ಅದೊಂದು ಸಣ್ಣ ಊರು. ಸುಮಾರು ನೂರು ಮನೆಗಳುಅಲ್ಲಿದ್ದವು. ಜನಸಂಖ್ಯೆ ಎಂಟು ನೂರನ್ನು ದಾಟಿರಲಿಲ್ಲ. ಆದರೂ ಆ ಊರು ಸುದ್ದಿ ಮಾಡಿತು. ಒಳ್ಳೆಯ ಹೆಸರನ್ನೂ ಪಡೆಯಿತು. ಅದಕ್ಕೆ ಕಾರಣರಾದವರು ಅಲ್ಲಿನ ಮಕ್ಕಳು. ಅದು ಹೇಗೆ? ಅವರೇನು ಮಾಡಿದರು?

ಆ ಊರಿನ ಹೃದಯ ಭಾಗದಲ್ಲಿ ಒಂದು ಶಾಲೆ ಇತ್ತು. ಆದರ್ಶ ಗುರುಗಳೊಬ್ಬರು ಅದರ ಮುಖ್ಯಸ್ಥರಾಗಿದ್ದರು. ಐವರು ಸಹಾಯಕರೊಂದಿಗೆ ಅವರು ಅಲ್ಲಿ ದುಡಿಯುತ್ತಿದ್ದರು. ಊರಿನ ಎಲ್ಲ ಚಟುವಟಿಕೆಗಳಿಗೆ ಕೇಂದ್ರವಾಗಿತ್ತು ಆ ಶಾಲೆ.

ಒಂದು ದಿನ ಶಾಲೆಯಲ್ಲಿ ಗಣ್ಯರೊಬ್ಬರ ಭಾಷಣವಿತ್ತು. ಪ್ಲಾಸ್ಟಿಕ್‌ನ ಬಳಕೆಯ ಅಪಾಯದ ಬಗ್ಗೆ ಅವರು ಭಾಷಣ ಮಾಡುತ್ತ, ವಿವರಿಸಿ ಹೇಳಿದರು “ನಾವು ನಮ್ಮ ಅನುಕೂಲಕ್ಕೆಂದು ಪ್ಲಾಸ್ಟಿಕನ್ನು ಸೃಷ್ಟಿಸಿದೆವು, ಬಹುಬಗೆಯಲ್ಲಿ ಅದನ್ನು ಬಳಸುತ್ತ ಬಂದೆವು. ಇಂದು ಬಹು ಉಪಯೋಗಿಯಾಗಿರುವ ಪ್ಲಾಸ್ಟಿಕ್‌ನಮ್ಮ ಭೂಮಿಗೆ, ನಮ್ಮ ಪರಿಸರಕ್ಕೆ ತುಂಬ ಹಾನಿ ಉಂಟು ಮಾಡುತ್ತಿದೆ. ಮಣ್ಣಿನ ಒಳಗಿರಲಿ, ಹೊರಗಿರಲಿ, ಪ್ಲಾಸ್ಟಿಕ್‌ಕೊಳೆಯುವುದಿಲ್ಲ. ನೀರಲ್ಲಿ ಕರಗುವುದಿಲ್ಲ. ಸುಧೀರ್ಘಕಾಲ ಅದು ಇದ್ದ ಹಾಗೇ ಉಳಿಯುತ್ತದೆ, ಪರಿಸರವನ್ನು ಅಂದಗೆಡಿಸುತ್ತದೆ, ಭೂಮಿಯಲ್ಲಿ ನೀರು ಇಂಗಲು ಅಡ್ಡಿಯಾಗುತ್ತದೆ. ಭೂಗರ್ಭದ ಒರತೆಗಳನ್ನು ಅದು ತಡೆಯುತ್ತದೆ. ಪ್ಲಾಸ್ಟಿಕ್‌ಇದ್ದಲ್ಲಿ ಎರೆಹುಳುಗಳು ಇರುವುದಿಲ್ಲವಾದ ಕಾರಣ, ಮಣ್ಣಿನ ಫವಲತ್ತತೆ ಕಡಿಮೆಯಾಗುತ್ತದೆ. ಸಸ್ಯಗಳಿಗೆ ನೆಲದಲ್ಲಿ ಬೇರು ಇಳಿಸಲಿಕ್ಕೂ ಅದು ತಡೆಯೊಡ್ಡುತ್ತದೆ.

“ರಸ್ತೆ ಬದಿಯ ಚರಂಡಿಗಳಲ್ಲಿ, ನೀರಕೊಳವೆಗಳಲ್ಲಿ ನಿಲುಕಿಕೊಂಡ ಪ್ಲಾಸ್ಟಿಕ್‌, ನೀರ ಹರಿವನ್ನು ಅಡ್ಡಗಟ್ಟುತ್ತದೆ. ನೀರು ನಿಂತಲ್ಲಿ ಕ್ರಿಮಿಕೀಟಗಳು ಹುಟ್ಟಿಕೊಳ್ಳುತ್ತವೆ. ರೋಗರುಜಿನಗಳು ಕಾಣಿಸಿಕೊಳ್ಳುತ್ತವೆ. ಪ್ಲಾಸ್ಟಿಕ್‌ತಿಂದ ಜಿಂಕೆ, ದನ  ಮೊದಲಾದ ಪ್ರಾಣಿಗಳು ಪ್ರಾಣಾಪಾಯಕ್ಕೆ ಒಳಗಾಗುತ್ತವೆ. ಪ್ಲಾಸ್ಟಿಕ್‌ಆಟಿಕೆಗಳಿಂದ ಮಕ್ಕಳ ದೇಹದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ನಮ್ಮ ತಾಯಂದಿರ ಎದೆಹಾಲಲ್ಲೂ ಪ್ಲಾಸ್ಟಿಕ್‌ಅಂಶ ಗೋಚರಿಸತೊಡಗಿದೆ. ಆಹಾರ ವಸ್ತುಗಳನ್ನು ಒಯ್ಯಲು ಬಣ್ಣ ಬಣ್ಣದ ಪ್ಲಾಸ್ಟಿಕ್‌- ಪಾಲಿಥಿನ್‌ಚೀಲಗಳನ್ನು ಬಳಸುವುದು ಇನ್ನಷ್ಟು ಅಪಾಯಕಾರಿ. ಏಕೆಂದರೆ ಅವುಗಳಲ್ಲಿರುವ ಸೀಸ, ಕ್ಯಾಡ್ಮಿಯಂ ಮೊದಲಾದವು ಆಹಾರ ವಸ್ತುಗಳ ಜೊತೆಗೆ ನಮ್ಮ ದೇಹವನ್ನು ಸೇರುತ್ತವೆ. ಪರಿಣಾಮವಾಗಿ, ನಾವು ಕ್ಯಾನ್ಸರ್, ಮೂತ್ರಕೋಶದ ಸಮಸ್ಯೆಗಳಂಥ ತೊಂದರೆಗಳಿಗೆ ಒಳಗಾಗುತ್ತೇವೆ.”

“ಬೆಂಕಿಯಲ್ಲಿ ಸುಟ್ಟು, ಪ್ಲಾಸ್ಟಿಕ್‌ವಸ್ತುಗಳನ್ನು ನಾಶಗೊಳಿಸುವುದು ಸಹ ಅಪಾಯಕಾರಿಯೇ. ಕಾರಣ, ಪ್ಲಾಸ್ಟಿಕ್‌ವಸ್ತುಗಳನ್ನು ಸುಟ್ಟಾಗ ಕಾರ್ಬನ್‌ಮೊನಾಕ್ಸೈಡ್‌, ಕ್ಲೋರಿನ್‌ಇತ್ಯಾದಿ ಹಲವು ಬಗೆಯ ವಿಷಾನಿಲಗಳು ಹೊರಬಂದು, ಗಾಳಿಯಲ್ಲಿ ಸೇರುತ್ತವೆ., ನಮ್ಮ ವಾತಾವರಣವನ್ನು ಕೆಡಿಸಿಬಿಡುತ್ತವೆ. ಅಷ್ಟೇ ಅಲ್ಲ, ಸುಟ್ಟಾಗ ಪ್ಲಾಸ್ಟಿಕ್‌ತನ್ನ ಸ್ವರೂಪವನ್ನು ಮಾತ್ರ ಬದಲಾಯಿಸಿ, ಮುದ್ದೆಯಾಗಿ ಮಣ್ಣಿನಲ್ಲಿಯೇ ಉಳಿದುಬಿಡುತ್ತದೆ. ಕೈಗಾರಿಕಾ ಕಶ್ಮಲಗಳಲ್ಲೂ ಪ್ಲಾಸ್ಟಿಕ್‌ಪಾಲು ಬಲು ದೊಡ್ಡದು. ಪ್ಲಾಸ್ಟಿಕ್‌ನಮಗರಿಯದಂತೆ ನಮ್ಮ ದೇಹಕ್ಕೆ ವಿಷ ಉಣಿಸುತ್ತದೆ. ನಮ್ಮ ನೀರು, ಮಣ್ಣು, ಆಹಾರ ಎಲ್ಲವನ್ನೂ ವಿಷವಾಗಿಸುತ್ತದೆ. ಪರಿಸರವನ್ನು ಹಾಳುಗೆಡಹುತ್ತದೆ.  ಆದುದರಿಂದ ಕೆಲವು ದೇಶಗಳು ಪ್ಲಾಸ್ಟಿಕ್‌ಚೀಲಗಳ ಬಳಕೆಗೆ ನಿಷೇಧ ಹೇರಿವೆ. ನಮ್ಮ ದೇಶದ ಕೆಲವು ರಾಜ್ಯಗಳೂ ಅಂಥ ಪ್ರಯತ್ನ ನಡೆಸಿವೆ. ಆದರೆ ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಬಗ್ಗೆ ಮೌನ ವಹಿಸಿವೆ. ಪ್ಲಾಸ್ಟಿಕ್‌ಉದ್ಯಮ ಲಕ್ಷಗಟ್ಟಲೆ ಜನಕ್ಕೆ ಉದ್ಯೋಗ ಒದಗಿಸುತ್ತಿರುವ ಕಾರಣ ಅವು ಹಿಂದೆ ಮುಂದೆ ನೋಡುತ್ತಿರಬಹುದು. ಆದರೆ ನಾವು ತೆಪ್ಪಗಿರಬಾರದು”

“ನಮ್ಮ ಹಿತ ಕಾಪಾಡಲು ನಾವು ಮುಂದಾಗಬೇಕು. ಜನಕ್ಕೆ ನಾವು ನಿಜಸ್ಥಿತಿಯನ್ನು ತಿಳಿಸಬೇಕು. ಪ್ರತಿಯೊಂದು ಊರಿನ ಶಾಲಾ ಕಾಲೇಜುಗಳ ಶಿಕ್ಷಕರೂ ವಿದ್ಯಾರ್ಥಿ ವಿದ್ಯಾರ್ಥಿಲನಿಯರೂ ಈ ಕೆಲಸಕ್ಕೆ ಮುಂದಾಗಬೇಕು. ವಿವಿಧ ಸೇವಾ ಸಂಸ್ಥೆಗಳು ಸಹಕರಿಸಬೇಕು. ತಮ್ಮ ತಮ್ಮ ಊರುಗಳಲ್ಲಾದರೂ ಪ್ಲಾಸ್ಟಿಕ್‌ಅತಿ ಬಳಕೆಯಾಗುವುದನ್ನು ತಡೆಯಬೇಕು. ನಾಗರಿಕರ ಮನ ಒಲಿಸಿ, ಅವರ ಸಹಕಾರ ಪಡೆದು, ಈ ಕೆಲಸ ನಡೆಯಬೇಕು. ಸಾಮೂಹಿಕ ಪ್ರಯತ್ನದಿಂದ ಇದು ಸುಲಭ ಸಾಧ್ಯ ಆಗಬಹುದು. ಸದ್ಯ ಈ ಶಾಲೆಯ ಗುರುಗಳೂ ಮಕ್ಕಳೂ ಈ ಊರಲ್ಲಿ ಈ ಕೆಲಸ ಆರಂಭಿಸಬೇಕು. ಉಳಿದವರಿಗೆ ಮಾದರಿ ಹಾಕಿಕೊಡಬೇಕು. ಆಗ ಮಾತ್ರ ಇಂದಿನ ಭಾಷಣ ಸಾರ್ಥಕವಾಗುವುದು. ಹೇಳಿ, ನೀವು ಈ ಕೆಲಸ ಮಾಡುವಿರಾ?” ಅವರು ಪ್ರಶ್ನಿಸಿದರು.

“ನಮ್ಮ ಮಕ್ಕಳು ಮುಂದೆ, ಬಂದರೆ ಅವರಿಗೆ ದಾರಿ ತೋರಲು ನಾವು ಸಿದ್ಧರಿದ್ದೇವೆ” ಮುಖ್ಯ ಗುರುಗಳು ಮಾತುಕೊಟ್ಟರು.

“ಹೇಳಿ ಮಕ್ಕಳೇ, ನಿಮ್ಮ ಊರಲ್ಲಿ ನೀವು ಈ ಕೆಲಸ ಮಾಡುವಿರಾ? ” ಭಾಷಣಕಾರರು ಮಕ್ಕಳನ್ನೇ ನೋಡುತ್ತ ಮತ್ತೆ ಪ್ರಶ್ನಿಸಿದರು.

“ಆಗಲಿ, ಸಾರ್, ನಮ್ಮ ಪ್ರಯತ್ನ ನಾವು ಮಾಡುತ್ತೇವೆ” ಮಕ್ಕಳೂ ದನಿಗೂಡಿಸಿದರು.

“ಒಳ್ಳೆಯದು. ಇದನ್ನು ಹೇಗೆ ಸಾಧಿಸುತ್ತೀರಿ ಎನ್ನುವುದು ನಿಮಗೂ ನಿಮ್ಮ ಗುರುಗಳಿಗೂ ಬಿಟ್ಟ ವಿಚಾರ. ನಿಮಗೆ ಯಶಸ್ಸು ಸಿಗಲಿ. ಪ್ಲಾಸ್ಟಿಕ್‌ಮುಕ್ತ ಊರು ನಿಮ್ಮದಾಗಲಿ. ಮುಂದಿನ ಬಾರಿ ಇಲ್ಲಿಗೆ ಬಂದಾಗ ನಿಮ್ಮ ಯಶಸ್ಸನ್ನು ಕಣ್ಣಾರೆ ಕಾಣುವ ಭಾಗ್ಯ ನಮ್ಮದಾಗಲಿ” ಭಾಷಣಕಾರರು ಮತು ಮುಗಿಸಿದರು. ಕೊನೆಗೆ ವಂದನೆ ಸಲ್ಲಿಸಿದ ಮುಖ್ಯ ಗುರುಗಳು, “ಈ ಕೆಲಸವನ್ನು ನಾವು ಹೇಗೆ ಮಾಡಬಹುದು ಎನ್ನುವ ಬಗ್ಗೆ ಎಲ್ಲ ಮಕ್ಕಳೂ ಯೋಚಿಸಿಕೊಂಡಲು ಬರಬೇಕು. ನಾಳೆ ನಿಶ್ಚಿತ ಕಾರ್ಯಕ್ರಮಗಳ ಕುರಿತು ನಿರ್ಧರಿಸೋಣ” ಎಂದರು. ಅಲ್ಲಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.

ಮರುದಿನ ಎಂದಿನಂತೆ ಮಕ್ಕಳು ಶಾಲೆಗೆ ಬಂದರು. ಸಂಜೆಯವರೆಗೆ ಅಂದಿನ ಪಾಠಗಳು ನಡೆದವು. ಅಂದು ಶಾಲೆಬಿಟ್ಟ ಬಳಿಕ ಸಮಾಲೋಚನೆಯ ಸಭೆ ನಡೆಯಿತು. ಎಲ್ಲ ಶಿಕ್ಷಕರೂ ಮಕ್ಕಳೂ ಹಾಜರಿದ್ದರು.

“ಪ್ಲಾಸ್ಟಿಕ್‌ಹಾವಳಿಯ ಬಗ್ಗೆ ನೀವೆಲ್ಲ ತಿಳಿದೇ ಇದ್ದೀರಿ. ಅದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಇದು ಹೇಗೆ ಸಾಧ್ಯ? ಈ ಬಗ್ಗೆ ಶಿಕ್ಷಕರೂ ಮಕ್ಕಳೂ ಸಲಹೆ ಸೂಚನೆಗಳನ್ನು ನೀಡಬೇಕು. ಸೂಕ್ತ ಕಂಡುದನ್ನು ಪಟ್ಟಿ ಮಾಡೋಣ. ಕಾರ್ಯಸೂಚಿಗೆ ಅನುಸಾರವಾಗಿ ಕೆಲಸ ಆರಂಭಿಸೋಣ” ಮುಖ್ಯ ಗುರುಗಳು ಮೊದಲ ಮಾತು ಹೇಳಿದರು.

ಮರುಗಳಿಗೆಯಲ್ಲೇ ಶಿಕ್ಷಕರಿಂದ, ಮಕ್ಕಳಿಂದ ಹಲವಾರು ಸೂಚನೆಗಳು ಬಂದವು. ಆ ಬಗ್ಗೆ ಸಾಕಷ್ಟು ಚರ್ಚೆಯೂ ನಡೆಯಿತು.

“ಶಾಲೆಯಲ್ಲಿ ಊರ ಹಿರಿಯರ ಸಭೆ ಕರೆಯಬೇಕು. ಅವರಿಗೆಲ್ಲ ಗುರುಗಳೇ ಪ್ಲಾಸ್ಟಿಕ್‌ನಿಷೇಧದ ಅಗತ್ಯವನ್ನು ತಿಳಿಹೇಳಬೇಕು. ಉಳಿದ ಕೆಲಸ ನಾವು ಮಾಡುತ್ತೇವೆ” ಇದು ಮಕ್ಕಳೆಲ್ಲರ ಅಭಿಪ್ರಾಯವಾಗಿತ್ತು. ಅದನ್ನು ಶಿಕ್ಷಕರೂ ಒಪ್ಪಿಕೊಂಡರು. ಅಂತೂ ಸಭೆ ಕೊನೆಗೊಳ್ಳುವ ಮೊದಲು, ಅವರ ಕಾರ್ಯಸೂಚಿ ಸಿದ್ಧವಾಯಿತು.

ಮುಂದಿನ ವಾರದ ಒಂದು ದಿನ ಶಾಲೆಯಲ್ಲಿ ಊರವರ ಸಭೆ ನಡೆಯಿತು. ಪಂಚಾಯತಿ ಮುಖ್ಯರು ಅಧ್ಯಕ್ಷತೆ ವಹಿಸಿದ್ದರು. ಊರ ಪ್ರಮುಖರೂ ಮಕ್ಕಳ ಹೆತ್ತವರೂ ಸಭೆಯಲ್ಲಿ ಹಾಜರಿದ್ದರು. ದಿನದ ದುಡಿಮೆಗೆ ರಜೆ ಮಾಡಲು ಆಗದ ಬಡವರು, ದಿನಗೂಲಿಯವರು ಮಾತ್ರ ಅಂದು ಬಂದಿರಲಿಲ್ಲ. ನೆರೆದವರಿಗೆ ಮುಖ್ಯ ಗುರುಗಳೇ ಸಭೆಯ ಉದ್ದೇಶವನ್ನು ತಿಳಿಯಪಡಿಸಿದರು. ಪ್ಲಾಸ್ಟಿಕ್‌ನಿಂದಾಗುವ ಹಾನಿಯ ಬಗ್ಗೆ ಮನಮುಟ್ಟುವಂತೆ ಅವರು ವಿವರಿಸಿ ಹೇಳಿದರು. “ನಾವು ನಮಗಾಗಿ, ನಮ್ಮ ಮಕ್ಕಳ ಹಿತಕ್ಕಾಗಿ, ಪ್ಲಾಸ್ಟಿಕ್‌ಬಳಕೆಯನ್ನು, ಅದರಲ್ಲೂ ಮುಖ್ಯವಾಗಿ ಬಣ್ಣ ಬಣ್ಣದ ಪ್ಲಾಸ್ಟಿಕ್‌ಪಾಲಿಥಿನ್‌ಚೀಲಗಳ ಬಳಕೆಯನ್ನು ಕೈಬಿಡಬೇಕು. ಅದರ ಹಾವಳಿಯಿಂದ ನಮ್ಮ ಊರನ್ನು ರಕ್ಷಿಸಬೇಕು. ಈ ದಿಸೆಯಲ್ಲಿ ನೀವೆಲ್ಲರೂ ಸೂಕ್ತ ಸಲಹೆ, ಸೂಚನೆ, ಸಹಕಾರಗಳನ್ನು ನೀಡಬೇಕು” ಎಂದು ಪ್ರಾರ್ಥಿಸಿದರು. ಸಭಾಧ್ಯಕ್ಷರು ಮುಖ್ಯ ಗುರುಗಳ ಮಾತನ್ನು ಅನುಮೋದಿಸಿ, ಅದಕ್ಕೆ ತನ್ನ ಬೆಂಬಲ ಘೋಷಿಸಿದರು. ವಿದ್ಯಾವಂತ ಯುವಕರನೇಕರು ತಮ್ಮ ಸಂಪೂರ್ಣ ಸಹಕಾರದ ಭರವಸೆ ನೀಡಿದರು. ಹಲವಾರು ಸಭಿಕರಿಂದಲೂ ಉಪಯುಕ್ತ ಸಲಹೆ ಸೂಚನೆಗಳು ಹರಿದು ಬಂದವು. ಸಭೆಯ ಕೊನೆಯಲ್ಲಿ ಮುಖ್ಯ ಗುರುಗಳ ಸೂಚನೆ ಮೇರೆಗೆ ಸಭಿಕರ ಪ್ರತಿಜ್ಞಾವಿಧಿ ನೇರವೇರಿತು. ಸಭಿಕರೆಲ್ಲ ಎದ್ದು ನಿಂತು,

೧. “ಇನ್ನು ಮುಂದೆ ನಾವು ಸಾಮಾನು ತರಲು ಬಟ್ಟೆಯ / ಗೋಣಿಯ ಚೀಲಗಳನ್ನೇ ಒಯ್ಯುತ್ತೇವೆ. ಅಥವಾ ಸಮಾಚಾರ ಪತ್ರಿಕೆಗಳ ಹಾಳೆಗಳನ್ನೋ ಅವುಗಳಿಂದ ಮಾಡಿದ ತೊಟ್ಟೆಗಳನ್ನೋ ಬಳಸುತ್ತೇವೆ.”

೨. “ಅನಿವಾರ್ಯ ಸಂದರ್ಭದಲ್ಲಿ ನಾವು ಮನೆಯಲ್ಲಿರುವ ಹಳೆಯ ಪ್ಲಾಸ್ಟಿಕ್‌ಚೀಲಗಳನ್ನು ಬಳಸಿದರೂ ಹೊಸ ಪ್ಲಾಸ್ಟಿಕ್‌- ಪಾಲಿಥಿನ್‌ಚೀಲಗಳನ್ನು ಊರೊಳಗೆ ತರುವುದಿಲ್ಲ.”

೩. “ಪ್ಲಾಸ್ಟಿಕ್‌- ಪಾಲಿಥಿನ್‌ಹಾಳೆಗಳಲ್ಲಿ ಸುತ್ತಿಕೊಟ್ಟ ಅಥವಾ ಅಂಥ ಚೀಲಗಳಲ್ಲಿ ಹಾಕಿಕೊಟ್ಟ ಯಾವ ವಸ್ತುವನ್ನೂ ನಾವು ಅಂಗಡಿಯಿಂದ ಪಡೆಯುವುದಿಲ್ಲ.”

೪. “ನಮ್ಮಲ್ಲಿರುವ ಪ್ಲಾಸ್ಟಿಕ್‌- ಪಾಲಿಥಿನ್‌ಹಾಳೆಗಳನ್ನು, ತುಂಡುಗಳನ್ನು, ಅಥವಾ ಚೀಲಗಳನ್ನು ಕಂಡ ಕಂಡಲ್ಲಿ ಎಸೆದು ನಾವು ಪರಿಸರವನ್ನು ಕೆಡಿಸುವುದಿಲ್ಲ” ಎಂದು ಪ್ರತಿಜ್ಞೆ ಸ್ವೀಕರಿಸಿದರು. ಅಲ್ಲಿಗೆ ಸಭಾ ಕಾರ್ಯಕ್ರಮ ಕೊನೆಗೊಂಡಿತು.

ಶಾಲೆಯಲ್ಲಿ ನಡೆದ ಸಭೆಯು ಊರವರಲ್ಲಿ ಪ್ಲಾಸ್ಟಿಕ್‌ಹಾವಳಿಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿತು. ಆದರೆ ಅಂದಿನ ಸಭೆಗೆ ಬರದವರೂ ಇದ್ದರಲ್ಲ? ಅಂಥವರಿಗೆ ವಿಷಯ ತಿಳಿಯಬೇಕಲ್ಲ? ಅಂಥವರ ಮನೆಗಳಿಗೆ ಮಕ್ಕಳೇ ಖುದ್ದಾಗಿ ಹೋದರು. ಸಭೆಯ ನಿರ್ಣಯಗಳನ್ನು ಅವರಿಗೂ ತಿಳಿಸಿದರು. ಈ ಕೆಲಸದಲ್ಲಿ ಸಹಕರಿಸಬೇಕೆಂದು ಅವರನ್ನೂ ಕೇಳಿಕೊಂಡರು. ಅಷ್ಟರಲ್ಲಿ ಇನ್ನೊಂದು ಸಮಸ್ಯೆ ಅವರ ಗಮನ ಸೆಳೆಯಿತು. ಯಾವುದದು? ಊರಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕಂಡುಬರುತ್ತಿದ್ದ ಬಣ್ಣ ಬಣ್ಣದ ಪ್ಲಾಸ್ಟಿಕ್‌- ಪಾಲಿಥಿನ್‌ಚೀಲಗಳು. ಅವುಗಳನ್ನು ಹಾಗೆಯೇ ಬಿಡಬಾರದಲ್ಲ? ಅದಕ್ಕಾಗಿ ಅವರು ಇನ್ನೊಂದು ಕಾರ್ಯಕ್ರಮ ಹಾಕಿಕೊಂಡರು. ಅದುವೇ “ಪ್ಲಾಸ್ಟಿಕ್‌ಹೆಕ್ಕುವ ಕಾರ್ಯಕ್ರಮ”

ಮಕ್ಕಳು ತಮ್ಮನ್ನು ತಾವೇ ಹಲವು ಪಂಗಡಗಳಾಗಿ ಹಂಚಿಕೊಂಡರು. ಪ್ರತಿಪಂಗಡಕ್ಕೂ ಮುಂದಾಳವನ್ನು ಆರಿಸಿಕೊಂಡರು. ಬಳಿಕ ಒಂದು ರಜಾದಿನ ಅವರು ಕೈಯಲ್ಲಿ ಚೀಲ ಹಿಡಿದು ಊರಲ್ಲೆಲ್ಲ ಸುತ್ತಾಡಿದರು. ತಮ್ಮ ಕಣ್ಣಿಗೆ ಬಿದ್ದ ಪ್ಲಾಸ್ಟಿಕ್‌- ಪಾಲಿಥಿನ್‌ಚೀಲಗಳು, ಹಾಳೆಗಳು, ತುಂಡುಗಳು ಎಲ್ಲವನ್ನೂ ಹೆಕ್ಕಿ ತಂದರು. ಕೊನೆಗೆ ಅವುಗಳನ್ನು ಒಂದು ಗುಂಡಿಯೊಳಗೆ ಹಾಕಿ, ಮಣ್ಣು ಮುಚ್ಚಿಬಿಟ್ಟರು. ಈಗ ಊರ ಪರಿಸರ ಸ್ವಲ್ಪ ಮಟ್ಟಿಗೆ ಪ್ಲಾಸ್ಟಿಕ್‌ಮುಕ್ತವಾಯಿತು.

ಊರಿನ ಎಲ್ಲ ಭಾಗಗಳ ಮಕ್ಕಳೂ ಶಾಲೆಯಲ್ಲಿದ್ದರು. ಊರಲ್ಲಿ ಯಾರೂ ಪ್ಲಾಸ್ಟಿಕ್‌ಬಳಸದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನೂ ಅವರು ವಹಿಸಿಕೊಂಡರು. ಅದಕ್ಕಾಗಿ ಅವರು ತಮ್ಮದೊಂದು “ಕಾವಲು ಸಮಿತಿ” ಯನ್ನು ರಚಿಸಿಕೊಂಡರು. ಪ್ಲಾಸ್ಟಿಕ್‌ಬಳಸಿದ ವಾರ್ತೆಸಿಕ್ಕಿದೊಡನೆ ಮಕ್ಕಳು ಆ ಮನೆಗೆ ಹೋಗುತ್ತಿದ್ದರು. ನಿಜಸಂಗತಿ ತಿಳಿಯುತ್ತಿದ್ದರು. ಕಾಡಿ, ಬೇಡಿ, ಮನವೊಲಿಸಿ ಮತ್ತೆ ಮನೆಯವರು ಪ್ಲಾಸ್ಟಿಕ್‌ಬಳಸದಂತೆ ನೋಡಿಕೊಳ್ಳುತ್ತಿದ್ದರು. ಪ್ಲಾಸ್ಟಿಕ್‌- ಪಾಲಿಥಿನ್‌ಚೀಲಗಳಲ್ಲಿ ಹಾಕಿದ ಕಾಫಿಪುಡಿ, ಸಕ್ಕರೆ, ಬೆಲ್ಲ, ಬಿಸ್ಕತ್‌, ಅಕ್ಕಿ, ಬೇಳೆ, ಮೀನು, ತರಕಾರಿ ಯಾವುದೂ ಊರೊಳಗೆ ಪ್ರವೇಶಿಸದಂತೆ ಅವರು ಎಚ್ಚರವಹಿಸಿದರು. ಯಾರೋ ಒಬ್ಬಿಬ್ಬರು ಮಕ್ಕಳ ಕಿರಿಕಿರಿಗೆ ಸಿಟ್ಟುಗೊಂಡು ಅವರಿಗೆ ಬೆದರಿಕೆ ಹಾಕಿದರು. ಮಕ್ಕಳು ತೆಪ್ಪಗಿರಲಿಲ್ಲ. ಕಪಿ ಸೇನೆಯ ಹಾಗೆ ಅವರೆಲ್ಲರೂ ಆ ಮನೆಯ ಎದುರು ಜಮಾಯಿಸಿದರು. ಅಲ್ಲಿ ಧರಣಿಕೂತರು. ಕೊನೆಗೆ ಮನೆಯವರೇ ತಮ್ಮ ತಪ್ಪನ್ನು ಒಪ್ಪಿಕೊಂಡರು. ಮಕ್ಕಳಲ್ಲಿ ಕ್ಷಮೆ ಕೋರಿದರು. ಹೀಗೆ ಸಾಗಿತು ಮಕ್ಕಳ ಪ್ಲಾಸ್ಟಿಕ್‌ವಿರೋಧಿ ಚಳವಳಿ. ಅಂತೂ ಆರು ತಿಂಗಳು, ವರ್ಷದೊಳಗೆ ಮಕ್ಕಳ ಸಾಮೂಹಿಕ ಪ್ರಯತ್ನ ಫಲ ನೀಡಿತು. ಊರು ಪ್ಲಾಸ್ಟಿಕ್‌ಮುಕ್ತವಾಯಿತು.

ಒಂದು ದಿನ ಯಾರೋ ಪತ್ರಕರ್ತರು ಆ ಊರಿಗೆ ಬಂದರು. ಅಲ್ಲಿ ನಡೆದ ಕೆಲಸವನ್ನು ಕಂಡು ಅವರು ಖುಶಿಪಟ್ಟರು. ಅಲ್ಲಿನ ಮಕ್ಕಳ ಸಾಧನೆಯನ್ನು ಮನದುಂಬಿ ಹಾಡಿ ಹೊಗಳಿದರು. “ಜಿಲ್ಲೆಯ ಮೊತ್ತ ಮೊದಲ ಪ್ಲಾಸ್ಟಿಕ್‌ಮುಕ್ತ ಊರು” ಎಂದು ಆ ಊರಿನ ಬಗ್ಗೆ ಅವರು ಪರಿಚಯ ಲೇಖನ ಪ್ರಕಟಿಸಿದರು.

ಹೀಗೆ ತಮ್ಮ ಸಾಧನೆಯಿಂದಾಗಿ ಆ ಮಕ್ಕಳು ಸುದ್ದಿ ಮಾಡಿದರು. ಊರಿಗೆ ಹೆಸರು ತಂದರು. ಇಂಥ ಮಕ್ಕಳು ನಿಮ್ಮೂರಲ್ಲಿ ಇದ್ದಾರೆಯೇ?