ಹೊರಗಡೆಯಲ್ಲಿ “ಕಾ ಕಾ ಕಾ…” ಕೂಗು ಕೇಳಿಸಿತು. ಕಿಟ್ಟ ಮನೆಯಿಂದ ಹೊರಗೆ ಬಂದ . ಸುತ್ತ ಮುತ್ತ ನೋಡಿದ. ಬಾವಿಯ ದಂಡೆಯ ಮೇಲೆ ಕಾಗೆಯೊಂದು ಕೂತಿತ್ತು. ಕಿಟ್ಟ ಬಾವಿಯ ಬಳಿಗೆ ಬಂದ. ಕಾಗೆ ಅಲ್ಲಿ ಕೂತೇ ಇತ್ತು. ಕಿಟ್ಟ ಇನ್ನಷ್ಟು ಹತ್ತಿರಕ್ಕೆ ಬಂದ.

“ಇದೇನು ಕಾಗಕ್ಕಾ, ತಲೆಕೆಳಗೆ ಹಾಕಿ ಕೂತೇ ಇರುವೆಯಲ್ಲಾ?” ಅವನು ಕೇಳಿದ.

“ನಾನು ಕಾಗಕ್ಕ ಅಲ್ಲ, ಕಾಗಣ್ಣ. ಹೆಣ್ಣು ಕಾಗೆಯಲ್ಲ, ಗಂಡು ಕಾಗೆ” ಎಂದಿತು ಆ ಕಾಗೆ

“ಹೌದೆ? ನನಗದು ಗೊತ್ತೇ ಆಗಲಿಲ್ಲ.” ಕಿಟ್ಟ ಒಪ್ಪಿಕೊಂಡ. “ಅದಿರಲಿ ನೀನು ತೆಪ್ಪಗೆ ಇಲ್ಲಿ ಕೂತಿರುವೆಯಲ್ಲ? ಏನು, ಬಹಳ ಬೇಸರವಾಗಿದೆಯೇ?” ಅವನು ಮತ್ತೆ ಕೇಳಿದ.

“ಹೌದು, ಬಹಳ ಬೇಸರವಾಗಿದೆ”. ಕಾಗೆ ನಿಜ ನುಡಿದಿತ್ತು.” ಏಕೆ, ನಿನ್ನ ಬೇಸರಕ್ಕೆ ಕಾರಣವೇನು?” ಕಿಟ್ಟ ವಿಚಾರಿಸಿದ.

ಮೊದಲಿಗೆ ಕಾಗೆ ಏನನ್ನೂ ಹೇಳಲಿಲ್ಲ. ಕಿಟ್ಟ ಮತ್ತಷ್ಟು ಒತ್ತಾಯಿಸಿದ. ಕೊನೆಗೆ ಕಾಗೆ ಬಾಯಿಬಿಟ್ಟಿತು.

“ಮೊನ್ನೆ ನಾನು ನೆರೆಯೂರಿಗೆ ಹೋಗಿದ್ದೆ. “ಅಲ್ಲೊಬ್ಬಳು ಚಂದದ ಕಾಗೆ ಕುಮಾರಿಯನ್ನು ನೋಡಿದೆ. ತುಂಬ ಒಳ್ಳೆಯವಳು. ಅವಳೂ ನನ್ನನ್ನು ನೋಡಿದಳು. ನಾವು ಒಬ್ಬರನ್ನೊಬ್ಬರು ಮೆಚ್ಚಿಕೊಂಡೆವು, ಪ್ರೀತಿಸಿದೆವು.”

“ನಾವು ಮದುವೆಯಾಗೋಣವೇ?” ಎಂದು ನಾನು ಅವಳನ್ನು ಕೇಳಿದೆ.

“ನಾವು ಹಿರಿಯರ ಒಪ್ಪಿಗೆ ಪಡೆದಿಲ್ಲ. ಸ್ವಂತ ಮನೆ ಮಾಡಿಲ್ಲ, ಮತ್ತೆ ಹೇಗೆ ಮದುವೆಯಾಗಲಿ?” ಅವಳು ಮರು ಪ್ರಶ್ನೆ ಹಾಕಿದಳು.

“ಸರಿ, ಮೊದಲು ಹಿರಿಯರ ಒಪ್ಪಿಗೆ ಪಡೆಯೋಣ. ಮತ್ತೆ ಸ್ವಂತ ಮನೆ ಮಾಡೋಣ . ಆ ಬಳಿಕವೇ ಮದುವೆ ನಿಶ್ಚಯವಾಗಲಿ.” ನಾನು ಒಪ್ಪಿಗೆ ಸೂಚಿಸಿದೆ.

“ಹಾಗಾದರೆ ಈಗ ಚಿಂತೆ ಏಕೆ ಹೇಳು? ಹಿರಿಯರು ಮದುವೆಗೆ ಒಪ್ಪಿಗೆ ಕೊಡಲಿಲ್ಲವೇ?” ಕಿಟ್ಟ ವಿಚಾರಿಸಿದ.

“ಹಿರಿಯರ ಒಪ್ಪಿಗೆಯೇನೋ ಸಿಕ್ಕಿತು. ಆದರೆ ಮನೆ ಮಾಡಲು ಇನ್ನೂ ಆಗಲಿಲ್ಲ.”. ಕಾಗೇ ಪೇಚಾಡಿಕೊಂಡಿತು.

“ಅದೇಕೆ ಆಗಲಿಲ್ಲ?” ಕೇಳಿದ ಕಿಟ್ಟ

“ನಾವು ಹಕ್ಕಿಗಳು. ಮರದ ಮೇಲೆ ಗೂಡು ಕಟ್ಟಿ ವಾಸಿಸುವವರು. ಸದ್ಯ ಈ ಊರಲ್ಲಿ ಮರಗಳೇ ಇಲ್ಲವಲ್ಲ? ಮತ್ತೆ ನಾವು ಗೂಡನ್ನು ಎಲ್ಲಿ ಕಟ್ಟಲಿ? ಹೇಗೆ ಕಟ್ಟಲಿ, ಹೇಳು?” ಕಾಗೆ ಪ್ರಶ್ನಿಸಿತು.

“ಈ ಊರಲ್ಲಿ ಮರಗಳು ಯಾಕೆ ಇಲ್ಲ? ಇದ್ದ ಮರಗಳೆಲ್ಲ ಎಲ್ಲಿ ಹೋದವು?” ಕುತೂಹಲದಿಂದ ವಿಚಾರಿಸಿದ ಕಿಟ್ಟ.

“ಮನುಷ್ಯನಿಗೆ ಮನೆ ಮಠಗಳು ಬೇಕಲ್ಲ? ಕೆಲವರು ಅದಕ್ಕಾಗಿ  ಮರಗಳನ್ನು ಕಡಿದರು. ಹಲವರು ಹಣಕ್ಕಾಗಿ ಮರಗಳನ್ನು ಕಡಿದು ಮಾರಿದರು . ಆದರೆ ಗಿಡಮರಗಳನ್ನು ನೆಟ್ಟು ಬೆಳೆಸಲು ಯಾರೂ ಮುಂದಾಗಲಿಲ್ಲ. ಹೀಗಾಗಿ ಊರೆಲ್ಲ ಬೋಳಾಯಿತು. ಗೂಡು ಕಟ್ಟಲು ಒಂದು ಮರವೂ ನಮಗೆ ಉಳಿಯಲಿಲ್ಲ.” ಕಾಗೆ ತನ್ನ ದುಃಖ ತೋಡಿಕೊಂಡಿತು.

“ಹಾಗಾದರೆ ಮುಂದೇನು ಮಾಡುತ್ತೀರಿ?” ಕಿಟ್ಟ ವಿಚಾರಿಸಿದ.

“ಮಾಡುವುದೇನು? ಮರಸಿಕ್ಕಾಗ ಮನೆ ಕಟ್ಟುವುದು. ಮನೆಕಟ್ಟಿಕೊಂಡ ಬಳಿಕ ಮದುವೆಯಾಗುವುದು.” ಬೇಸರದಿಂದ ಹೇಳಿತು ಕಾಗೆ.

“ಛೇ, ಹೀಗೆ ಆಗಬಾರದಿತ್ತು. ಮರಕಡಿವ ಪ್ರತಿಯೊಬ್ಬನೂ ಮರಗಳನ್ನು ಬೆಳೆಸಬೇಕಿತ್ತು. ಆಗ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ. ಅಲ್ಲವೇ?” ಕಿಟ್ಟ ಪ್ರಶ್ನಿಸಿದ.

“ಹೌದು, ಹಿಂದಿನವರಲ್ಲಿ ಹೆಚ್ಚು ಒಳ್ಳೆಯ ಬುದ್ಧಿ ಇತ್ತು. ದೂರಾಲೋಚನೆ ಇತ್ತು. ಕೆಲವು ಹಬ್ಬಗಳ ಸಂದರ್ಭಗಳಲ್ಲೂ ಅವರು ಗಿಡಮರಗಳನ್ನು ನೆಡುವ ಕ್ರಮ ಇರಿಸಿಕೊಂಡಿದ್ದರು. ಆದರೆ ಈಗಿನವರಿಗೆ ಅದೊಂದೂ ಇಲ್ಲ. ಇವರು ಎಲ್ಲ ಮರಗಳನ್ನೂ ಕಡಿದು ನಾಶ ಮಾಡಿದರು. ಒಂದು ಮರವನ್ನು ಕಡಿವ ಮೊದಲು ನಾಲ್ಕು ಸಸಿಗಳನ್ನಾದರೂ ನೆಟ್ಟು ಬೆಳೆಸಬೇಕು. ಹೀಗೊಂದು ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು. ಎಲ್ಲರೂ ಕಡ್ಡಾಯವಾಗಿ ಇದನ್ನು ಪಾಲಿಸಬೇಕು. ಆಗ ಮಾತ್ರ ಈ ಊರಲ್ಲಿ ಗಿಡಮರಗಳು ಉಳಿದಾವು. ಪರಿಸ್ಥಿತಿ ಸುಧಾರಿಸೀತು”. ಆವೇಶದಿಂದ ಹೇಳಿತು ಕಾಗೆ.

“ನಿನ್ನ ಮಾತು ನಿಜ ಕಾಗಣ್ಣಾ. ಅದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಇಂದೇ ನಾನೊಂದು ಗಿಡ ನೆಡುತ್ತೇನೆ. ಎಚ್ಚರಿಕೆಯಿಂದ ಅದರ ಆರೈಕೆ ಮಾಡುತ್ತೇನೆ. ನನ್ನ ಗೆಳೆಯ ಗೆಳತಿಯರಿಗೂ ವಿಷಯ ತಿಳಿಸುತ್ತೇನೆ. ಪ್ರತಿಯೊಬ್ಬನೂ ವರುಷಕ್ಕೆ ಒಂದು ಗಿಡವನ್ನಾದರೂ ನೆಟ್ಟು ಬೆಳೆಸುವ ನಿಯಮ ಪಾಲಿಸುವಂತೆ ಯತ್ನಿಸುತ್ತೇನೆ. ನಮ್ಮ ಹಿರಿಯರಿಗೆ ಒಳ್ಳೆಯ ಬುದ್ಧಿ ಕೊಡುವಂತೆ ದೇವನಲ್ಲಿ ಪ್ರಾರ್ಥಿಸುತ್ತೇನೆ. ಇದು ನನ್ನ ಪ್ರತಿಜ್ಞೆ “ಕಿಟ್ಟ ಭರವಸೆ ನೀಡಿದ.

“ಜಾಣ ಹುಡುಗ ನೀನು. ದಯವಿಟ್ಟು ಹಾಗೆ ಮಾಡು. ಜನರೆಲ್ಲ ಗಿಡಮರಗಳನ್ನು ನೆಟ್ಟು ಬೆಳೆಸಲಿ. ಹಸಿರು ಗಿಡ ಮರಗಳಿಂದ ಊರು ಕಂಗೊಳಿಸಲಿ. ಅಂಥ ದಿನಕ್ಕಾಗಿ ನಾವು ಕಾಯುತ್ತೇವೆ. ಅಲ್ಲಿಯವರೆಗೆ ನಮ್ಮ ಮದುವೆಯನ್ನು ಮುಂದೂಡುತ್ತೇವೆ.” ಎಂದಿತು ಕಾಗೆ. ಹಾಗೆ ಹೇಳಿದ ಅದು ಪುರ್ರೆ‍ಂದು ಅಲ್ಲಿಂದ ಹಾರಿ ಹೋಯಿತು.