ರಣಧೀರನ ಉದಾತ್ತ ವ್ಯಕ್ತಿತ್ವ ಮಂತ್ರಶಕ್ತಿ ನಾಟಕದಲ್ಲಿ ವ್ಯಕ್ತವಾಗಿದೆ. ರಣಧೀರ ನ್ಯಾಯಯುತವಾಗಿ ರಾಜ್ಯವಾಳ ಬಯಸುತ್ತಾನೆಯೇ ಹೊರತು, ಅನ್ಯಾಯದ ರಾಜ್ಯ ಅವನಿಗೆ ಬೇಡ. ಹಳೇ ಪೈಕದವರಿಗೆ ಸಂತೋಷವಾಗುತ್ತದೆಂದು ಆಧಾರಗಳಿಲ್ಲದೇ ಶ್ರೀರಂಗ ರಾಜನನ್ನು ಅಧೀನರಾಜನೆಂಧು ಘೋಷಿಸಲು ಅವನು ತಯಾರಾಗುವುದಿಲ್ಲ. ಅದಕ್ಕಾಗಿ ದಾಖಲೆಗಳನ್ನು ಶೋಧಿಸಲು ಆದೇಶನೀಡುತ್ತಾನೆ. ರಣಧೀರನನ್ನು ಸೆರೆಹಿಡಿಯುವುದಕ್ಕಾಗಿ ಕರುವಿಯನ್‌ಕರೆತಂದಿರುವ ಸುಂದರ ವೇಶ್ಯೆ ದೊಡ್ಡಮ್ಮ, ರಣಧೀರನ ಉದಾತ್ತ ವ್ಯಕ್ತಿತ್ವಕ್ಕೆ ಮಾರುಹೋಗಿ ತಾನೇ ಅವನಿಗೆ ಮನಸೋಲುತ್ತಾಳೆ. ರಣಧೀರನ ಬಾಲ್ಯದ ಒಡನಾಡಿ ಮತ್ತು ದಳವಾಯಿ ನಂಜರಾಜರು ಅವನ ವಿರೋಧಿ ಗುಂಪಿನಲ್ಲಿ ಸೇರಿರುವುದು ಪರಿಸ್ಥಿತಿ ಸಂಕೀರ್ಣಗೊಳ್ಳುತ್ತಿರುವುದರ ದ್ಯೋತಕ. ರಣಧೀರನನ್ನು ತನ್ನ ವಶಮಾಡಿಕೊಳ್ಳದ ದೊಡ್ಡಮ್ಮನ ಮೇಲೆ ಕರುವಿಯನ್‌ಕೋಪದಿಂದ ಕೈಮಾಡತೊಡಗಿದಾಗ, ಮೊನೆಗಾರನ ವೇಷದಲ್ಲಿದ್ದ ರಣಧೀರ ಬಂದು ಅವಳನ್ನು ರಕ್ಷಿಸುತ್ತಾನೆ. ರಣಧೀರನ ಸಮಯೋಚಿತ ವರ್ತನೆಯಿಂದ ಸರ್ವಾಧಿಕಾರಿಯಾಗಬಯಸಿದ ನಂಜರಾಜನೂ ಬಂದಿಯಾಗುತ್ತಾನೆ. ಶ್ರೀರಂಗರಾಯನನ್ನು ಸೆರೆಹಿಡಿದು ಕರುವಿಯನ್‌ಕಡೆಯವರನ್ನು ರಣಧೀರ ಹಠಾತ್ತಾಗಿ ಬಂದು ಸೆರೆ ಹಿಡಿಸುತ್ತಾನೆ. ಇಂಥಲ್ಲೆಲ್ಲ ಅವನ ಬೇಹುಗಾರಿಕೆ. ಸೂಕ್ಷ್ಮಗ್ರಾಹಿತ್ವ ಅಚ್ಚರಿಯನ್ನುಂಟು ಮಾಡುತ್ತದೆ. ಮೊನೆಗಾರನ ವೇಷದಲ್ಲಿ ಓಡಾಡಿಕೊಳ್ಳುತ್ತ ಹಳೆ ಪೈಕದವರ ದ್ರೋಹಿ ರಹಸ್ಯಗಳನ್ನೆಲ್ಲ ತಿಳಿದುಕೊಂಡು ವಿಫಲಗೊಳಿಸುವಲ್ಲಿಯೂ ಅವನ ಕುಶಾಗ್ರಮತಿ ವ್ಯಕ್ತವಾಗಿದೆ. ದೊಡ್ಡಮ್ಮನೊಂದಿಗೆ ಶಯ್ಯಾಗೃಹದಲ್ಲಿದ್ದಾಗ ರಣಧೀರನನ್ನು ಕೊಲ್ಲಬೇಕೆಂದು ಕರುವಿಯನ್‌ಮಾಡಿದ ಸಂಚೂ ವಿಫಲವಾಗಿ ತಾನೇ ಸೆರೆಯಾಗುತ್ತಾನೆ. ಹಳೆ ಪೈಕದವರ ದ್ರೋಹಿ ನಡವಳಿಕೆಯನ್ನು ಸಹಿಸದೇ ಅವರ ಸಭೆಯನ್ನೇ ರಣಧೀರ ವಿಸರ್ಜಿಸಿ ಬಿಡುತ್ತಾನೆ. ದೊಡ್ಡಮ್ಮ ರಣಧೀರನ ಭಂಗಾರದವಳಾಗಿರಲು ಇಷ್ಟಪಟ್ಟು ಅರಮನೆ ಸೇರುತ್ತಾಳೆ. ಶ್ರೀರಂಗಪಟ್ಟಣದ ರಾಜ್ಯ ಯಾರದ್ದೆಂದು ಇತ್ಯರ್ಥವಾಗದೇ ನೆತ್ತದ ಅದೃಷ್ಟ ಪರೀಕ್ಷೆ ನಡೆಯುತ್ತದೆ. ಆಟದಲ್ಲಿ ರಣಧೀರ ಗೆಲ್ಲುತ್ತಾನೆ. ಅಹಂಕಾರದಿಂದ ಬೀಗದೆ ಶ್ರೀರಂಗರಾಯನೊಡನೆ ಅಧಿರಾಜನಂತೆ ನಡೆದುಕೊಂಡು ತನ್ನ ಉದಾತ್ತ ವ್ಯಕ್ತಿತ್ವ ಪ್ರಕಟಪಡಿಸುತ್ತಾನೆ. ಹೀಗೆ ‘ಮಂತ್ರಶಕ್ತಿ’ ರಣಧೀರನ ಉತ್ಕರ್ಷವನ್ನು ತಂತ್ರಕ್ಕೆ ಪ್ರತಿತಂತ್ರಗೈಯುವ ಅವನ ಸಾಮರ್ಥ್ಯವನನ್ನು ಹಾಗೂ ಅವನ ಕುಶಾಗ್ರ ಮತಿಯನ್ನು ವ್ಯಕ್ತಪಡಿಸುವ ನಾಟಕವಾಗಿದೆ.