ಒಬ್ಬ ಬಡವ ಇದ್ದ. ಅವನ ಹೆಸರು ತಿಮ್ಮ. ಕೂಲಿ ಕೆಲಸ ಮಾಡಿ ಅವನು ಜೀವನ ಸಾಗಿಸುತ್ತಿದ್ದ.

ತಿಮ್ಮನಿಗೆ ಒಮ್ಮೆ ಒಂದು ಬಾಳೆಗಿಡ ಸಿಕ್ಕಿತು. ಅವನು ಅದನ್ನು ಮನೆಗೆ ತಂದ. ಬಚ್ಚಲಿನ ಹಿಂದುಗಡೆ ಒಂದು ಗುಂಡಿ ತೋಡಿದ. ಅದಕ್ಕೆ ಬೂದಿ, ಗೊಬ್ಬರ ಹಾಕಿದ. ಅದರಲ್ಲಿ ಆ ಗಿಡವನ್ನು ನೆಟ್ಟ.

ದಿನಗಳು ಉರುಳಿದವು. ಬಾಳೆಗಿಡ ಜೀವ ಹಿಡಿಯಿತು. ಬೆಳೆಯತೊಡಗಿತು. ತಿಮ್ಮನಿಗೆ ಸಂತೋಷವಾಯಿತು.

ಒಮ್ಮೆ ತಿಮ್ಮ ಬಾಳೆಗಿಡದ ಬಳಿಗೆ ಬಂದ. ಬಚ್ಚಲಿನ ನೀರು ಅದರ ಪಕ್ಕದಲ್ಲೇ ಹರಿದು ಹೋಗುತ್ತಿತ್ತು. ಅಲ್ಲಿನ ಮಣ್ಣು ಪಸೆಯ ಇಂದ ಕೂಡಿತ್ತು. ಆ ಮಣ್ಣಿನಲ್ಲಿ ನೂರಾರು ಎರೆಹುಳಗಳು ಇದ್ದವು.

ತಿಮ್ಮ ಎರೆಹುಳುಗಳನ್ನು ನೋಡಿದ. “ಬಾಳೆಗೆ ಹಾಕಿದ ಗೊಬ್ಬರವನ್ನೆಲ್ಲ ಅವು ತಿನ್ನುತ್ತವೆ. ಇನ್ನು ಬಾಳೆ ಸೊರಗಿ ಹೋಗುತ್ತದೆ.” ಎಂದು ಅವನು ಯೋಚಿಸಿದ. ಅವನಿಗೆ ಎರೆಹುಳಗಳ ಮೇಲೆ ಸಿಟ್ಟು ಬಂತು. ಒಡನೆ ಅವನು ಮನೆಗೆ ಹಿಂದಿರುಗಿದ. ಡಿ.ಡಿ.ಟಿ. ಪೌಡರಿನ ತೊಟ್ಟೆಗಾಗಿ ಅವನು ಹುಡುಕಾಡಿದ. ಅದು ಅವನ ಕೈಗೆ ಸಿಕ್ಕಿತು. ಅದನ್ನು ಹಿಡಿದುಕೊಂಡು ಅವನು ಬಾಲೆಗಿಡದ ಕಡೆಗೆ ಹೆಜ್ಜೆ ಹಾಕಿದ. ಆಗಲೇ ಬಾಬು ಮಾಸ್ತರರು ಅವನಿಗೆ ಎದುರಾದರು.

“ಏನು ತಿಮ್ಮಾ, ಎಲ್ಲಿಗೆ ಹೊರಟೆ?” ಅವರು ಅವನನ್ನು ವಿಚಾರಿಸಿದರು.

“ಒಂದು ಬಾಳೆಗಿಡ ನೆಟ್ಟಿದ್ದೆ. ಅದಕ್ಕೆ ತುಂಬ ಗೊಬ್ಬರವನ್ನೂ ಹಾಕಿದ್ದೆ. ಈಗ ನೋಡಿದರೆ, ಬಾಳೆಯ ಬುಡದಲ್ಲಿ ಎರೆಹುಳುಗಳೇ ತುಂಬಿ ಹೋಗಿವೆ. ಬಾಳೆಗೆ ಹಾಕಿದ ಗೊಬ್ಬರವೆಲ್ಲ ಅವುಗಳ ಪಾಲಾಗುತ್ತದೆ. ಆ ಎರೆಹುಳಗಳಿಗೆ ಏನಾದರೂ ಮಾಡಬೇಕಲ್ಲ?” ತಿಮ್ಮ ಹೇಳಿದ

“ಏನು, ಎರೆಹುಳುಗಳೇ? ಅವುಗಳಿಗೆ ಏನು ಮಾಡಲು ಹೊರಟಿರುವೆ ನೀನು?” ಅವರು ಮತ್ತೆ ಕೇಳಿದರು.

“ಮಾಡುವುದೇನು? ಇರುವೆಗಳಿಗಾಗಿ ತಂದು ಇರಿಸಿದ ಡಿ.ಡಿ.ಟಿ. ಇದೆ. ಅದನ್ನ ಉ ಎರೆಹುಳುಗಳ ಮೇಲೆ ಹಾಕಿ ಬಿಡುತ್ತೇನೆ. ಎಲ್ಲ “ಪಡ್ಚ” ಆಗುತ್ತವೆ.” ಎಂದ ತಿಮ್ಮ.

“ಬೇಡ ತಿಮ್ಮಾ, ಹಾಗೆ ಮಾಡಬೇಡ. ಎರೆಹುಳಗಳು ಅಪಕಾರಿಗಳಲ್ಲ. ಅವು ನಮಗೆ ಉಪಕಾರಿಗಳು., ನಮ್ಮ ಮಿತ್ರರು” ಮಾಸ್ತರರು ಹೇಳತೊಡಗಿದರು.

“ಏನು, ಎರೆಹುಳುಗಳು ಉಪಕಾರಿಗಳೇ? ಅವು ನಮಗೇನು ಉಪಕಾರ ಮಾಡುತ್ತವೆ.? ಹೇಗೆ ಉಪಕಾರ ಮಾಡುತ್ತವೆ.?” ತಿಮ್ಮ ಕುತೂಹಲ ವ್ಯಕ್ತಪಡಿಸಿದ.

“ತಿಮ್ಮಾ, ಎರೆಹುಳಗಳು ಮಣ್ಣನ್ನು ತಿನ್ನುತ್ತವೆ. ಮಣ್ಣಿನೊಡನೆ ಕೊಳೆತ ಎಲೆ, ಹುಲ್ಲು, ತರಕಾರಿ ಇತ್ಯಾದಿಗಳನ್ನೂ ಮುಕ್ಕುತ್ತವೆ. ಜೀರ್ಣವಾಗದ ಆಹಾರ ಮತ್ತು ಮಣ್ಣನ್ನು ಅವು ಹೊರಚೆಲ್ಲುತ್ತವೆ. ಇದನ್ನು “ಕುಪ್ಪಲು ಮಣ್ಣು” ಎನ್ನುತ್ತಾರೆ. ಬಹಳ ಸಾರವತ್ತಾದ ಗೊಬ್ಬರ ಇದು.” ಮಾಸ್ತರರು ವಿವರಿಸಿದರು.

“ಹೌದೇ? ಈ ಸಂಗತಿ ನನಗೆ ಗೊತ್ತೇ ಇರಲಿಲ್ಲ.” ತಿಮ್ಮ ಒಪ್ಪಿಕೊಂಡ

“ಇಷ್ಟು ಮಾತ್ರವಲ್ಲ ತಿಮ್ಮಾ, ಎರೆಹುಳಗಳು ನೆಲದ ಮೇಲೆಲ್ಲಾ ಬಿಲಗಳನ್ನು ಕೊರೆಯುತ್ತವೆ. ಭೂಮಿಯನ್ನು ಉಳುವ ಕೆಲಸವನ್ನೂ ಅವು ಮಾಡುತ್ತವೆ. ಇದರಿಂದ ಮಣ್ಣಿನಲ್ಲಿ ಗಾಳಿ-ನೀರುಗಳ ಸಂಖಚಾರಕ್ಕೆ ಅನುಕೂಲವಾಗುವುದು. ಮರಗಿಡಗಳು ಬೇರು ಬಿಡುವುದಕ್ಕೂ ಸಹಾಯವಾಗುವುದು. ಮಣ್ಣಿನಲ್ಲಿ ಎರೆಹುಳಗಳು ಹೆಚ್ಚಿದಷ್ಟೂ ಮಣ್ಣಿನ ಸಾರ ಹೆಚ್ಚುವುದು. ಇಳುವರಿ ಅಧಿಕಗೊಳ್ಳುವುದು. ಇದು ಉಪಕಾರವಲ್ಲವೇ? ಇಷ್ಟು ಉಪಕಾರ ಮಾಡುವ ಎರೆಹುಳಗಳನ್ನು ನಾವು ಕೊಲ್ಲಬಹುದೇ?” ಮಾಸ್ತರರು ಪುಟ್ಟ ಭಾಷಣವನ್ನೇ ಮಾಡಿಬಿಟ್ಟರು.

ಈಗ ತಿಮ್ಮನಿಗೆ ತನ್ನ ತಪ್ಪಿನ ಅರಿವಾಯಿತು. “ಮಾಸ್ತರರೇ, ನನಗೆ ಇದೊಂದೂ ತಿಳಿದಿರಲಿಲ್ಲ. ಹಾಗಾಗಿಯೇ ನಾನು ಎರೆಹುಳಗಳನ್ನು ಕೊಲ್ಲ ಹೊರಟಿದ್ದೆ. ಇಂದು ನಾನು ದೊಡ್ಡದೊಂದು ತಪ್ಪು ಮಾಡಿಬಿಡುತ್ತಿದ್ದೆ. ನೀವು ವಿಷಯ ತಿಳಿಸಿ ಉಪಕಾರ ಮಾಡಿದಿರಿ. ನನ್ನ ತಪ್ಪನ್ನು ತಿದ್ದಿಕೊಳ್ಳುತ್ತೇನೆ. ಈ ಎರೆಹುಳಗಳ ಗೌಜಿಯಲ್ಲಿ ನೀವೇನು ಬಂದಿರಿ ಎಂದೂ ವಿಚಾರಿಸಲಿಲ್ಲ, ನಾನು.  ಬನ್ನಿ, ಚಾವಡಿಯಲ್ಲಿ ಕೂತು ಮಾತಾಡೋಣ.” ಎನ್ನುತ್ತ ಅವನು ಹಿಂದಿರುಗಿ ನಡೆಯತೊಡಗಿದ. ಮಾಸ್ತರರು ಅವನನ್ನು ಹಿಂಬಾಲಿಸಿದರು.