ಬಹಳ ಹಿಂದಿನ ಕಾಲದ ಕತೆ ಇದು. ಒಂದು ಊರಲ್ಲಿ ಒಬ್ಬ ರಾಜ ಇದ್ದ. ಬಹಳ ಒಳ್ಳೆಯ ರಾಜ ಅವನು. ಪ್ರಜೆಗಳ ಮೇಲೆ ಅವನಿಗೆ ತುಂಬ ಪ್ರೀತಿ ಇತ್ತು. ತನ್ನ ಮಕ್ಕಳಂತೆ ಅವನು ಅವರನ್ನು ನೋಡಿಕೊಳ್ಳುತ್ತಿದ್ದ. ಅವರ ಸುಖಕ್ಕಾಗಿ ಅವನು ಶ್ರಮಿಸುತ್ತಿದ್ದ.

ಒಂದು ದಿನ ಊರ ರೈತರೆಲ್ಲ ರಾಜನ ಬಳಿಗೆ ಬಂದರು. “ಮಹಾಸ್ವಾಮಿ, ಊರಲ್ಲಿ ಗುಬ್ಬಿಗಳು ಬಹಳ ಹೆಚ್ಚಾಗಿವೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಅವು ಹೊಲಗಳನ್ನು ಮುತ್ತುತ್ತವೆ. ನಮಗೆ ಕಷ್ಟನಷ್ಟ ಉಂಟು ಮಾಡುತ್ತವೆ. ಈ ಗುಬ್ಬಿಗಳನ್ನೆಲ್ಲ ಕೊಲ್ಲಿಸಬೇಕು. ನಮ್ಮ ಸಂಕಟವನ್ನು ಪರಿಹರಿಸಬೇಕು.” ಎಂದು ಬೇಡಿಕೊಂಡರು.

ಅರಸನು ಜನರ ಮಾತನ್ನು ಕಿವಿಗೊಟ್ಟು ಕೇಳಿದ. “ಗುಬ್ಬಿಗಳು ಕಾಳನ್ನು ತಿನ್ನುವುದೇನೋನಿಜ. ಆದರೆ ಅವು ಹುಳು ಹುಪ್ಪಟೆಗಳನ್ನು ತಿನ್ನುತ್ತವೆ. ನಮ್ಮ ಪೈರನ್ನು ರಕ್ಷಿಸುತ್ತವೆ. ನಮಗೆ ಉಪಕಾರ ಮಾಡುತ್ತವೆ. ಇದು ನಿಮಗೆ ಗೊತ್ತಿಲ್ಲವೇ?” ಅವರು ಅವರನ್ನು ಪ್ರಶ್ನಿಸಿದ.

“ಅದು ಗೊತ್ತಿದೆ ಮಹಾಸ್ವಾಮಿ. ಆದರೆ ಈಗ ಅವುಗಳ ಸಂಖ್ಯೆ ಮಿತಿ ಮೀರಿದೆ. ಅವು ಮಾಡುವ ಉಪಕಾರಕ್ಕಿಂತ ಅಪಕಾರವೇ ಹೆಚ್ಚಾಗಿದೆ. ಅವುಗಳ ಹಾವಳಿಯನ್ನು ತಡೆಗಟ್ಟೆಲೇಬೇಕು. ಇಲ್ಲವಾದರೆ ನಾವಿನ್ನು ಕೃಷಿ ಮಾಡುವ ಹಾಗೇ ಇಲ್ಲ.” ಜನ ಅರಿಕೆ ಮಾಡಿಕೊಂಡರು.

ಅರಸನು ಜನರ ಕೇಳಿಕೆಯನ್ನು ಮನ್ನಿಸಿದ. ಅವರ ಸಂಕಟವನ್ನು ಪರಿಹರಿಸುವ ಭರವಸೆ ನೀಡಿದ. ತತ್‌ಕ್ಷಣ ಅವನು ರಾಜ್ಯದಲ್ಲಿದ್ದ ಬೇಡ ಜನರನ್ನು ತನ್ನಲ್ಲಿಗೆ ಬರ ಮಾಡಿಕೊಂಡ ಹಳ್ಳಿ ಹಳ್ಳಿಗಳಿಗೆ ಹೋಗಿ ಗುಬ್ಬಿಗಳನ್ನೆಲ್ಲಾ ಸಂಹರಿಸುವಂತೆ ಅವರಿಗೆ ಅಪ್ಪಣೆ ಮಾಡಿದ. ಇತರ ಪ್ರಜೆಗಳು ಸಹ ಈ ಕೆಲಸದಲ್ಲಿ ಸಹಕರಿಸುವಂತೆ ಅವರಿಗೆ ಕರೆಕೊಟ್ಟ. “ಗುಬ್ಬಿಗಳನ್ನು ಕೊಲ್ಲುವ ಪ್ರತಿಯೊಬ್ಬನಿಗೂ ನಗದು ಬಹುಮಾನ ನೀಡಲಾಗುವುದು. ತ್ವರೆ ಮಾಡಿರಿ. ಕೊಂದ ಗುಬ್ಬಿಯ ಹೆಣವನ್ನು ಅರಮನೆಗೆ ಒಪ್ಪಿಸಿ, ನಗದು ಬಹುಮಾನ ಪಡೆಯಿರಿ .” ಎಂದು ಅವನು ಊರಲ್ಲಿ ಡಂಗುರ ಸಾರಿಸಿದ.

ಜನ ಡಂಗುರವನ್ನು ಕೇಳಿದರು. ಹಣದ ಆಸೆಗಾಗಿ ಅವರು ಗುಬ್ಬಿಗಳನ್ನು ಕೊಲ್ಲ ತೊಡಗಿದರು. ಕೆಲವರು ಬಾಣ ಬಿಟ್ಟು ಗುಬ್ಬಿಗಳನ್ನು ಕೊಂದರು. ಕೆಲವರು ಕಲ್ಲು ಹೊಡೆದು ಅವುಗಳನ್ನು ಸಾಯಿಸಿದರು. ಕೆಲವರು ವಿಷವಿಟ್ಟು ಅವುಗಳ ಜೀವ ತೆಗೆದರು. ಕೆಲವರು ಉರುಳಿನಲ್ಲಿ ಬೀಳಿಸಿ, ಅವುಗಳ ಪ್ರಾಣ ಹೀರಿದರು. ಹೀಗೆ ದಿನವೂ ನೂರಾರು ಗುಬ್ಬಿಗಳ ಕೊಲೆಯಾಯಿತು. ಜನಕ್ಕೆ ದುಡ್ಡು ಸಿಕ್ಕಿತು. ಕ್ರಮೇಣ ಗುಬ್ಬಿಗಳ ಸಂಖ್ಯೆ ಕಡಿಮೆಯಾಯಿತು. ಅವುಗಳ ಪೀಡೆ ತೊಲಗಿತು. ಜನ ಖುಷಿ ಪಟ್ಟರು.

ದಿನಗಳು ಉರುಳಿದವು. ತಿಂಗಳುಗಳು ಕಳೆದು ಹೋದವು. ಊರ ಹೊಲಗದ್ದೆಗಳಲ್ಲಿ ಪೈರು ಪಚ್ಚೆಗಳು ಬೆಳೆದು ನಿಂತವು. ಗುಬ್ಬಿಗಳ ಹಾವಳಿ ಎಲ್ಲೂ ಕಾಣಿಸುತ್ತಿರಲಿಲ್ಲ. ಕೃಷಿಕರೆಲ್ಲ ಉತ್ತಮ ಫಸಲು  ಪಡೆಯುವ ಕನಸು ಕಾಣ ತೊಡಗಿದರು. ಆದರೆ ಅವರ ಕನಸು ಕನಸಾಗಿಯೇ ಉಳಿಯಿತು. ಕಾರಣವೇನು ಗೊತ್ತೇ.?

ಹುಲುಸಾಗಿ ಬೆಳೆದ ಪೈರಲ್ಲಿ ಹಾರುವ ಹಾತೆಗಳು, ಮಿಡತೆಗಳು ಎಲ್ಲೆಲ್ಲೂ ಕಂಡುಬಂದವು. ದಿನದಿನಕ್ಕೆ ಅವುಗಳ ಸಂಖ್ಯೆ ಬೆಳೆಯಿತು. ಅರ್ಧಕ್ಕರ್ಧ ಪೈರನ್ನು ಅವು ತಿಂದು ನಾಶ ಮಾಡಿದವು. ಅವುಗಳನ್ನು  ಹತೋಟಿಗೆ ತರಲು ಜನಗಳು ಹೆಣಗಾಡಿದರು. ಆದರೆ ಅವರ ಪ್ರಯತ್ನ ಫಲಿಸಲಿಲ್ಲ. ಬೆಳೆಸಿದ ಬೆಳೆಯ ಬಹುಪಾಲು ನಷ್ಟವಾಯಿತು. ರೈತರು ನಿರಾಶರಾದರು. ಅವರಿಗೆ ದಾರಿ ಕಾಣದಾಯಿತು. ಅವರು ಮತ್ತೆ ರಾಜನಲ್ಲಿಗೆ ಬಂದರು. ತಮ್ಮ ಸಂಕಟವನ್ನು ಅವನಲ್ಲಿ ತೋಡಿಕೊಂಡರು.

“ಹಿಂದೊಮ್ಮೆ ಗುಬ್ಬಿಗಳ ಮೇಲೆ ನೀವು ದೂರು ತಂದುದೂ ಇದೆ., ಗುಬ್ಬಿಗಳನ್ನೆಲ್ಲಾ ನಾಶಗೊಳಿಸಬೇಕು ಎಂದುದೂ ಇದೆ. ಆಗಲೇ “ಗುಬ್ಬಿಗಳು ಹುಳು ಹುಪ್ಪಟೆಗಳನ್ನು ತಿನ್ನುತ್ತವೆ. ನಮ್ಮ ಪೈರನ್ನು ರಕ್ಷಿಸುತ್ತವೆ. ಅವು ನಮಗೆ ಉಪಕಾರಿಗಳು” ಎಂದಿದ್ದೆ ನಾನು. ಆದರೆ ನೀವು ನನ್ನ ಮಾತಿಗೆ ಗಮನ ಕೊಡಲಿಲ್ಲ. ಗುಬ್ಬಿಗಳನ್ನು ನಾಶಗೊಳಿಸಲೇಬೇಕು ಎಂದು ಒತ್ತಾಯಿಸಿದಿರಿ. ಹಾಗಾಗಿಯೇ ಗುಬ್ಬಿಗಳ ಸಂಹಾರಕ್ಕೆ ನಾನು ಒಪ್ಪಿಗೆ ಸೂಚಿಸಿದ್ದೆ. ಅವುಗಳನ್ನು ಕೊಂದವರಿಗೆ ನಗದು ಬಹುಮಾನ ಘೋಷಿಸಿದ್ದೆ. ಆದರೆ ಈಗ, ಹೊಸತೊಂದು ಗಂಡಾಂತರ ಎದುರಾಗಿದೆ. ಹೀಗಾಗುವುದು ಸಹಜವೇ.”

“ನಾವೆಲ್ಲ ಒಂದು ಮಾತನ್ನು ನೆನಪಿಡಬೇಕು. ಈ ಪ್ರಕೃತಿಯ ಜೀವರಾಶಿಗಳ ಇರುವಿಕೆಯಲ್ಲಿ ಒಂದು ವ್ಯವಸ್ಥೆ ಇದೆ., ಸಮತೋಲನ ಇದೆ. ಅದನ್ನು ಕೆಡೆಸಿದರೆ ಅನಾಹುತ ಆಗಿಯೇ ಆಗುತ್ತದೆ . ಗುಬ್ಬಿಗಳನ್ನು ನೀವು ನಾಶಗೊಳಿಸಿದಿರಿ. ಅದರ ಪರಿಣಾಮವಾಗಿಯೇ ಕ್ರಿಮಿಕೀಟಗಳು ಹೆಚ್ಚಿದವು. ಈಗ ಇವುಗಳ ಬಾಧೆ ತೊಲಗಬೇಕಾದರೆ ಖಾಲಿ ಬಿದ್ದ ಗುಬ್ಬಿಗಳ ಸ್ಥಾನ ತುಂಬಿ ಬರಬೇಕು. ಈ ಬಗ್ಗೆ ಯೋಚಿಸಿರಿ, ಕೆಲಸ ಮಾಡಿರಿ. ಆಗ ನಿಮ್ಮ ಸಮಸ್ಯೆ ತಾನಾಗಿಯೇ ಪರಿಹಾರವಾಗುತ್ತದೆ.” ರಾಜ ವಿವರಿಸಿ ಹೇಳಿದ.

ಜನಕ್ಕೆ ಅರಸನ ಮಾತು ನಿಜ ಎನಿಸಿತು. “ನಮ್ಮ ಸಮಸ್ಯೆಯ ಮೂಲ ನಮಗೀಗ ಅರ್ಥವಾಗಿದೆ. ಇದರ ಪರಿಹಾರದ ಬಗೆಗು ನಾವೇ ಯೋಚಿಸುತ್ತೇವೆ” ಎನ್ನುತ್ತ ಅವರು ಅಲ್ಲಿಂದ ಹೊರಟು ಹೋದರು.