೂ ಕಾರಣವಾಗಿರುವ ಈ ದುಡ್ಡಿನ ದಳ್ಳಾಳಿ ವ್ಯವಹಾರದಲ್ಲಿ ಭಾಗಿಗಳಾಗುವ ಹಿರಿಯರು ಮಂತ್ರೋಪದೇಶಕ್ಕೂ. ಪ್ರತಿಜ್ಞಾ ವಿಧಿ ಉಪದೇಶಕ್ಕೂ, ವಧೂವರರು ಮಂತ್ರೋಚ್ಚಾರಕ್ಕೂ, ಪ್ರತಿಜ್ಞೆ ತೆಗೆದುಕೊಳ್ಳಲೂ ಅನರ್ಹರಾಗಿರುತ್ತಾರೆ.

ಮಂತ್ರಮಾಂಗಲ್ಯ ವಿವಾಹವು ಗುರುಹಿರಿಯರ ಮತ್ತು ಬಂಧು ಬಾಂದವರ ಸಮ್ಮುಖದಲ್ಲಿ ನಡೆಯುವ ಪವಿತ್ರ ವಿಧಿಯಾದುದರಿಂದ ಎರಡೂ ಕಡೆಯಿಂದ ಒಟ್ಟು ಇನ್ನೂರು ಜನರನ್ನು ಮೀರದಂತೆ ಆಹ್ವಾನಿಸಬೇಕು. ಸಂಪ್ರದಾಯದಂತೆ ಇದ್ದಬದ್ದವರನ್ನೆಲ್ಲಾ ಆಹ್ವಾನಿಸಿ ದೊಂಬಿ ಎಬ್ಬಿಸುವುದು ಮಂತ್ರಮಾಂಗಲ್ಯದ ಪಾವಿತ್ರ್ಯವನ್ನೂ ಗಾಂಭೀರ್ಯವನ್ನೂ ಸಂಪೂರ್ಣ ನಾಶ ಮಾಡುತ್ತದೆ ಗಂಡನ ಕುಟುಂಬದವರೂ ಹೆಣ್ಣಿನ ಕುಟುಂಬದವರೂ ತಮ್ಮ ನಿಜವಾದ ಶ್ರೇಯಾಕಾಂಕ್ಷಿಗಳನ್ನು ಮಾತ್ರ ಕರೆದರೆ ಅದು ನೂರರ ಮಿತಿಯನ್ನು ಖಂಡಿತಮೀರುವುದಿಲ್ಲ.

ಮಂತ್ರಮಾಂಗಲ್ಯದ ಮದುವೆಯಲ್ಲಿ ಉಡುಗೊರೆಗಳು ನಿಷಿದ್ಧ. ಯಾರು ಯಾವಾಗ ಬೇಕಾದರೂ ವಿವಾಹದ ಸವಿನೆನಪಿಗೆ ವದೂವರರಿಗೆ ಉಡುಗೊರೆಗಳನ್ನು ಕೊಡಬಹುದು, ಅಥವಾ, ಅವರಿಂದ ತೆಗೆದುಕೊಳ್ಳಬಹುದು. ಆದರೆ ಮದುವೆ ಸಂದರ್ಭದಲ್ಲಿ, ವಿವಾಹವೇದಿಕೆಯ ಬಳಿ ಎಲ್ಲರೆದರು ತಮ್ಮ ತಮ್ಮ ಉಡುಗೊರೆಗಳನ್ನು ತಂದು ಗುಡ್ಡೆಹಾಕಿ ತಮ್ಮ ಶ್ರೀಮಂತಿಕೆ ಮತ್ತು ಔದಾರ್ಯಗಳ ಸಾರ್ವಜನಿಕ ಪ್ರದರ್ಶನ ಮಾಡಲು ಯಾರಿಗೂ ಅವಕಾಶ ಇರಲೇ ಕೂಡದು.

ಯಾವುದೇ ವಾದ್ಯ ಒಲಗ ತಮ್ಮಟೆ ಧ್ವನಿವರ್ಧಕ ಮುಂತಾದ ಪ್ರಚಾರ ಸಾಮಾಗ್ರಿಗಳನ್ನು ಬಳಸಬಾರದು. ಮಂತ್ರಮಾಂಗಲ್ಯವು ಮದುವೆಯನ್ನು ವಧೂವರರ ಮತ್ತು ಕುಟುಂಬದವರ ಅತ್ಯಂತ ಖಾಸಗಿ ಸಂದರ್ಭವೆಂದು ಪರಿಗಣಿಸುತ್ತದೆ. ಈ ಸಂದರ್ಭವು ಅಲ್ಲಿ ನೆರಿಯುವವರ ಆತ್ಮಾವಲೋಕನದ. ಅಂತಃಸಾಕ್ಷಿಯ ಸಂದರ್ಭ. ಆದ್ದರಿಂದಲೇ ಅದು ಪ್ರಶಾಂತವಾದ ಗಂಭೀರವಾದ ವಾತಾವರಣದಲ್ಲಿ ನಡೆಯಬೇಕು.

ಮಂತ್ರಮಾಂಗಲ್ಯ ವಿವಾಹಕ್ಕೆ ರಾಹುಕಾಲ, ಗುಳಿಕಕಾಲ, ಯಮಗಂಡಕಾಲ, ಯಾವೂ ಇಲ್ಲ. ಇಡೀ ಮನುಷ್ಯನ ಜೀವಿತಕಾಲವೇ ಬದುಕಿನ ಸಾರ್ಥ್ಯಕ್ಯಕ್ಕಾಗಿ ಒದಗಿರುವ ಸುಮುಹೂರ್ತವೆಂದು ಪರಿಗಣಿಸುವ ಮಂತ್ರಮಾಂಗಲ್ಯವು ಅದರೊಳಗೂ ಸುಮುಹೂರ್ತ ಹುಡುಕುವುದನ್ನು ತಿರಸ್ಕರಿಸುತ್ತದೆ ಆದ್ದರಿಂದ ವಧೂವರರಿಗೆ ಸಂಬಂದಪಟ್ಟ ಗುರುಹಿರಿಯರು ಸೇರಿ ತಮ್ಮೆಲ್ಲರಿಗೂ ಅನುಕೂಲವಾದ ದಿನಾಂಕ ಮತ್ತು ಸಮಯವನ್ನು ಪರಿಗಣಿಸಿ ಕಾಲ ನಿಶ್ಚಯ ಮಾಡಬೇಕು.

ಮಂತ್ರಮಾಂಗಲ್ಯ ಮದುವೆಯಲ್ಲಿ ಈ ಪುಸ್ತಕದಲ್ಲಿ ಸೂಚಿಸಿರುವ ಮಂತ್ರ ಮತ್ತು ಪ್ರತಿಜ್ಞಾ ವಿಧಿಗಳ ಉಪದೇಶವಲ್ಲದೆ ಇನ್ನಾವುದೇ ಶಾಸ್ತ್ರಚಾರಗಳನ್ನಾಗಲೀ. ಜೋಯಿಸರಿಂದ ಜಾತಕಾದಿಗಳನ್ನು ನೋಡಿಸುವುದೇ ಆಗಲೀ ನಿಷಿದ್ದ. ಜಾತಿ ಪದ್ಧತಿ, ಸ್ರೀ ಅಸಮಾನತೆ, ಅಸ್ಪರ್ಷತೆ ಮೊದಲಾದ ಅನಿಷ್ಟಗಳಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣವಾಗಿರುವ ಈ ಶಾಸ್ತ್ರಾಚಾರಗಳಿಂದ ಭಾರತೀಯರನ್ನು ವಿಮುಕ್ತಗೊಳಿಸುವುದೇ ಮಂತ್ರಮಾಂಗಲ್ಯದ ಮೂಲ ಉದ್ದೇಶ. ಇಲ್ಲಿ ಯಾವ ವೃತ್ತಿ ಪರೋಹಿತನಿಗೂ ಪ್ರವೇಶವಿಲ್ಲ. ಓದು ಬರಹ ಕಲಿತ, ಈ ಮಂತ್ರಗಳನ್ನು ಓದಿ ಅರ್ಥಮಾಡಿಕೊಳ್ಳಬಲ್ಲ ವಧೂವರರ ತಂದೆ ತಾಯಿಗಳಾಗಲೀ ಗುರುಹಿರಿಯರಾಗಲೀ ಯಾರಾದರೊಬ್ಬರು ಮಂತ್ರಮಾಂಗಲ್ಯದ ಮಂತ್ರಗಳನ್ನೂ, ವಿವಾಹ ಸಂಹಿತೆಯನ್ನೂ ವಧೂವರರಿಗೆ ಬೋಧಿಸಬಹುದು. ಮಂತ್ರಗಳನ್ನು ಮತ್ತು ಪ್ರತಿಜ್ಞೆಗಳನ್ನು ಸ್ಪಷ್ಟವಾಗಿ ಹೇಳಿ ಅದನ್ನು ವಧೂವರರ ಕೈಲೂ ಹೇಳಿಸಬೇಕು. ಅವರು ಮಂತ್ರಗಳನ್ನು ಹೇಳಿದನಂತರ ಅವುಗಳ ಕೆಳಗೆ ಕೊಟ್ಟಿರುವ ಕನ್ನಡದ ಅರ್ಥವನ್ನು ಉಪದೇಶಿಸುವವರು ಎಲ್ಲರಿಗೂ ಕೇಳುವಂತೆ ವಿವರಿಸಬೇಕು. (ಇದನ್ನು ವಧೂವರರು ಪುನರುಚ್ಚರಿಸುವ ಅಗತ್ಯವಿಲ್ಲ) ಇದಾದನಂತರ ವಧೂವರರಿಗೆ ಅವರ ಮುಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಪ್ರತಜ್ಞಾ ವಿಧಿಗಳನ್ನು ಬೋಧಿಸಬೇಕು. ಹಿರಿಯರು ಬೋಧಿಸಿನಂತರ ವಧೂವರರು ಅವನ್ನು ಪನರುಚ್ಚರಿಸಿ ಪ್ರತಿಜ್ಞಾಸ್ವೀಕಾರ ಮಾಡಬೇಕು. ಪ್ರತಿಜ್ಞಾ ಸ್ಚೀಕಾರದನಂತರ ವರನು ವಿವಾಹ ವೇದಿಕೆಯ ಮೇಲೆ ಇಟ್ಟಿರುವ ಮಹಾ ಪುರುಷರ ಪೋಟೋಗಳಿಗೂ ವಧೂವರರ ತಂದೆ ತಾಯಿಗಳಿಗೂ. ಅಲ್ಲಿ ನೆರೆದಿರುವ ಗುರುಹಿರಿಯರಿಗೂ, ಕೊನೆಯದಾಗಿ ವೇದಿಕೆ ಮೇಲೆ ತಟ್ಟೆಯಲ್ಲಿಟ್ಟಿರುವ ಮಾಂಗಲ್ಯಕ್ಕೂ ನಮಸ್ಕರಿಸಿ ವಧುವಿಗೆ ಮಾಂಗಲ್ಯ ಕಟ್ಟಬೇಕು.

ಮಂತ್ರಮಾಂಗಲ್ಯ ವಿವಾಹಕ್ಕೆ ಬೇಕಾದ ಏರ್ಪಾಡುಗಳು:

ಮಂತ್ರಮಾಂಗಲ್ಯ ಪ್ರಕಾರದ ಮದುವೆಗೆ ಒಂದು ಚಿಕ್ಕ ವೇದಿಕೆ ಬೇಕು. ವೇದಿಕೆ ಎಂದರೆ ಮದುವೆ ಮಂಟಪವೇನೂ ಅಲ್ಲ. ಇನ್ನೂರು ಜನರ ಸಮ್ಮುಖದಲ್ಲಿ ನಡೆಯುವ ಸಮಾರಂಭವಾದ್ದರಿಂದ ಅಷ್ಟು ಜನರಿಗೂ ಕಾಣುವಂಥ ಒಂದು ಎತ್ತರದ ಜಾಗ. ಐದಾರು ಬೆಂಚುಗಳನ್ನು ಒಟ್ಟಿಗೆ ಇಟ್ಟು ರಚಿಸುವ ವೇದಿಕೆಯಾದರೂ ಆದೀತು. ಈ ಯಾವ ಅನುಕೂಲಗಳಿಲ್ಲದಿದ್ದರೆ ಊರೊಳಗಿನ ಎತ್ತರದ ಅರಳಿಕಟ್ಟೆಯಾದರೂ ಸರಿ. ಅದರ ಮೇಲೆ ಈ ಪವಿತ್ರ ಸಮಾರಂಭಕ್ಕೆ ಆಧ್ಯಾತ್ಮಿಕ ಸಾಕ್ಷಿಗಳಾಗಿ ನಾಲ್ವರು ಮಹಾಪುರುಷರ ಫೋಟೋಗಳನ್ನು ಇಡಬೇಕು. ಈಗ ಪೌರಾಣಿಕ ಆದರ್ಶ ದಂಪತಿಗಳಾದ ಶ್ರೀರಾಮಚಂದ್ರ ಸೀತಾದೇವಿಯರ ಮತ್ತು ಅಧುನಿಕ ಆದರ್ಶದಂಪತಿಗಳೆಂದು ಪರಿಗಣಿಸಿರುವ ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಮಹಾಮಾತೆ ಶಾರದಾದೇವಿಯರ ಫೋಟೋಗಳನ್ನು ಇಡಲಾಗುತ್ತಿದೆ. ಇದರೊಡನೆ ನೀವು ಇನ್ನಾವುದೇ ದಂಪತಿಗಳನ್ನು ಆದರ್ಶವೆಂದು ಪರಿಗಣಿಸಿದಲ್ಲಿ ಅದನ್ನು ಇಡಬಹುದು. ಅದರ ಮುಂದೆ ಹಣ್ಣು ಹೂಗಳಿರುವ ತಟ್ಟೆಯಲ್ಲಿ, ವಧು ಧರಿಸುವ ಮಂತ್ರಮಾಂಗಲ್ಯವನ್ನಿಟ್ಟು ಆ ಮಹಾ ಪರುಷರ ಕೃಪಾಶೀರ್ವಾದಕ್ಕಾಗಿ ಅದನ್ನು ಅವರಿಗೆ ಸಮರ್ಪಿಸಿ ಎರಡು ಹಣತೆಗಳನ್ನು ಹಚ್ಚಿ ದೀಪ ಬೆಳಗಿಸಲಾಗುತ್ತದೆ.

ವೇದಿಕೆಯ ಬಲಭಾಗದಲ್ಲಿ ಮೂರು ಕುರ್ಚಿಗಳನ್ನೂ ಎಡಭಾಗದಲ್ಲಿ ಮೂರು ಕುರ್ಚಿಗಳನ್ನು ಇಡಬೇಕು. ಬಲಗಡೆ ಒಂದು ಕುರ್ಚಿಗಳನ್ನು ವಧುವೂ ಮಿಕ್ಕೆರಡರಲ್ಲಿ ಆಕೆಯ ತಂದೆತಾಯಿಗಳೂ. ಅವರಿಲ್ಲದಿದ್ದರೆ ಅವರಿಗೆ ಪರ್ಯಾಯವಾಗಿ ಇನ್ನು ಯಾವ ಹಿರಿಯರಿರುತ್ತಾರೋ ಅವರೂ ಕುಳಿತುಕೊಳಬೇಕು. ಇದೇ ಪ್ರಕಾರವಾಗಿ ಎಡಗಡೆ ಕುರ್ಚಿಯಲ್ಲಿ ವರನನ್ನೂ ವರನ ಕಡೆಯವರನ್ನೂ ಕುಳ್ಳಿರಿಸಬೇಕು. ತದನಂತರ ಮಂತ್ರ ಮತ್ತು ಪ್ರತಿಜ್ಞಾವಿಧಿ ಉಪದೇಶ ಮಾಡುವ ಹಿರಿಯರು ವೇದಿಕೆಯ ಮೇಲೆ ಬಂದು ಮಂತ್ರ ಮಾಂಗಲ್ಯದ ಎರಡು ಪುಸ್ತಕಗಳನ್ನು ವಧೂವರರಿಗೆ ಕೊಡಬೇಕು. ಅವರು ಮಂತ್ರೋಪದೇಶ ಆರಂಭಿಸುವ ಮೊದಲು ಇಂಥ ಮದುವೆಯ ಧ್ಯೇಯೋದ್ದೇಶಗಳನ್ನು ಸಮಾರಂಭದಲ್ಲಿ ನೆರೆದಿರುವ ಸಮುದಾಯಕ್ಕೆ ವಿವರಿಸುವುದಾದರೆ ವಿವರಿಸಬಹುದು. ಆನಂತರ ಅವರು ವರನಕೈಯ್ಯಲ್ಲಿರುವ ಪುಸ್ತಕ ತೆಗೆದುಕೊಂಡು ಮಂತ್ರ ಮತ್ತು ಪ್ರತಿಜ್ಞಾವಿಧಿಗಳ ಉಪದೇಶವನ್ನು ಪ್ರಾರಂಭಿಸಬಹುದ. ಅವರು ಉಪದೇಶಿಸುವ ಸಮಯದಲ್ಲಿ ವದೂವರರಿಬ್ಬರೂ ಎದ್ದು ಒಟ್ಟಿಗೇ ನಿಂತು ಒಂದೇ ಪುಸ್ತಕವನ್ನೂ ಇಬ್ಬರೂ ನೋಡಿಕೊಳ್ಳುತ್ತಾ ಅವರ ಹೇಳಿಕೊಟ್ಟಿದ್ದನ್ನು ಅಲ್ಲಿ ನೆರೆದಿರುವ ಗುರುಹಿರಿಯರಿಗೂ ಬಂಧುಬಾಂಧವರಿಗೂ ಸ್ಪಷ್ಟವಾಗಿ ಕೇಳುವಂತೆ ಪುನರುಚ್ಚರಿಸಬೇಕು. ಮಂತ್ರ ಮತ್ತು ಪ್ರತಿಜ್ಞಾವಿಧಿ ಪೂರ್ಣವಾದ ಅನಂತರ ವರನೂ ವಧುವೂ ಮೊದಲೇ ವಿವರಿಸಿದಂತೆ ಎಲ್ಲರಿಗೂ ನಮಸ್ಕರಿಸಿ ಮಾಂಗಲ್ಯಧಾರಣಿ ಮಾಡಬಹುದು.

ಆ ಯುವಕ ಯುವತಿಯರು ಈ ಪ್ರಕಾರ ಅಲ್ಲಿ ನೆರೆದಿರುವ ಗುರುಹಿರಿಯರ ಸಮ್ಮುಖದಲ್ಲಿ ದಂಪತಿಗಳಾದನಂತರ ಈ ಪುಸ್ತಕದ ಕೊನೆಯಲ್ಲಿ ಪ್ರತಿಜ್ಞಾವಿಧಿಗಳನಂತರ ಕೊಟ್ಟಿರುವ ಕಾಲಮ್ಮುಗಳಲ್ಲಿ ರುಜು ಮಾಡಬೇಕು. ಆಮೇಲೆ ವಧೂವರರ ತಂದೆತಾಯಿಗಳು ಅಥವಾ ಅದಕ್ಕೆ ಪರ್ಯಾಯವಾಗಿ ಉಪಸ್ಥಿತರಿರುವ ಹಿರಿಯರು ಅವರಿಗೆಂದಿರುವ ಕಾಲಮ್ಮುಗಳಲ್ಲಿ ರುಜು ಮಾಡಬೇಕು. ಸಾಕ್ಷೀಗಳಾಗಿ ಅಲ್ಲಿ ನೆರಿದಿರುವ ವಧೂವರರ ಗುರುಹಿರಿಯರೂ ಶ್ರೇಯಾಕಾಂಕ್ಷಿಗಳೂ ಅವರಿಗೆಂದಿರುವ ಕಾಲಮ್ಮುಗಳಲ್ಲಿ ಸಹಿ ಮಾಡಬೇಕು. ಈ ಪ್ರಕಾರವಾಗಿ ಅಷ್ಟು ಜನರೂ ರುಜು ಮಾಡಿರುವ ಮಂತ್ರಮಾಂಗಲ್ಯ ಪುಸ್ತಕಗಳಲ್ಲಿ ಒಂದನ್ನು ವಧುವಿಗೂ ಒಂದನ್ನು ವರನಿಗೂ ಕೊಡತಕ್ಕದ್ದು. ವಧೂವರರಿಬ್ಬರೂ ಈ ಎರಡು ಪವಿತ್ರ ದಾಖಲೆಗಳನ್ನು ತಮ್ಮೊಡನೆ ಅಜೀವಪರ್ಯಂತ ಜೊಪಾನವಾಗಿ ಇಟ್ಟುಕೊಳ್ಳತಕ್ಕದ್ದು.

ಮಂತ್ರಮಾಂಗಲ್ಯವು ಭಾರತರಾಜ್ಯಾಂಗದ ಕಾನೂನುಗಳಿಗೆ ಸಂಪೂರ್ಣ ಬದ್ಧವಾದುದು ಮತ್ತು ಸಂವಿಧಾನ ದತ್ತವಾದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಗುಣವಾದುದು. ಯಾರು ಯಾರನ್ನು ಯಾವುದೇ ವಿಧಾನದಲ್ಲಿ ಮದುವೆಯಾಗುವುದಾದರೂ ವಧೂವರರಿಬ್ಬರೂ ಪ್ರಾಪ್ತವಯಸ್ಕರಾಗಿರಬೇಕು. ಅಪ್ರಾಪ್ತ ವಯಸ್ಕರ ಮದುವೆ ಕೂಡದು.

ಅಲ್ಲದೆ ಯಾರು ಯಾವುದೇ ವಿಧಾನದಲ್ಲಿ ಮದುವೆಯಾದರೂ ಅದನ್ನು ರಿಜಿಸ್ಟರ್ ಮಾಡಿಸಬೇಕಾದುದು ಕಡ್ಡಾಯ ಮಾಡಬೇಕೆನ್ನುವುದು ನಮ್ಮ ಧೋರಣೆ. ಇದಕ್ಕೆ ಮಂತ್ರಮಾಂಗಲ್ಯವೂ ಹೊರತಾದುದಲ್ಲ. ನಮ್ಮ ಸಾಮಾಜಿಕ ಸನ್ನಿವೇಶದಲ್ಲಿ ಸ್ತ್ರೀಯರು ಅನೇಕವಿಧವಾದ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾದುದರಿಂದ. ಮಂತ್ರಮಾಂಗಲ್ಯವು ಸಂಪೂರ್ಣ ಸ್ತ್ರೀ ಸಮಾನತೆಯನ್ನು ಬೋಧಿಸಿದರೂ ಅದು ಭಾರತೀಯ ಸಮಾಜದಲ್ಲಿ ಸಂಪೂರ್ಣ ಆಚರಣೆಗೆ ಬರುವವರೆಗೂ ವಧೂವರರು ತಮ್ಮ ವಿವಾಹವನ್ನು ಸಬ್‌ ರಿಜಿಸ್ಟ್ರಾರ್ ಆಫೀಸಿನಲ್ಲಿ ನೊಂದಾಯಿಸುವುದು ಕಡ್ಡಾಯ. ವಧೂವರರು ತಮ್ಮ ವಿವಾಹ ಸಂದರ್ಭದ ಸಂತೋಷದಲ್ಲಿ ಈ ಕರ್ತವ್ಯವನ್ನು ಮರೆಯಬಾರದು. ಅದಕ್ಕಾಗಿಯೇ ತಮಗೆ ಕೊಡುವ ಗುರುಹಿರಿಯರ ಸಹಿ ಇರುವ ಮಂತ್ರಮಾಂಗಲ್ಯ ದಾಖಲೆಯನ್ನು ಜೋಪಾನವಾಗಿ ಇಟ್ಟುಕೊಳ್ಳತಕ್ಕದ್ದು.