ಪುಟ್ಟನ ಮನೆ ಇದ್ದುದು ಮಲೆನಾಡಿನ ಒಂದು ಹಳ್ಳಿಯಲ್ಲಿ. ಅವನ ಮನೆಯ ಹಿಂದುಗಡೆ ಒಂದು ಗುಡ್ಡ ಇತ್ತು. ದೊಡ್ಡ ಗುಡ್ಡ ಅದು. ಹಿಂದೆ ಕಾಡಿನಿಂದ ತುಂಬಿತ್ತು. ಈಗ ಕಾಡನ್ನು ಕಡಿದಿದ್ದರು. ಗುಡ್ಡ ಬೋಳಾಗಿತ್ತು. ಅಲ್ಲಲ್ಲಿ ಬಿದರ ಮೆಳೆಗಳು ಮಾತ್ರ ಉಳಿದಿದ್ದವು.

ಒಂದು ಸಂಜೆ ಪುಟ್ಟ ಮನೆಯಿಂದ ಹೊರಟ. ಗುಡ್ಡದ ದಾರಿ ಹಿಡಿದು ನಡೆಯತೊಡಗಿದ. ಬಹಳ ಹೊತ್ತು ನಡೆದ ಅವನು ಗುಡ್ಡದ ನೆತ್ತಿ ಸೇರಿದ. ಒಂದು ಬಾರಿ ಸುತ್ತೆಲ್ಲ ಕಣ್ಣು ಹಾಯಿಸಿದ. ಆಗಲೇ ಗುಬ್ಬಚ್ಚಿಯೊಂದು ಅವನ ಕಣ್ಣಿಗೆ ಬಿತ್ತು. ಹತ್ತಿರದ ಬಿದರ ಮೆಳೆಯಲ್ಲಿ ಅದು ಕೂತಿತ್ತು. ಆದರ ಕತ್ತಿನಲ್ಲಿ ಕಪ್ಪು ಮಚ್ಚೆ ಇತ್ತು. ಅದು ಗಂಡು ಗುಬ್ಬಚ್ಚಿ ಎನ್ನುವುದು ಅವನಿಗೆ ತಿಳಿದು ಹೋಯಿತು.

ಬಹಳ ದಿನಗಳಿಂದ ಪುಟ್ಟನು ಗುಬ್ಬಚ್ಚಿಯನ್ನೇ ಕಂಡಿರಲಿಲ್ಲ. ಹಿಂದೆ ಮನೆಮನೆಗಳಲ್ಲಿ ಅವು ಕಾಣಸಿಗುತ್ತಿದ್ದವು. ಈಗ ಅವು ನಾಪತ್ತೆಯಾಗಿವೆ. ಈ ಗುಬ್ಬಚ್ಚಿಗಳು ಎಲ್ಲಿಗೆ ಹೋದವು? ಏಕೆ ಹೋದವು? ತಿಳಿಯಬೇಕು. ಎನಿಸಿತು ಪುಟ್ಟನಿಗೆ. ಒಡನೆ ಅವನು ಬಿದಿರ ಮೆಳೆಯ ಹತ್ತಿರಕ್ಕೆ ಬಂದ.

“ಗುಬ್ಬಣ್ಣಾ, ಗುಬ್ಬಣ್ಣಾ, ನೀನು ಇಲ್ಲೇನು ಮಾಡುತ್ತಿರುವೆ?” ಅವನು ಗುಬ್ಬಚ್ಚಿಯನ್ನು ವಿಚಾರಿಸಿದ.

“ಬಿದಿರ ಮಳೆಯಲ್ಲಿ ನನ್ನ ಗೂಡು ಇದೆ. ನನ್ನಾಕೆ ಗೂಡಿನ ಒಳಗೆ ಇದ್ದಾಳೆ. ಮರಿಗಳಿಗೆ ಗುಟುಕು ಕೊಡುತ್ತಿದ್ದಾಳೆ. ಅವಳಿಗಾಗಿ ನಾನು ಕಾಯುತ್ತಿದ್ದೇನೆ.” ಗುಬ್ಬಚ್ಚಿ ಹೇಳಿತು.

“ಹಿಂದೆ ಊರ ಮನೆಗಳಲ್ಲಿ ನೀವು ಕಾಣಸಿಗುತ್ತಿದ್ದಿರಿ. ಈಗ ನಿಮ್ಮ ಪತ್ತೆಯೇ ಇಲ್ಲವಲ್ಲ!”. ಪುಟ್ಟ ಕೇಳಿದ.

“ಹೌದು, ನಾವೀಗ ಊರು ಬಿಟ್ಟಿದ್ದೇವೆ.” ಎಂದಿತು ಗುಬ್ಬಚ್ಚಿ

“ಏಕೆ? ಅಲ್ಲಿ ನಿಮಗೇನು ತೊಂದರೆಯಾಯಿತು.?” ಪುಟ್ಟ ಕುತೂಹಲ ತೋರಿದ.

“ಹಿಂದೆ ಹೆಚ್ಚು ಹುಲ್ಲ ಮನೆಗಳಿದ್ದವು. ಸೂರಿನೆಡೆಯಲ್ಲಿ ಗೂಡು ಕಟ್ಟುವುದು ಸುಲಭವಿತ್ತು. ಈಗ ಹಂಚಿನಮೆನ – ಕಾಂಕ್ರಿಟ್‌ಕಟ್ಟಡಗಳೇ ಜಾಸ್ತಿ” ಗುಬ್ಬಚ್ಚಿ ಹೇಳಿತು.

“ಅಯ್ಯೋ, ಅಷ್ಟಕ್ಕಾಗಿ ನೀವು ಊರು ಬಿಟ್ಟಿರಾ?” ಕಿಟ್ಟ ಪ್ರಶ್ನಿಸಿದ

“ನಾವು ಊರು ಬಿಡಲು ಕಾರಣಗಳು ಹಲವು ಇವೆ. ಅವುಗಳಲ್ಲಿ ಬಲು ಮುಖ್ಯವಾದುದು ಪರಿಸರದ ನಾಶ. ಎಲ್ಲ ಕಡೆ ಈಗ ಪರಿಸರ ಕೆಟ್ಟುಹೋಗಿದೆ. ಅದರ ಪರಿಣಾಮ ನಮ್ಮ ಮೇಲಾಗಿದೆ”. ಗುಬ್ಬಚ್ಚಿ ಹೇಳಿತು.

“ನಿನ್ನ ಮಾತು ಅರ್ಥವಾಗಲಿಲ್ಲ. ಸ್ವಲ್ಪ ವಿವರಿಸಿ ಹೇಳುತ್ತೀಯಾ?” ಪುಟ್ಟ ಕೇಳಿಕೊಂಡ.

ನೋಡು ತಮ್ಮಾ, “ಬದುಕಲು ನಿಮ್ಮ ಹಾಗೆ ನಮಗೂ ಗಾಳಿ ಬೇಕು. ನೀರು ಬೇಕು. ಆಹಾರ-ಆಸರೆ ಬೇಕು. ಈಗ ನಾವು ಸೇವಿಸುವ ಗಾಳಿ ವಿಷಗಾಳಿ ಯಾಗಿದೆ. ವಿಷ ಅನಿಲಗಳು, ಹೊಗೆ, ಧೂಳು ಎಲ್ಲ ಇದರಲ್ಲಿ ಸೇರಿಕೊಂಡಿವೆ. ಗಾಳಿಯನ್ನು ಶುದ್ಧಗೊಳಿಸಬಲ್ಲ ಮರಗಳು, ಕಾಡುಗಳು ನಾಶಗೊಂಡಿವೆ. ನಮಗೆ ಆಸರೆಯೇ ಇಲ್ಲದಂತಾಗಿದೆ. ಬಗೆಬಗೆಯ ರಾಸಾಯನಿಕಗಳು, ಕ್ರಿಮಿನಾಶಕಗಳು, ಕಾರ್ಖಾನೆಗಳಿಂದ ಹೊರಬರುವ ಕಲ್ಮಷಗಳು ನಾವು ಕುಡಿವ ನೀರನ್ನು ಮಲಿನಗೊಳಿಸಿವೆ. ಅಂಥ ನೀರನ್ನು ನಾವು ಸೇವಿಸಬೇಕಾಗಿದೆ. ಇಂದಿನ ಕೃಷಿಕರು ಬೆಳೆಗಳಿಗೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಧಾರಾಳ ಬಳಸುತ್ತಾರೆ. ಇದರಿಂದಾಗಿ ನಾವು ತಿನ್ನುವ ಕಾಳುಕಡಿ, ತರಕಾರಿ, ಹಣ್ಣುಹಂಪಲು ಎಲ್ಲವೂ ಮಲಿನಗೊಳ್ಳುತ್ತವೆ. ಇವು ಸಹ ನಮಗೆ ಹಾನಿ ಉಂಟುಮಾಡುತ್ತವೆ. ತಮಗೆ ತೊಂದರೆ ಕೊಡುವ ಜಿರಳೆ, ನೊಣ, ಸೊಳ್ಳೆ, ಇಲಿ, ಹೆಗ್ಗಣಗಳನ್ನು ಕೊಲ್ಲಲು ಜನರು ವಿಷ ಬೆರೆಸಿದ ತಿಂಡಿ ತಿನಸುಗಳನ್ನು ಇರಿಸುತ್ತಾರೆ. ಕೆಲವು ಬಾರಿ ಅಂಥ ವಸ್ತುಗಳನ್ನು ನಾವು ತಿಂದು ಬಿಡುತ್ತೇವೆ. ವಿಷಾಹಾರ ತಿಂದು ಸತ್ತ ಜೀವಿಗಳೂ ಕೆಲವೊಮ್ಮೆ ನಮ್ಮ ಹೊಟ್ಟೆ ಸೇರುತ್ತವೆ. ಇಂಥ ಕಾರಣಗಳಿಂದಾಗಿ ನಮ್ಮ ಸಂತತಿ ಅಳಿಯುತ್ತಾ ಇದೆ” ನಿಟ್ಟುಸಿರು ಬಿಟ್ಟಿತು ಗುಬ್ಬಚ್ಚಿ.

“ನಿಮ್ಮವರ ಸಂಖ್ಯೆ ಕಡಿಮೆಯಾಗುವುದಕ್ಕೆ ಇಷ್ಟು ಕಾರಣಗಳಿವೆ. ಅಲ್ಲವೇ?” ಪುಟ್ಟ ಆಶ್ಚರ್ಯ ವ್ಯಕ್ತಪಡಿಸಿದ.

“ಇಷ್ಟೇ ಅಲ್ಲ ತಮ್ಮಾ, ಇನ್ನೂ ಇವೆ. “ಗುಬ್ಬಚ್ಚಿ ಹೇಳಿತು. ಕ್ಷಣಕಾಲ ಬಿಟ್ಟು ಅದು ಮುಂದುವರಿಸಿತು.” ನಾವು ಸಣ್ಣ ಜೀವಿಗಳು, ದುರ್ಬಲರು. ಹಾಗಾಗಿ ಕೆಲವು ಮೃಗಗಳು, ಪಕ್ಷಿಗಳು, ಹಾವುಗಳು ನಮ್ಮನ್ನು ಹಿಡಿದು ತಿನ್ನುತ್ತವೆ. ಕೆಲವೆಡೆ ಮನುಷ್ಯರೂ ನಮ್ಮನ್ನು ಬೇಟೆಯಾಡುತ್ತಾರೆ. ಆಸೆಪಟ್ಟು ನಮ್ಮ ಮಾಂಸವನ್ನು ತಿನ್ನುತ್ತಾರೆ. ಇಷ್ಟೆಲ್ಲ ಸಂಕಟಗಳನ್ನು ಎದುರಿಸಿ ನಾವು ಬಾಳಬೇಕು ನೋಡು. ನಮ್ಮ ಹೆಚ್ಚಿನ ಸಂಕಟಗಳಿಗೆ ನಿಮ್ಮವರೇ ಕಾರಣ. ನಾವು ಸೇವಿಸುವ ಗಾಳಿ, ನೀರು , ಆಹಾರ ಎಲ್ಲವನ್ನೂ ಅವರು ಹಾಳು ಮಾಡಿದರು. ಹಸಿರು ಪರಿಸರವನ್ನು ಅಳಿಸಿದರು. ಹಾಗಾಗಿ ನಮ್ಮವರ ಸಂಖ್ಯೆ ತುಂಬ ಕಡಿಮೆಯಾಗಿದೆ. ಹಳ್ಳಿ ಮನೆಗಳಲ್ಲೂ ನಾವಿಂದು ಕಾಣ ಸಿಗುವುದಿಲ್ಲ. ಮಲೆನಾಡಿನಲ್ಲಿ, ಮರಮುಟ್ಟುಗಳು ಉಳಿದಿರುವಲ್ಲಿ ಮಾತ್ರ ಅಳಿದು ಉಳಿದ ನಮ್ಮವರು ಕಾಣಸಿಗುತ್ತಾರೆ. ಇವು ನಾಶಹೊಂದಿದರೆ ನಾವೂ ನಾಶವಾಗುತ್ತೇವೆ. ನಮ್ಮ ಬಗ್ಗೆ ಯಾರು ಚಿಂತಿಸುತ್ತಾರೆ, ಹೇಳು?”

ಇಷ್ಟು ಹೇಳುವಾಗಲೇ ಅದರ ಗಂಟಲು ಕಟ್ಟಿತು. ಕಣ್ಣುಗಳಿಂದ ಕಂಬನಿ ತೊಟ್ಟಿಕ್ಕಿತು. ಅದನ್ನು ಕಂಡು ಪುಟ್ಟನ ಮನಸ್ಸು ಭಾರವಾಯಿತು.

“ಹೌದು, ಗುಬ್ಬಚ್ಚಿಯಂಥ ಸಣ್ಣಜೀವಿಯ ಬಗ್ಗೆ ಯಾರು ಚಿಂತಿಸುತ್ತಾರೆ?” ಪುಟ್ಟ ತನಗೆ ತಾನೇ ಪ್ರಶ್ನೆ ಕೇಳಿಕೊಂಡ. ಉತ್ತರ ಮಾತ್ರ ಸಿಗಲಿಲ್ಲ.