ಊರ ಹೊರ ಭಾಗದಲ್ಲಿ ಒಂದು ಬಯಲು ಇತ್ತು. ಹುಲ್ಲಿನಿಂದ ತುಂಬಿದ ಬಯಲು ಅದು. ಸದಾ ಹಸಿರಾಗಿ ಕಂಗೊಳಿಸುತ್ತಿತ್ತು. ನೂರಾರು ದನಗಳಲು ಅಲ್ಲಿ ಮೇಯಲು ಬರುತ್ತಿದ್ದವು. ಅವುಗಳಲ್ಲಿ ಒಂದು ಮುದಿ ದನ ಇತ್ತು. ಉದ್ದ ಕೋಡಿನ ಕಾಳಿ ದನ ಅದು. ಕರುಹಾಕಿ ಹೆಚ್ಚು ಕಾಲ ಕಳೆದಿರಬೇಕು. ಅದು ಹಾಲು ಕೊಡುತ್ತಿರಲಿಲ್ಲ. ಹಾಗಾಗಿ ಮನೆಯವರು ಅದನ್ನು ಪ್ರೀತಿಯಿಂದ ನೋಡುತ್ತಿರಲಿಲ್ಲ. ಅದರ ಆರೈಕೆಯನ್ನೂ ಮಾಡುತ್ತಿರಲಿಲ್ಲ. ಯಾರಿಗೂ ಬೇಡವಾದ ಜೀವಿಯಾಗಿತ್ತು ಆ ದನ.

ದಿನವೂ ಆ ದನ ಬಯಲಿಗೆ ಬರುತ್ತಿತ್ತು. ಆದರೆ ಉಳಿದ ದನಗಳಂತೆ ಅದು ಹೆಚ್ಚು ಹೊತ್ತು ಹುಲ್ಲು ಮೇಯುತ್ತಿರಲಿಲ್ಲ. ಅದರ ಮೈಮೇಲೆ ಸಾವಿರಾರು ಉಣ್ಣಿಗಳಿದ್ದವು. ಅವು ದನಕ್ಕೆ ಕಚ್ಚುತ್ತಿದ್ದವು. ಅದರ ನೆತ್ತರು ಹೀರುತ್ತಿದ್ದವು. ಇದರಿಂದ ಆ ದನಕ್ಕೆ ತುಂಬ ನೋವು ಆಗುತ್ತಿತ್ತು. ಎಡೆಬಿಡದೆ ಅದರ ಮೈ ತುರಿಸುತ್ತಿತ್ತು. ಅದು ಆಗಾಗ ತನ್ನ ಮೈಯನ್ನು ನೆಕ್ಕಿಕೊಳ್ಳುತ್ತಿತ್ತು. ಹತ್ತಿರದ ಕಲ್ಲಿಗೋ ಮರಕ್ಕೋ ಮೈ ತಿಕ್ಕಿಕೊಳ್ಳುತ್ತಿತ್ತು. ಹೀಗೆ ಅದು ತುಂಬ ಕಷ್ಟ ಅನುಭವಿಸುತ್ತಿತ್ತು.. ಆದರೆ ಯಾರೂ ಅದನ್ನು ಗಮನಿಸುತ್ತಿರಲಿಲ್ಲ. ಅದರ ಸಹಾಯಕ್ಕೂ ಬರುತ್ತಿರಲಿಲ್ಲ.

ಆ ಬಯಲಿನ ಒಂದು ಕಡೆ ದೊಡ್ಡದೊಂದು ಮರ ಇತ್ತು. ಆ ಮರದಲ್ಲಿ ಕೆಲವು ಕಾಗೆಗಳು ವಾಸಿಸುತ್ತಿದ್ದವು. ಅವುಗಳಲ್ಲಿ ಒಂದು ಕಾಗೆ ಒಮ್ಮೆ ಆ ಕಾಳಿ ದನವನ್ನು ನೋಡಿತು. ಅದರ ಕುತೂಹಲ ಕೆರಳಿತು. ದನವು ಹಾಗೇಕೆ ಮಾಡುತ್ತದೆ ಎಂದು ಅದು ತಿಳಿಯ ಬಯಸಿತು.

ಒಡನೆ ಕಾಗೆ ದನದ ಬಳಿಗೆ ಹಾರಿತು. “ಕಾಳಮ್ಮಾ, ಕಾಳಮ್ಮಾ, ನೀನು ಹೆಚ್ಚು ಹೊತ್ತು ಮೇಯುವುದಿಲ್ಲ ಒಂದುಗಳಿಗೆ ಸುಮ್ಮನೆ ಕೂಡುವುದಿಲ್ಲ. ಯಾವಾಗಲೂ ಮೈನೆಕ್ಕಿಕೊಳ್ಳುತ್ತೀ, ಇಲ್ಲವೇ ತಿಕ್ಕಿಕೊಳ್ಳುತ್ತೀ. ಇದೇಕೆ ಹೀಗೆ? ನಿನಗೇನು ತೊಂದರೆ ಇದೆ?” ಎಂದು ಅದು ವಿಚಾರಿಸಿತು.

“ನನ್ನ ಮೈಯನ್ನೊಮ್ಮೆ ಸರಿಯಾಗಿ ನೋಡು. ಆಗ ನಿನಗೇ ತಿಳಿಯುತ್ತದೆ.” ದನ ಉತ್ತರ ಕೊಟ್ಟಿತು.

ಕಾಗೆ ದನದ ಹತ್ತಿರಕ್ಕೆ ಕುಪ್ಪ ಳಿಸಿತು. ದನದ ಮೈಮೇಲೆ ನೋಟ ಹರಿಸಿತು. ಒಡನೆ , “ಅಬ್ಬಾ ಎಷ್ಟು ಉಣ್ಣಿಗಳು!” ಎಂದು ಅದು ಉದ್ಗಾರ ತೆಗೆಯಿತು.

“ಹೌದು ಕಾಗಕ್ಕಾ, ನೂರಾರು ಉಣ್ಣಿಗಳು ನನ್ನ ಮೈಮೇಲೆ ಇವೆ. ಅವು ನನಗೆ ಕಚ್ಚುತ್ತವೆ. ನನ್ನ ನೆತ್ತರು ಹೀರುತ್ತವೆ. ಕ್ಷಣಕ್ಷಣಕ್ಕೂ ನನ್ನನ್ನು ಕೊಲ್ಲುತ್ತವೆ. ಇದೇ ನನಗಿರುವ ತೊಂದರೆ.” ಎಂದಿತು ದನ.

“ಅಷ್ಟೇ ತಾನೇ? ನಿನಗೆ ನಾನು ಸಹಾಯ ಮಾಡುತ್ತೇನೆ. ಉಣ್ಣಿಗಳನ್ನು, ಕುಕ್ಕಿ ಕುಕ್ಕಿ ನಾನು ತಿಂದು ಬಿಡುತ್ತೇನೆ . ಆಗ ನನ್ನ ತೊಂದರೆ ದೂರವಾಗುತ್ತದೆ’ ಕಾಗೆ ಹೇಳಿತು.

“ಆದರೆ ಅದು ನಿನಗೆ ಸಾಧ್ಯವೇ? ಎಷ್ಟನ್ನು ನೀನು ಹೆಕ್ಕಬಲ್ಲೆ? ಎಷ್ಟನ್ನು ತಿನ್ನಬಲ್ಲೆ? ಇಂದು ನೂರು ಉಣ್ಣಿಗಳು ಕಡಿಮೆಯಾದರೆ ನಾಳೆ ಇನ್ನೂರು ಮತ್ತೆ ಸೇರಿಕೊಳ್ಳುತ್ತವೆ. ನಮ್ಮ ಹಟ್ಟಿ ಉಣ್ಣಿಗಳಿಂದ ತುಂಬಿ ಹೋಗಿದೆ.” ದನ ಬೇಸರ ವ್ಯಕ್ತಪಡಿಸಿತು.

“ಅದೇಕೆ ಹಾಗೆ? ನಿನ್ನ ಯಜಮಾನ ಹಟ್ಟಿಯನ್ನು ಗುಡಿಸುವುದಿಲ್ಲವೇ? ತಿಕ್ಕಿ ತಿಕ್ಕಿ ನಿನ್ನ ಮೈತೊಳೆಯುವುದಿಲ್ಲವೇ?” ಕಾಗೆ ಪ್ರಶ್ನಿಸಿತು.

“ನಾನು ಹಾಲು ಕೊಡುತ್ತಿದ್ದಾಗ ಎಲ್ಲವೂ ಸರಿಯಾಗಿತ್ತು. ಈಗ ನಾನು ಬತ್ತಿದ ದನ. ಯಾರಿಗೆ ಬೇಕು ಹೇಳು? ಯಜಮಾನ, ಯಜಮಾನಿ ಯಾರೂ ನನ್ನನ್ನು ಕಣ್ಣೆತ್ತಿ ನೋಡುವುದಿಲ್ಲ. ಈ ಉಣ್ಣಿಗಳಂತೂ ನನ್ನನ್ನು ತಿನ್ನುತ್ತಲೇ ಇರುತ್ತವೆ.” ದನ ತನ್ನ ಸಂಕಟ ಹೇಳಿಕೊಂಡಿತು.

“ಚಿಂತಿಸಬೇಡ ಕಾಳಮ್ಮಾ. ನೀನು ಸಹಕರಿಸಿ ಬಿಡು. ನಿನಗೆ ನೆಮ್ಮದಿ ನಾನು ನೀಡುತ್ತೇನೆ. ನನ್ನ ಮಾತನ್ನು ನಂಬು.” ಕಾಗೆ ಧೈರ್ಯ ಹೇಳಿತು.

“ನಾನೇನು ಮಾಡಬೇಕು.? ನಿನಗೆ ಹೇಗೆ ಸಹಕಾರ ನೀಡಬೇಕು?” ದನ ಪ್ರಶ್ನೆ ಹಾಕಿತು.

“ಮುಂದೆ ಬಂದರೆ ಹಾಯಬೇಡ. ಹಿಂದೆ ಬಂದರೆ ಒದೆಯಬೇಡ. ನಾನು ಬಳಿಗೆ ಬಂದಾಗ ನೀನು ಸುಮ್ಮನೆ ನಿಂತು ಬಿಡು. ಈ ಉಣ್ಣಿಗಳಿಂದ ನಿನ್ನನ್ನು ನಾನು ರಕ್ಷಿಸುತ್ತೇನೆ .” ಕಾಗೆ ಮತು ಕೊಟ್ಟಿತು. ದನ ಅದಕ್ಕೆ ಒಪ್ಪಿಕೊಂಡಿತು.

ಒಡನೆಕಾಗೆ” ಕಾಕಾಕಾ..” ಎಂದು ಗಟ್ಟಿಯಾಗಿ ಕೂಗಿತು. ಕ್ಷಣದೊಳಗೆ ಅದರ ಬಳಗದ ಕೆಲವು ಕಾಗೆಗಳು ಅಲ್ಲಿ ಒಟ್ಟಾದವು. ಅವು ತಮ್ಮೊಗಳಗೆ ಏನೋ ಮಾತಾಡಿಕೊಂಡವು. ಮತ್ತೆ ನಿಮಿಷದೊಳಗೆ ಅವುಗಳ ಕೆಲಸ ಆರಂಭವಾಯಿತು. ದನಕ್ಕೆ ನೋವಾಗದಂತೆ ಅವು ಹೆಕ್ಕಿ, ಹೆಕ್ಕಿ ಉಣ್ಣಿಗಳನ್ನು ತಿನ್ನತೊಡಗಿದವು. ತಾಸು ಹೊತ್ತು ಕಳೆವಷ್ಟರಲ್ಲಿ ಅರ್ಧಕ್ಕರ್ಧ ಉಣ್ಣಿಗಳು ಕಾಗೆಗಳ ಹೊಟ್ಟೆ ಸೇರಿದ್ದವು. ದನದ ಸಂಕಟ ತುಂಬ ಕಡಿಮೆಯಾಗಿತ್ತು. ಕಾಗೆಗಳಿಗೆ ವಂದಿಸಿ , ಅದು ತನ್ನ ಹಟ್ಟಿಗೆ ಹೊರಟು ಹೋಯಿತು.

ಅಂದಿನಿಂದ ಆ ಪ್ರಾಣಿ -ಪಕ್ಷಿಗಳ ನಂಟು ಬೆಳೆಯಿತು. ಪ್ರತಿ ದಿನವೂ ದನ ಆ ಮರದ ಬುಡಕ್ಕೆ ಬರುತ್ತಿತ್ತು., ತೆಪ್ಪಗೆ ಅಲ್ಲಿ ನಿಲ್ಲುತ್ತಿತ್ತು. ಕೂಡಲೇ ಕಾಗೆಗಳೂ ಅಲ್ಲಿ ಹಾಜರಾಗುತ್ತಿದ್ದವು. ದನದ ಮೈಮೇಲಿನ ಉಣ್ಣಿಗಳನ್ನು ಅವು ತಿನ್ನುತ್ತಿದ್ದವು. ಇದರಿಂದ ಕಾಗೆಗಳಿಗೆ ದಿನವೂ ಆಹಾರ ಸಿಗುತ್ತಿತ್ತು. ದನಕ್ಕೆ ಉಣ್ಣಿಗಳ ತೊಂದರೆ ತಪ್ಪುತ್ತಿತ್ತು. ಹೀಗೆ ಸಹಕಾರದ ಸುಖ ಅವುಗಳದಾಯಿತು.

ಇಂದಿಗೂ ಇಂತಹ ನೋಟಗಳು ಅಲ್ಲಲ್ಲಿ ಕಾಣಸಿಗುತ್ತವೆ. ನೀವು ನೋಡಿದ್ದೀರಾ?