ಶ್ರೀಯುತ ……………………………………………………. ಎಂಬ ವರನೇ
ಶ್ರೀಮತಿ ……………………………………………………. ಎಂಬ ವಧುವೇ

ನಿಮ್ಮಿಬ್ಬರ ವಿವಾಹದ ಸಂಧರ್ಭದಲ್ಲಿ ಕೆಲವು
ಮೂಲಭೂತ ಸ್ವಾತಂತ್ರ್ಯದ ಸಂದೇಶಗಳನ್ನು ತಿಳಿಸಿದ್ದೇವೆ.
ದಯವಿಟ್ಟು ನೀವಿಬ್ಬರೂ ಗಮನವಿಟ್ಟು ಕೇಳಿಕೊಳ್ಳಿರಿ.

೧. ಈ ದಿನ ಇಲ್ಲಿ ಈ ರೀತಿ ಮದುವೆಯಗುವುದರ ಮೂಲಕ ನೀವು ನಿಮ್ಮ ಎಲ್ಲ ಮಾನಸಿಕ ಮತ್ತು ಆಧ್ಯಾತ್ಮಿಕ ಸಂಕೋಲೆ ಮತ್ತು ದಾಸ್ಯಗಳಿಂದ ವಿಮುಕ್ತರಾಗಿ ಸ್ವತಂತ್ರರಾಗುತ್ತಿದ್ದೀರಿ.

೨. ನೀವು ಇನ್ನು ಈ ಭೂಮಂಡಲದ ಯಾವುದೇ ಜಾತಿ ಮತ್ತು ಜನಾಂಗಗಳಿಗಿಂತ ಮೇಲಾದವರಲ್ಲ.

೩. ಹಾಗೆಯೇ ಯಾವುದೇ ಜಾತಿ ಮತ್ತು ಜನಾಂಗಗಳಿಗಿಂತ ಕೀಳಾದವರೂ ಅಲ್ಲ.

೪. ನಿಮ್ಮನ್ನು ಇಂದು ಮನುಷ್ಯ ಸಮಾಜದ ಎಲ್ಲ ಕೃತಕ ಜಾತಿಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ.

೫. ನಿಮ್ಮನ್ನು ಇಂದು ಎಲ್ಲಾ ಸಂಕಚಿತ ಮತಧರ್ಮಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ.

೬. ನಿಮ್ಮನ್ನು ಎಲ್ಲ ಆಚಾರ ಸಂಪ್ರದಾಯಗಳಿಂದ ಮುಕ್ತ್ರನ್ನಾಗಿ ಮಾಡಿದ್ದೇವೆ.

೭. ನಿಮ್ಮನ್ನು ಎಲ್ಲಾ ಅಸತ್ಯ ಮತ್ತು ಮೂಢನಂಬಿಕೆಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ.

೮. ಮನುಷ್ಯನ ಜೀವಿತ ಕಾಲವೇ ಒಂದು ಸುಮುಹೂರ್ತ. ಇದರೊಳಗೆ ನೀನು ಬೇರೆ ಸುಮುಹೂರ್ತಗಳನ್ನೂ, ರಾಹುಕಾಲ, ಗುಳಿಕಕಾಲಗಳನ್ನೂ ನೋಡುವ ಅಗತ್ಯವಿಲ್ಲ. ಕಾಲವು ನಿರ್ಗುಣ.

೯. ಎಂದೂ ಸಂಪಾದಿಸಲು, ಸೃಷ್ಟಿಸಲು, ಕೂಡಿಡಲು ಸಾಧ್ಯವೇ ಇಲ್ಲದ. ಮನುಷ್ಯನ ಜೀವಿತಕಾಲದ ಪ್ರತಿ ಕ್ಷಣವೂ ಅತ್ಯಮೂಲ್ಯ. ಯಾರು ಈ ಸತ್ಯವನ್ನು ಅರಯುತ್ತಾರೋ ಅವರು ತಮ್ಮ ಕರ್ತವ್ಯ ಮತ್ತು ನಡವಳಿಕೆಗಳಿಂದ ಕಾಲವನ್ನು ಒಳ್ಳೆಯ ಅಥವಾ ಕೆಟ್ಟ ಕಾಲವನ್ನಾಗಿ ಪರಿವರ್ತಿಸಬಲ್ಲರು.

೧೦. ನೀವು ಯಾವುದೇ ಮನೆದೇವರು ಅಥವಾ ಕುಲದೇವರುಗಳ ಅಡಿಯಾಳಾಗಿ ಬದುಕಬೇಕಾಗಿಲ್ಲ ಮನುಷ್ಯ ಸಮಾಜದ ಮಾನವೀಯ ಮೌಲ್ಯಗಳೇ ಮನುಷ್ಯನ ಮೊದಲನೆಯ ಹಾಗೂ ಕೊನೆಯ ದೇವರು.

೧೧. ಮಾನವರೆಲ್ಲರೂ ಸಮಾನರು. ಪುರುಷನು ಸ್ತ್ರೀಗಿಂತ ಮೇಲು ಎಂದು ಹೇಳುವ ಎಲ್ಲ ಧರ್ಮಗಳನ್ನೂ, ಎಲ್ಲ ಸಂಪ್ರದಾಯಗಳನ್ನೂ ನೀವು ಇಂದು ತಿರಸ್ಕರಿಸಿದ್ದೀರಿ.

೧೨. ಹೆಂಡತಿಯಾಗಲೀ, ಗಂಡನಾಗಲೀ ಪರಸ್ಪರ ಆಧೀನರೂ ಅಲ್ಲ: ಆಜ್ಞಾನುವರ್ತಿಯೂ ಅಲ್ಲ. ಹೆಂಡತಿಯೂ ಗಂಡನಷ್ಟೇ ಸ್ವತಂತ್ರಳೂ ಸಮಾನತೆಯುಳ್ಳವಳೂ ಆಗಿರುತ್ತಾಳೆ.

೧೩. ಗಂಡ-ಹೆಂಡಿರನ್ನು ಒಟ್ಟಿಗೇ ಬದುಕುವಂತೆ ಮಾಡುವ ಸಾಧನ ಪ್ರೀತಿಯೊಂದೇ. ಒಬ್ಬರನ್ನೊಬ್ಬರು ಪ್ರೀತಿಸದವರು ತಾಳಿ ಕಟ್ಟಿಕೊಂಡರೂ ವ್ಯರ್ಥ, ಅಗ್ನಿಯನ್ನು ಸುತ್ತಿದರೂ ವ್ಯರ್ಥ, ಯಾವ ಯಾವ  ಶಾಸ್ತ್ರಾಚಾರದ ಪ್ರಕಾರ ಮದುವೆಯಾದರೂ ವ್ಯರ್ಥ.

೧೪. ದೇವರ ಬಗ್ಗೆ ಎಂದೂ ಸುಳ್ಳು ಹೇಳಕೂಡದು. ನಿಮ್ಮ ಅನುಭವ, ನಿಮಗೆ ದೇವರು ಇಲ್ಲವೆಂದು ತಿಳಿಸಿದರೆ ದೇವರು ಇಲ್ಲವೆಂದು ಹೇಳಿ.

೧೫. ನಿಮ್ಮ ಅನುಭವ, ನಿಮಗೆ ದೇವರು ಇದ್ದಾನೆಂದು ತಿಳಿಸಿದರೆ ದೇವರು ಇದ್ದಾನೆಂದು ಹೇಳಿ.

೧೬. ನಿಮ್ಮ ಅನುಭವ, ದೇವರು ಇದ್ದಾನೆಯೋ ಇಲ್ಲವೋ ತಿಳಿಯದೆಂದು ತಿಳಿದರೆ. ದೇವರು ಇದ್ದಾನೆಯೋ ಇಲ್ಲವೋ ತಿಳಿಯದೆಂದು ಹೇಳಿ.

೧೭. ನಮ್ಮ ಅನುಭವವನ್ನು ಸುಳ್ಳು ಹೇಳದೆ ಒಪ್ಪಿಕೊಳ್ಳುವುದು, ನಿರ್ಭೀತಿಯಿಂದ ವಾಸ್ತವ ಸ್ಥಿತಿಯನ್ನು ನೋಡುವುದು. ಸತ್ಯಾನ್ವೇಷಣೆಯ ಮೊದಲನೆಯ ಹಂತ, ಜ್ಞಾನ ಯೋಗದ ಮೊದಲ ಪಾಠ

೧೮. ಪರವಂಚನೆ ಮತ್ತು ಆತ್ಮವಂಚನೆ ಮಾಡಿಕೊಳ್ಳುವವನಿಗೆ ತಮಸ್ಸಿನಿಂದಲೂ. ಆಜ್ಞಾನದಿಂದಲೂ ವಿಮುಕ್ತಿಯೇ ಇಲ್ಲ.

೧೯. ದೇವರ ಹೆಸರಿನಲ್ಲಿ ಸುಳ್ಳು ಹೇಳುವ ಮಠಾಧಿಪತಿಗಳನ್ನು ಆಚಾರ್ಯರನ್ನೂ ಜಗದ್ಗುರುಗಳನ್ನೂ ತಿರಸ್ಕರಿಸಿರಿ.

೨೦. ದೇವರ ಹೆಸರಿನಲ್ಲಿ ಧನಾರ್ಜನೆ ಮಾಡುವ ತೀರ್ಥಕ್ಷೇತ್ರಗಳನ್ನೂ, ದೇವಸ್ಥಾನಗಳನ್ನೂ ತಿರಸ್ಕರಿಸಿರಿ. ದೇವರ ಹೆಸರಿನಲ್ಲಿ ದರೋಡೆ ಮಾಡುವ ಯಾತ್ರಾಸ್ಥಳಗಳನ್ನೂ ತಿರಸ್ಕರಿಸಿರಿ.

ವರದಕ್ಷಿಣೆ ಅಥವಾ ವಧುದಕ್ಷಿಣೆ ವ್ಯವಹಾರಗಳಿಗೆ ಒಳಗಾಗದೆ, ನೀವು ನಿಮ್ಮ ಸ್ವಂತ ಪ್ರಯತ್ನದಿಂದ ನಿಮ್ಮ ತಂದೆ ತಾಯಿಗಳಿಗೆ ಯಾವ ರೀತಿಯ ಆರ್ಥಿಕ ಹೊರೆಯಾಗದಂತೆ ವಿವಾಹ ಮಾಡಿಕೊಳ್ಳುತಿದ್ದೀರಿ.

ಎಲ್ಲ ಮತಧರ್ಮ, ಕಂದಾಚಾರ, ಆಜ್ಞಾನಗಳಿಂದ ವಿಮುಕ್ತರಾಗಿರುವ ವಧೂವರರೇ, ಮಾನವ ಕೋಟಿಯನ್ನು ನಿಮ್ಮಂತೆಯೇ ವಿಮುಕ್ತರನ್ನಾಗಿ ಮಾಡುವ ಪವಿತ್ರ  ಕರ್ತವ್ಯವನ್ನು ನೀವೂ ಮಾಡಿರಿ. ಇನ್ನು ಯಾವುದೇ ಧರ್ಮಕ್ಕೂ ಸೇರುವ ಅಗತ್ಯವಿಲ್ಲ. ಯಾವುದೇ ಮತಕ್ಕೂ ಸೇರುವ  ಅಗತ್ಯವಿಲ್ಲ. ಯಾವುದೇ ಶಾಸ್ತ್ರಾಚಾರವನ್ನೂ ಅನುಸರಿಸಬೇಕಾದ ಅಗತ್ಯವಿಲ್ಲ. ಮೇಲೆ ಬೋಧಿಸಿರುವ ಪ್ರತಿಜ್ಞಾವಿಧಿಗಳೇ ನಿಮ್ಮ ಜೀವನದ ದಾರಿದೀಪವಾಗಲಿ. ಮೌಢ್ಯ, ಆಜ್ಞಾನ, ಅಂಧಕಾರಗಳ ವಿರುದ್ಧ ಭಾರತೀಯರಾದ ನಾವೆಲ್ಲ ಹೂಡಿರುವ ಈ ಮಹಾ ಹೋರಾಟದಲ್ಲಿ ನೀವೂ ಭಾಗಿಗಳಾಗಬೇಕೆಂದು ನಾವು ವಿನಂತಿಸಿಕೊಳ್ಳುತ್ತೇವೆ. ನೀವು ಇಲ್ಲಿ ಈ ದಿನದಿಂದ ದಂಪತಿಗಳೆಂದು ನಾವು ಘೋಷಿಸುತ್ತೇವೆ.

ವರನ ಸಹಿ                                              ವಧುವಿನ ಸಹಿ

ಸಾಕ್ಷಿಗಳು:

ವರನ ತಂದೆ-ತಾಯಿ                                    ವಧುವಿನ ತಂದೆ- ತಾಯಿ

ಬಂಧು, ಬಳಗ, ಸ್ನೇಹಿತರು:

 

ಶ್ರೀ ಕುವೆಂಪು ಅವರು ತಮ್ಮ ಪುತ್ರ ಶ್ರೀ ಪೂರ್ಣಚಂದ್ರ ತೇಜಸ್ವಿ ಅವರ ವಿವಾಹ ಸಂದರ್ಭದಲ್ಲಿ ಸ್ವಹಸ್ತ್ಷಾಕರದಲ್ಲಿ ಬರೆದ ಮದುವೆ ಪತ್ರವನ್ನು ಮಂತ್ರಮಾಂಗಲ್ಯ ವಿಧಾನದಲ್ಲಿ ಮದುವೆಯಾಗ ಬಯಸುವವರಿಗೆ ಮಾದರಿಗೆಂದು ಇಲ್ಲಿ ಕೊಟ್ಟಿದ್ದೇವೆ. ಇದು ಮದುವೆ ನಡೆಯುವುದನ್ನು ಎಲ್ಲರಿಗೂ ತಿಳಿಸುವ ಪತ್ರವೇ ಹೊರತು ಮದುವೆಗೆ ಆಮಂತ್ರಣ ಪತ್ರ ಅಲ್ಲ. ತಮ್ಮ ಹಿತೈಷಿಗಳಿಗೂ ಗುರುಹಿರಿಯರಿಗೂ ಅವರು ಅನುಕೂಲವಿರಾಮ ದೊರೆತಾಗ ಬಂದು ವಧೂವರರ ಆತಿಥ್ಯ ಸ್ವೀಕರಿಸಿ ಅವರನ್ನು ಆಶೀರ್ವದಿಸಿ ಎಂದು ಹೇಳಿದ್ದಾರೆಯೇ ಹೊರತು ಎಲ್ಲರಿಗೂ ಮದುವೆಗೆ ಬನ್ನಿ ಎಂದು ಆಮಂತ್ರಿಸಿಲ್ಲ ಎಂಬುದನ್ನು ಗಮನಿಸಿ. ತಾವೂ ಸಹ ಇದೇ ವಿಧಾನವನ್ನನುಸರಿಸಿ ಮದುವೆ ಸಂದರ್ಭದಲ್ಲಿ ಅನವಶ್ಯಕ ಜನಜಂಗಳಿಯನ್ನು ನಿವಾರಿಸಬಹುದು ಮತ್ತು ಬಹುಪಾಲು ಸ್ನೇಹಿತರನ್ನು ಅವರ ಮತ್ತು ನಿಮ್ಮ ಅನುಕೂಲ ವಿರಾಮವನ್ನವಲಂಬಿಸಿ ನಿಧಾನವಾಗಿ ಕರೆದು ಸತ್ಕರಿಸಬಹುದು.

ಕೆಲವು ಸೂಚನೆ ಹಾಗೂ ಮನವಿಗಳು

(ಈ ಕೆಳಕಂಡ ಕೆಲವು ಸೂಚನೆಗಳು ಯಾವುವೂ ಕಡ್ಡಾಯ ನಿಬಂಧನೆಗಳಲ್ಲ. ಮಂತ್ರ ಮಾಂಗಲ್ಯದ ಪ್ರಕಾರ ಮದುವೆಯಾದ ನಿಮ್ಮ ವೈಯಕ್ತಿಕ ಬದುಕಿನ ಸುಧಾರಣೆಯೊಂದಿಗೆ ಭಾರತದ ಸಾಮಾಜಿಕ ಸ್ಥಿತಿಗಳಿಗಳೂ ಬದಲಾಗಲೆಂಬ ಸದಾಶಯದಿಂದ ಈ ಕೆಳಗಿನ ಸೂಚನೆಗಳನ್ನು ಪಾಲಿಸಲು ಪ್ರಯತ್ನಿಸಿ.)

ಸಾಂಪ್ರದಾಯಕ ಆಡಂಬರದ ವಿವಾಹಗಳನ್ನೂ ವರದಕ್ಷಿಣೆಯ ದಳ್ಳಾಳಿ ವಿವಾಹಗಳನ್ನೂ ಪ್ರೋತ್ಸಾಹಿಸದಿರಲು ಪ್ರಯತ್ನಿಸಿ, ಪ್ರತಿಭಟಿಸಿ ಹೋರಾಡಲು ಸಾಧ್ಯವಾಗದಿದ್ದರೂ ಕೊನೆಯಪಕ್ಷ ಅದರಲ್ಲಿ ಭಾಗಿಗಳಾಗದೆ ಉಳಿಯಲು ಪ್ರಯತ್ನಿಸಿ, ಮಂತ್ರಮಾಂಗಲ್ಯದ ಕರ್ತೃಗಳಾದ ಶ್ರೀಕುವೆಂಪು ಇಂಥ ವಿವಾಹಗಳಲ್ಲಿ ಎಂದೂ ಭಾಗಿಗಳಾಗಲಿಲ್ಲ.

ಮದುವೆ ಸಮಾರಂಭಗಳಲ್ಲಿ ಕೊಡುವ ಫಲತಾಂಬೂಲಗಳಿಗೆ ಬದಲು ಅನುಕೂಲವಿದ್ದವರು ಅತಿಥಿಗಳಿಗೆ ಒಂದೊಂದು ಮಂತ್ರಮಾಂಗಲ್ಯ ಪುಸ್ತಕವನ್ನು ಕೊಡಿರಿ. ಈ ಪುಸ್ತಕದಲ್ಲಿನ ಶ್ರೀಕುವೆಂಪು ಅವರ ಧ್ಯೇಯಾದರ್ಶಗಳು ಮತ್ತು ಆಲೋಚನೆಗಳು ನಿಧಾನವಾಗಿಯಾದರೂ ಅವರ ಮತ್ತು ಅದನ್ನು ಓದುವ ಇತರರ ಮನಸ್ಸನ್ನು ಪರಿವರ್ತಿಸಿ ಊರ್ಧ್ವಗಾಮಿಯಾಗುವಂತೆ ಮಾಡುತ್ತವೆ. ಯುವಕರಲ್ಲಿ ನಿಮ್ಮಂತೆಯೇ ಇಂದು ಸದ್ದಿಲ್ಲದೆ ಸಂಭವಿಸುತ್ತಿರುವ ವಿಚಾರಕ್ರಾಂತಿಗೆ ಇದು ಸಹಾಯ ಮಾಡುತ್ತದೆ.

ಈ ಕ್ರಮದಲ್ಲಿ ಸಂಪ್ರದಾಯಾಗಳನ್ನು ತಿರಸ್ಕರಿಸಿ ಮದುವೆಯಾದ ವಧೂವರರನ್ನು ಜಾತ್ಯಾತೀತರೆಂದು ಪರಿಗಣಿಸಿ ಅವರಿಗೂ ಸರ್ಕಾರೀ ಸೌಲಭ್ಯಗಳಲ್ಲಿ, ನೌಕರಿಯಲ್ಲಿ ಮೀಸಲಾತಿ ಸೌಲಭ್ಯ ಒದಗಿಸಲು ಮತ್ತು ಅವರ ಮಕ್ಕಳಿಗೆ ಒಂದು ತಲೆಮಾರಿಗೆ ಮಾತ್ರ ವಿದ್ಯಾಭ್ಯಾಸದಲ್ಲಿ ಮೀಸಲಾತಿ ಒದಗಿಸಲೂ ಪ್ರಯತ್ನಿದ್ದೇವೆ. ಜಾತೀಯತೆ ಉಲ್ಬಣಗೊಳ್ಳುತ್ತಿರುವ ಬಾರತೀಯ ಸಾಮಾಜಿಕ ಸಂದರ್ಭದಲ್ಲಿ ಜಾತ್ಯಾತೀತ ಧೋರಣೆಯವರ  ಸಂಘಟಿತ ಪ್ರಯತ್ನ ಅನಿವಾರ್ಯವಾಗಿದೆ.

ಮಂತ್ರಮಾಂಗಲ್ಯದ ಪ್ರಕಾರ ಮದುವೆಯಾದವರು ಇದರ ಮೂಲ ಆಶಯಕ್ಕೆ ಭಂಗ ಬರದಂತೆ ಅದರ ವಿಧಿ ವಿಧಾನಗಳಲ್ಲಿ ಅಲ್ಪಸ್ವಲ್ಪ ಮಾರ್ಪಾಡುಗಳನ್ನು ಮಾಡಬಹುದು. ಶ್ರೀಕುವೆಂಪು ಅವರೇ ಕಾಲಾನುಕ್ರಮದಲ್ಲಿ ಕೊಂಚಕೊಂಚ ಮಾರ್ಪಾಡು ಮಾಡಿರುವುದರಿಂದ ತಮಗೆ ಉಚಿತವೆನ್ನಿಸಿದ ಬದಲಾವಣೆಗಳನ್ನು ನಮಗೆ ತಿಳಿಸಿದರೆ ಅದನ್ನು ಪರಿಗಣಿಸಲಾಗುತ್ತದೆ.