ಸಂಜೆಯ ಹೊತ್ತು ಅದು. ಗೋಪಿ, ಕಿಟ್ಟ, ಕಮಲಿ ತೋಟದಲ್ಲಿ ಆಡುತ್ತಿದ್ದರು. ಆಗ ಫಕ್ಕನೆ ಕಿಟ್ಟನ ದನಿ ಕೇಳಿಬಂತು. “ಅಮ್ಮಾ ಗೋಪಿಯ ಕೈಗೆ ಕತ್ತಿ ತಾಗಿತು. ನೆತ್ತರು ಸುರಿಯುತ್ತಿದೆ” ಅವನು ಕೂಗಿ ಹೇಳಿದ.

ಸೀತಮ್ಮ ಏನೋ ಕೆಲಸದಲ್ಲಿದ್ದರು. ಮಗನ ಮಾತು ಅವರಿಗೆ ಅರ್ಥವಾಗಲಿಲ್ಲ. ಅವರು ಹಿರಿಯ ಮಗ ರಮೇಶನನ್ನು ಕರೆದರು.

“ಒಮ್ಮೆ ತೋಟಕ್ಕೆ ಹೋಗಿ ಬಾ ಮಗೂ. ಮಕ್ಕಳು ಏನು ಮಾಡಿಕೊಂಡಿದ್ದಾರೆ ಸ್ವಲ್ಪ ವಿಚಾರಿಸು.” ಅವರು ಹೇಳಿದರು. ಒಡನೆ ರಮೇಶ ತೋಟಕ್ಕೆ ಹೋದ. “ಏನು ಕಿಟ್ಟಾ, ಯಾಕೆ ಕರೆದೆ?” ಅವನು ವಿಚಾರಿಸಿದ.

“ಗೋಪಿಯ ಕೈಗೆ ಕತ್ತಿ ತಾಗಿದೆ. ನೆತ್ತರು ಸುರಿಯುತ್ತಿದೆ” ಅವನು ಇನ್ನೊಮ್ಮೆ ಹೇಳಿದ.

“ಕತ್ತಿ ತಾಗಿತೇ? ಎಲ್ಲಿತ್ತು ಅದು? ಹೇಗೆ ತಾಗಿತು? ನೀವೇನು ಕತ್ತಿ ಹಿಡಿದು ಆಟವಾಡಿದ್ದೇ?” ಒಂದೇ ಬಾರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ ರಮೇಶಣ್ಣ.

“ಕ್ರಿಕೆಟ್‌ಆಡಲು ನಮಗೆ ಬ್ಯಾಟು ಬೇಕಿತ್ತು. ಗೋಪಿ, ಸೋಗೆಯ ದಿಂಡಿನಿಂದ ಬ್ಯಾಟು ತಯಾರಿಸುತ್ತಿದ್ದ. ಆಗ ಕತ್ತಿ ತಾಗಿ, ಗಾಯವಾಯಿತು” ಕಿಟ್ಟ ವಿವರಣೆ ನೀಡಿದ. ಒಡನೆ,

“ಸರಿ, ಈಗ ಬಂದು ಬಿಡುತ್ತೇನೆ.” ಎನ್ನುತ್ತ ರಮೇಶಣ್ಣ ಅತ್ತಿತ್ತ ನೋಡಿದ. ಬೇಲಿ ಬದಿಯ ಹಸಿರು ಗಿಡಗಳು ಅವನ ಕಣ್ಣಿಗೆ ಬಿದ್ದವು. ಅವನು ಅವುಗಳ ಬಳಿಗೆ ನಡೆದ. ಒಂದು ಹಿಡಿ ಹಸಿರೆಲೆಗಳನ್ನು ಕಿತ್ತು ತಂದು, ಅವುಗಳನ್ನು ಹಿಸುಕಿ ಹಿಂಡಿದ. ಗೋಪಿಯ ಗಾಯಕ್ಕೆ ರಸವನ್ನು ಹಚ್ಚಿದ. ಬಳಿಕ ಅವನು,

“ಬಾ ಗೋಪೀ, ಇಲ್ಲಿ ಮರದಡಿ ಸ್ವಲ್ಪ ಕೂತಿರೋಣ. ನೋವು ಈಗ ಕಡಿಮೆಯಾಗುತ್ತದೆ” ಎನ್ನುತ್ತ ಗೋಪಿಯನ್ನು ಅಲ್ಲಿ ಕೂರಿಸಿದ. ತಾನೂ ಕುಳಿತುಕೊಂಡ. ಕಿಟ್ಟ, ಕಮಲಿಯರೂ ಅಲ್ಲಿ ಕೂತುಬಿಟ್ಟರು.

ತುಸು ಹೊತ್ತು ಕಳೆಯಿತು. ಗಾಯದ ರಕ್ತ ಸ್ರಾವ ನಿಂತಿತು. ಕಿಟ್ಟನಿಗೆ ಆಶ್ಚರ್ಯವಾಯಿತು “ರಮೇಶಣ್ಣಾ, ಇದೆಂಥ ಮದ್ದು ಮಾಡಿದೆ ನೀನು? ಗಾಯದಿಂಧ ನೆತ್ತರು ಬರುವುದು ನಿಂತೇ ಹೋಯಿತಲ್ಲಾ!” ಅವನು ಸೋಜಿಗ ವ್ಯಕ್ತಪಡಿಸಿದ.

ರಮೇಶಣ್ಣ ಬೇಲಿ ಬದಿಯ ಗಿಡಗಳತ್ತ ಬೊಟ್ಟು ಮಾಡಿದ. “ಅವು ಯುಪಟೋರಿಯಂ ಗಿಡಗಳು. ಅವುಗಳ ಎಲೆಗಳಲ್ಲಿ ಮದ್ದಿನ ಗುಣವಿದೆ. ಅವುಗಳ ರಸ ಹಚ್ಚಿದರೆ ರಕ್ತಸ್ರಾವ ನಿಲ್ಲುತ್ತದೆ. ಗಾಯ ವಾಸಿಯಾಗುತ್ತದೆ” ಅವನು ವಿವರಿಸಿದ.

“ಹೌದೇ,? ನನಗಿದು ಗೊತ್ತೇ ಇರಲಿಲ್ಲ” ಕಿಟ್ಟ ಹೇಳಿದ.

“ನನಗೂ ಗೊತ್ತಿರಲಿಲ್ಲ” ಕಮಲಿಯೂ ದನಿಗೂಡಿಸಿದಳು.

“ಮನುಷ್ಯರಿಗೆ ಮಾತ್ರವಲ್ಲ ಕಿಟ್ಟಾ, ಪ್ರಾಣಿಗಳ ಗಾಯಕ್ಕೂ ಇದನ್ನು ಬಳಸಬಹುದು”

ರಮೇಶಣ್ಣ ಮಾತು ಸೇರಿಸಿದ.

“ಅಂದರೆ ಈ ಯುಪಟೋರಿಯಂನಿಂದಲೂ ನಮಗೊಂಲದು ಉಪಯೋಗಿವದೆ. ಅಲ್ಲವೇ ರಮೇಶಣ್ಣಾ?” ಕಿಟ್ಟ ಮತ್ತೆ ಕೇಳಿದ.

“ಒಂದಲ್ಲ, ಕೆಲವು ಬಗೆಯ ಉಪಯೋಗಗಳಿವೆ, ಕಿಟ್ಟಾ. ಇತರ ಸಸ್ಯಗಳಂತೆ ಇದು ಸಹ ಆಮ್ಲಜನಕವನ್ನು ಒದಗಿಸುತ್ತದೆ. ಮಳೆ ನೀರಿಗೆ ಭೂಮಿಯ ಮೇಲ್ಮಣ್ಣು ಕೊಚ್ಚಿ ಹೋಗುವುದನ್ನು ತಡೆಯುತ್ತದೆ. ಇದರಲ್ಲಿ ವಿಷಕಾರಕ ಗುಣವಿದೆ. ಹಾಗಾಗಿ ಇದರಿಂದ ಕೀಟನಾಶಕ ತಯಾರಿಸಬಹುದು. ಇದರ ದಂಟುಗಳಲ್ಲಿ ನಾರಿನಂಶವಿದೆ. ಆದುದರಿಂದ ಇದನ್ನು ಪ್ಲೈವುಡ್‌ತಯಾರಿಕೆಗೂ ಬಳಸಿಕೊಳ್ಳಬಹುದು. ಕಂಪೋಸ್ಟ್‌ಗೊಬ್ಬರ ತಯಾರಿಯಲ್ಲೂ ಇದನ್ನು ಉಪಯೋಗಿಸಬಹುದು” ರಮೇಶಣ್ಣ ವಿವರಸಿ ಹೇಳಿದ.

“ಹಾಗಾದರೆ ಮನೆಯ ಸುತ್ತಮುತ್ತ ನಾವು ಈ ಗಿಡಗಳನ್ನು ನೆಟ್ಟು ಬೆಳೆಸಬಹುದು. ಅವುಗಳಿಂದ ಪ್ರಯೋಜನ ಪಡೆಯಬಹುದು. ಅಲ್ಲವೆ ರಮೇಶಣ್ಣಾ? ” ಕಮಲಿ ವಿಚಾರಿಸಿದಳು.

“ಊಹುಂ, ಯಾರೂ ಈ ಗಿಡಗಳನ್ನು ನೆಡುವುದಿಲ್ಲ. ನೆಡಬೇಕಾಗಿಯೂ ಇಲ್ಲ” ಎಂದ ರಮೇಶಣ್ಣ “ಯಾಕೆ, ಯಾಕೆ ನೆಡಬಾರದು?” ಕಮಲಿಯ ಕುತೂಹಲದ ಪ್ರಶ್ನೆ.

“ಯುಪಟೋರಿಯಂ ಗಿಡಗಳು ತಮ್ಮಷ್ಟಕ್ಕೆಯೇ ಬೆಳೆಯುತ್ತವೆ. ಬಲು ಬೇಗೆ ಬೆಳೆಯುತ್ತವೆ, ಹರಡುತ್ತವೆ. ಒಂದೇ ಒಂದು ಗಿಡದಿಂದ ಒಂದೆರಡು ವರುಷಗಳಲ್ಲಿ ಲಕ್ಷಗಟ್ಟಲೆ ಗಿಡಗಳು ಹುಟ್ಟಿಕೊಳ್ಳುತ್ತವೆ. ಗಾಳಿಯಲ್ಲಿ ಇದರ ಬೀಜಗಳು ಒಂದು, ಒಂದೂವರೆ ಕಿ.ಮೀ. ದೂರಕ್ಕೆ ಹರಡಬಲ್ಲವು. ಬಿಸಿಲಿನ ಜಾಗದಲ್ಲಿ ಈ ಗಿಡಗಳು ಬಲು ಹುಲುಸಾಗಿ ಬೆಳೆಯಬಲ್ಲವು. ಹೆಚ್ಚು ಸಾರವಿಲ್ಲದ ಮಣ್ಣಿನಲ್ಲೂ ಇವು ಹುಟ್ಟಿ, ಬದುಕಬಲ್ಲವು. ಹಾಗಾಗಿ ಇವುಗಳನ್ನು ಬೆಳೆಸಲು ಯಾರೂ ಯತ್ನಿಸಬೇಕಾಗಿಲ್ಲ, ಯತ್ನಿಸುವುದೂ ಇಲ್ಲ. ಹಾಗೆ ಮಾಡಿದರೆ ನಮಗೆಯೇ ತೊಂದರೆ ಹೆಚ್ಚು” ರಮೇಶಣ್ಣ ಕಾರಣಗಳನ್ನು ವಿವರಿಸಿದ.

ಏನು, ಯುಪಟೋರಿಯಂನಿಂದ ನಮಗೆ ತೊಂದರೆಯೇ? ಹೇಗೆ ತೊಂದರೆ? ಏನು ತೊಂದರೆ?” ಪ್ರಶ್ನೆ ಹಾಕಿದ ಕಿಟ್ಟ

“ಹಿಪಟೋರಿಯಂನಿಂದ ನಮಗಾಗುವ ಉಪಕಾರಕ್ಕಿಂತ ಅಪಕಾರವೇ ಹೆಚ್ಚು. ಯಾಕೆ ಗೊತ್ತೇ? ಮನುಷ್ಯ ಮಾತ್ರವಲ್ಲ ದನ, ಆಡು, ಕುರಿ ಇಂತಹ ಯಾವ ಪ್ರಾಣಿಯೂ ಇದನ್ನು ತಿನ್ನುವುದಿಲ್ಲ. ಮನುಷ್ಯರಿಗೂ ಪ್ರಾಣಿಗಳಿಗೂ ಇದು ಹಲವಾರು ಆರೋಗ್ಯದ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಬಲು ಬೇಗೆ ಬೆಳೆಯುವ ಈ ಗಿಡವು ಮಣ್ಣಿನ ಸಾರವನ್ನು ಹೀರಿ, ಭೂಮಿಯನ್ನು ಬರಡಾಗಿಸುತ್ತದೆ. ವಿಷಕಾರಕ ಗುಣಗಳಿಂದ ಕೂಡಿದ ಇದು ಪರಿಸರದ ಆರೋಗ್ಯ ಸೂಚಕವಾದ ಚಿಟ್ಟೆಗಳನ್ನೂ ದೂರಕ್ಕೆ ಓಡಿಸುತ್ತದೆ. ಇದರ ಸಂಪರ್ಕಕ್ಕೆ ಬಂದ ಜನರಿಗೆ, ದನಗಳಿಗೆ, ತುರಿಕೆ ಉಂಟಾಗುತ್ತದೆ. ಈ ಗಿಡ ಒಣಗಿದಾಗ ಸುತ್ತ ಮುತ್ತಣ ಗಾಳಿಯಲ್ಲಿ ಇದರ ಬೀಜಗಳು ಸೇರಿಕೊಳ್ಳುತ್ತವೆ. ಉಸಿರಾಟದ ಗಾಳಿಯೊಡನೆ ಅವು ಶ್ವಾಸಕೋಶ ಸೇರಿದಾಗ ನಮಗೆ ಅಲರ್ಜಿ ಉಂಟಾಗುತ್ತದೆ, ಉಬ್ಬಸ ಕಾಣಿಸಿಕೊಳ್ಳುತ್ತದೆ. ಇಂತಹ ಹಲವು ಕಾರಣಗಳಿಂದಾಗಿ ನಮಗಿದು ಅಪಾಯಕಾರಿಯಾಗಿದೆ. ಇದರ ನಾಶಕ್ಕೆ ಅಲ್ಲದಿದ್ದರೂ ಹತೋಟಿಗೆ ನಾವು ಪ್ರಯತ್ನಿಸಬೇಕಾಗಿದೆ” ಪುಟ್ಟದೊಂದು ಭಾಷಣವನ್ನೇ ಮಾಡಿದ ರಮೇಶಣ್ಣ

“ಒಂದು ಗಿಡದಿಂದ ಲಕ್ಷಕ್ಕಿಂತ ಹೆಚ್ಚು ಗಿಡಗಳು ಹುಟ್ಟುತ್ತವೆ ಎಂದು ನೀನೇ ಹೇಳಿದೆಯಲ್ಲಾ? ಹಾಗಿರುವಾಗ, ಇದನ್ನು ನಾಶಗೊಳಿಸಲು ಸಾಧ್ಯವೇ?” ಕಿಟ್ಟ ಸಂದೇಹ ವ್ಯಕ್ತಪಡಿಸಿದ.

“ಎಲ್ಲರೂ ಹಟಹಿಡಿದು ಯತ್ನಿಸಬೇಕು. ಎಲ್ಲ ಬಗೆಯ ಪ್ರಯತ್ನಗಳನ್ನೂ ಮಾಡಬೇಕು. ಆಗ ಅದು ಸಾಧ್ಯವಾದೀತು” ರಮೇಶಣ್ಣ ಹೇಳಿದ.

“ನಿನ್ನ ಮಾತು ಅರ್ಥವಾಗಲಿಲ್ಲ ರಮೇಶಣ್ಣಾ. ಸ್ವಲ್ಪ ವಿವರಿಸಿ ಹೇಳುತ್ತೀಯಾ?” ಕಮಲಿ ಬೇಡಿಕೊಂಡಳು.

ಅಷ್ಟರಲ್ಲಿ ಅಮ್ಮನ ದನಿ ಕೇಳಿಸಿತು. “ರಮೇಶಾ, ಕಿಟ್ಟಾ ಇನ್ನೂ ಅಲ್ಲೇ ಇದ್ದೀರಾ? ಬನ್ನಿ, ಮನೆಗೆ ಬನ್ನಿ.” ಅವರು ಕರೆಯುತ್ತಿದ್ದರು.

“ಬರುತ್ತೇವೆ ಅಮ್ಮಾ. ಈಗ ಬಂದು ಬಿಡುತ್ತೇವೆ”

ರಮೇಶಣ್ಣ ಕೂಗಿ ಹೇಳಿದ. ಮತ್ತೆ ಅವನು ಗೋಪಿಯಾ ಕಡೆಗೆ ನೋಡಿ,

“ಈಗ ಹೇಗಿದೆ ಗೋಪೀ? ನೋವು ಕಡಿಮೆಯಾಯಿತೇ?” ಅವನು ವಿಚಾರಿಸಿದ

ಗೋಪಿ ಅಲ್ಲಿ ಕೂತು ಗಾಯಕ್ಕೆ ಗಾಳಿ ಊದುತ್ತಲೇ ಇದ್ದ. “ಹೂಂ ಅಣ್ಣಾ, ನೋವು ಸ್ವಲ್ಪ ಕಡಿಮೆಯಾಯಿತು” ಅವನು ಹೇಳಿದ. ಆಗಲೇ ಕಮಲಿ ಎದ್ದಳು.

“ಅಣ್ಣಾ ಮನೆಗೆ ಹೋಗುವ ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಟ್ಟುಬಿಡು. “ಯುಪಟೋರಿಯಂ ನಾಶ ಅಥವಾ ಹತೋಟಿ ಹೇಗೆ ಸಾಧ್ಯ? ಅದಕ್ಕಾಗಿ ನಾವೇನು ಮಾಡಬೇಕು? ಹೇಳಿ ಬಿಡು” ಅವಳು ಕೇಳಿಕೊಂಡಳು.

“ಮಳೆಗಾಲ ಆರಂಭವಾದ ಕೆಲವೇ ದಿನಗಳಲ್ಲಿ ಯುಪಟೋರಿಯಂ ಗಿಡಗಳು ಹುಟ್ಟಿಕೊಳ್ಳುತ್ತವೆ. ನಾಲ್ಕಾರು ತಿಂಗಳೊಳಗೆ ಅವು ಬೆಳೆದು ಗಟ್ಟಿಗಿಡಗಳಾಗುತ್ತವೆ. ಆಮೊದಲೇ ಅವುಗಳನ್ನು ಬೇರು ಸಹಿತ ಕಿತ್ತು ಬಿಡಬೇಕು. ಬೇರಿನ ಜೊತೆ ಕಿತ್ತುಬಂದ ಮಣ್ಣನ್ನು ಅಲ್ಲೇ ಮೆಟ್ಟಿ ಬಿಡಬೇಕು. ಇದು ಸುಲಭದ ಕೆಲಸ. ಆದರೆ ಇಲ್ಲೊಂದು ಅಪಾಯವಿದೆ. ಅದೇನು ಗೊತ್ತೇ? ಗಿಡಗಳನ್ನು ಬೇರು ಸಹಿತ ಕೀಳುವುದರಿಂದ ಭೂಮಿಯ ಮೇಲ್ಮಣ್ಣು ಮಳೆ ನೀರಿಗೆ ಕೊಚ್ಚಿ ಹೋಗುವ ಸಾಧ್ಯತೆ ಇದೆ. ಆದುದರಿಂದ ಪ್ರತಿ ಬಾರಿ ಹೂ ಬಿಡುವ ಮೊದಲೇ ಈ ಗಿಡಗಳನ್ನು ಕತ್ತರಿಸಿ ಎಸೆಯಬೇಕು ಇಲ್ಲವೆ ಕಂಪೋಸ್ಟ್‌ಅಥವ ಹಸಿರು ಗೊಬ್ಬರವಾಗಿ ಬಳಸಿಕೊಳ್ಳಬೇಕು. ಎಡೆಬಿಡದೆ ಕೆಲವು ವರ್ಷಗಳ ಕಾಲ ಈ ಕೆಲಸ ನಡೆಯುತ್ತಲೇ ಇರಬೇಕು. ಆಗ ಮಾತ್ರ ಈ ಗಿಡಗಳ ಸಂಖ್ಯೆಯನ್ನು ಹತೋಟಿಗೆ ತರಬಹುದು.

ಇನ್ನೂ ಹೇಳಬೇಕೆಂದರೆ, ನೆರಳಿನ ಜಾಗದಲ್ಲಿ ಯುಪಟೋರಿಯಂ ಹುಲುಸಾಗಿ ಬೆಳೆಯುವುದಿಲ್ಲ. ಹಾಗಾಗಿ ಖಾಲಿ ಜಾಗ ಇದ್ದಲ್ಲಿ ನಾವು ಹೆಚ್ಚು ಹೆಚ್ಚು ಗಿಡಮರಗಳನ್ನು ನೆಟ್ಟು, ಬೆಳೆಸಬೇಕು. ಚಗಟೆ ಗಿಡ ಜಾಸ್ತಿ ಇದ್ದಲ್ಲಿ ಯುಪಟೋರಿಯಂ ಕಾಟ ಕಡಿಮೆ. ಅದು ಪರಿಸರದ ಆರೋಗ್ಯಕ್ಕೆ ಸಹಕಾರಿಯೂ ಹೌದು. ಆದುದರಿಂದ ಚಗಟೆ ಗಿಡಗಳನ್ನು ಹೆಚ್ಚು ಬೆಳೆಯಲು ಬಿಡಬೇಕು. ಇಂಥ ಇತರ ವಿಧಾನಗಳ ಬಗೆಗೂ ನಾವು ಚಿಂತಿಸಬೇಕು., ಕಾರ್ಯಕ್ರಮ ಕೈಗೊಳ್ಳಬೇಕು. ಆದರೆ ಒಂದು ಮಾತಂತೂ ಸತ್ಯ. ಈ ಯುಪಟೋರಿಯಂ ನಿರ್ಮೂಲನ ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ. ಇದಕ್ಕೆ ಸಾಮೂಹಿಕ ಪ್ರಯತ್ನ ಅಗತ್ಯ. ಶಾಲೆ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರೆಲ್ಲ ಬಿಡುವಿನ ವೇಳೆಯನ್ನು ಇದಕ್ಕಾಗಿ ವಿನಿಯೋಗಿಸಬೇಕು. ಸಾರ್ವಜನಿಕರೂ ಸಹಕರಿಸಬೇಕು. ಕೆಲವೆಡೆ ಇಂತಹ ಪ್ರಯತ್ನಗಳು ಈಗಾಗಲೇ ಆರಂಭಗೊಂಡಿವೆ. ಎಲ್ಲ ಕಡೆ ಎಡೆಬಿಡದೆ ಈ ನಿರ್ಮೂಲನ ಕಾರ್ಯ ನಡೆಯಬೇಕು. ಆಗ ಈ ನಮ್ಮ ಉದ್ದೇಶ ಈಡೇರುವುದು, ಸಾಧ್ಯ. “ರಮೇಶಣ್ಣ ವಿವರಿಸಿದ.

ಅಷ್ಟರಲ್ಲಿ ಇನ್ನೊಮ್ಮೆ ಅಮ್ಮನ ಕರೆ ಕೇಳಿಸಿತು. ಎಲ್ಲರೂ ಎದ್ದು ಮನೆ ಕಡೆಗೆ ನಡೆಯತೊಡಗಿದರು. ಹಾಗೆ ನಡೆಯುತ್ತಲೇ ಕಿಟ್ಟ ಇನ್ನೊಂದು ಪ್ರಶ್ನೆ ಹಾಕಿದ, “ರಮೇಶಣ್ಣಾ, ಈ ಯುಪಟೋರಿಯಂ ನಮ್ಮ ದೇಶದ ಸಸ್ಯವೇ? ಇದರ ಮೂಲ ಎಲ್ಲಿ?”

“ಇದರ ಮೂಲ ದಕ್ಷಿಣ ಅಮೇರಿಕ. ಅಲ್ಲಿಂದ ನಾವು ತರಿಸಿದ ಗೋಧಿಯೊಂದಿಗೆ ಇದು ಇಲ್ಲಿಗೆ ಬಂದರಿಬೇಕು. ಈಗ ದೇಶದ ನಾನಾ ಭಾಗಗಳಲ್ಲಿ ಈ ಸಸ್ಯ ಹರಡಿಕೊಂಡಿದೆ. ನಮ್ಮ ಪರಿಸರವನ್ನು ಹಾಳು ಮಾಡುತ್ತಿದೆ. ಇದನ್ನು ನಾವು ತಡೆಯಬೇಕು. ಇಲ್ಲವಾದರೆ ಅಪಾಯ ಖಂಡಿತ” ರಮೇಶಣ್ಣ ಮಾತು ಮುಗಿಸಿದ.

“ಇಂದು ರಮೇಶಣ್ನ ಮಾಸ್ತರ್ ಆದರು., ತೋಟದಲ್ಲೊಂದು ಪಾಠ ನಡೆಯಿತು.” ಕಮಲಿ ನಗೆಯಾಡಿದಳು. ಆಗಲೇ ಅವರು ಮನೆ ಬಾಗಿಲಿಗೆ ಬಂದಿದ್ದರು. “ಬನ್ನಿ ಮಕ್ಕಳೇ, ಬೇಗ ಬನ್ನಿ. ಕಾಫಿ ಆರಿ ಹೋಗುತ್ತಿದೆ.” ಎನ್ನುತ್ತ ಅಮ್ಮ ಅವರನ್ನು ಬರಮಾಡಿಕೊಂಡರು.