ಮಾದ ಒಬ್ಬ ಹಳ್ಳಿಗ. ಹಿಂದೆ ಅವನು ಮರ ಕಡಿವ ಕೆಲಸ ಮಾಡುತ್ತಿದ್ದ. “ಮರ ಕಡಿವ ಮಾದ” ಎಂದೇ ಜನ ಅವನನ್ನು ಕರೆಯುತ್ತಿದ್ದರು . ಆದರೆ ಇಂದು ಅವನು ಮರ ಕಡಿಯುವುದಿಲ್ಲ. ಆ ಕೆಲಸವನ್ನೇ ಅವನು ಬಿಟ್ಟು ಬಿಟ್ಟಿದ್ದಾನೆ. ಯಾರು ಎಷ್ಟು ಒತ್ತಾಯಿಸಿದರೂ ಅವನು ಮರಕಡಿಯಲು ಒಪ್ಪುವುದಿಲ್ಲ. “ಅದೊಂದನ್ನು ಬಿಟ್ಟು ಬೇರೆ ಯಾವುದೇ ಕೆಲಸ ಹೇಳಿ, ತತ್‌ಕ್ಷನ ಮಾಡಿಕೊಡುತ್ತೇನೆ.” ಎನ್ನುತ್ತಾನೆ ಅವನು. ಅವನಲ್ಲಿ ಈ ಬದಲಾವಣೆ ಹೇಗಾಯಿತು?. ಯಾರಿಂದಾಯಿತು.? ನಿಮಗೆ ಗೊತ್ತೇ.?

ಎಂದಿನಂತೆ ಆ ದಿನವೂ ಮಾದ ಬೇಗನೆ ಎದ್ದಿದ್ದ. ಬೆಳಗಿನ ಊಟವನ್ನು ತೀರಿಸಿದ್ದ. ತನ್ನ ಕತ್ತಿ, ಕೊಡಲಿಗಳನ್ನು ಹರಿತಗೊಳಿಸಿ ಇರಿಸಿದ್ದ. ಇನ್ನೇನು ಮರಕಡಿಯಲು ಹೊರಡುವವನಿದ್ದ. ಅಷ್ಟರಲ್ಲಿ ಹತ್ತು ಹನ್ನೆರಡು ಮಂದಿಗಳ ಗುಂಪೊಂದು ಅವನೆದರು ಪ್ರತ್ಯಕ್ಷವಾಯಿತು. ಆ ಗುಂಪಿನಲ್ಲಿ ಕೆಲವು ಯುವಕರಿದ್ದರು. ಕೆಲವು ಯುವತಿಯರಿದ್ದರು. ಕೆಲವು ಮಕ್ಕಳೂ ಇದ್ದರು. ಅವರೆಲ್ಲರೂ ಶಾಲೆ, ಕಾಲೇಜುಗಳಿಗೆ ಹೋಗುವವರು.

ಮಾದ ಅವರನ್ನು ನೋಡಿದ. “ಯಾರು ನೀವು? ಏನು ಬಂದಿರಿ?” ಎಂದು ಅವರನ್ನು ವಿಚಾರಿಸಿದ. “ನಾವು ವೃಕ್ಷ ಮಿತ್ರರು” ಅಂದರೆ ಮರಗಿಡಗಳ ಗೆಳೆಯರು. ಗಿಡಮರಗಳನ್ನು ಬೆಳೆಸಲು, ಉಳಿಸಲು ಹೆಣಗುವವರು. ಈಗ ನಿಮ್ಮ ಸಹಾಯ ಬೇಡಲು ಬಂದಿದ್ದೇವೆ.” ಅವರ ಮುಂದಾಳು ಹೇಳಿದ.

“ಏನು, ಸಹಾಯ ಕೇಳಲು ಬಂದಿದ್ದೀರಾ? ನನ್ನಿಂದ ನಿಮಗೇನು ಸಹಾಯವಾದೀತು?” ಮಾದ ಆಶ್ಚರ್ಯ ವ್ಯಕ್ತಪಡಿಸಿದ.

“ಮಾದಣ್ಣಾ, ಮರ ಕಡಿಯುವುದು ನಿಮ್ಮ ವೃತ್ತಿ. ಮರಗಳನ್ನು ರಕ್ಷಿಸುವುದು ನಮ್ಮ ಉದ್ದೇಶ. ನಮ್ಮ ಉದ್ದೇಶ ಈಡೇರಬೇಕಾದರೆ ನೀವು ಮರಗಳನ್ನು ಕಡಿಯಬಾರದು. ಅದಕ್ಕಾಗಿ ನಿಮ್ಮನ್ನು ಕೇಳಿಕೊಳ್ಳಲು ಬಂದಿದ್ದೇವೆ, ನಾವು.” ಒಬ್ಬ ಯುವಕ ವಿವರಿಸಿದ.

“ಅಯ್ಯೋ ಇದು ಹೇಗೆ ಸಾಧ್ಯ.? ಮರ ಕಡಿಯುವುದೇ ನನ್ನ ಉದ್ಯೋಗ. ಅದರಿಂದಲೇ ಬದುಕವವ ನಾನು. ಆ ಕೆಲಸ ಮಾಡದಿದ್ದರೆ ಉಣ್ಣಲು ಅನ್ನ ಎಲ್ಲಿಂದ ಬರಬೇಕು.? ನಾನು, ನನ್ನವರು ಹೇಗೆ ಬದುಕಬೇಕು?” ಗಾಬರಿಗೊಂಡು ಪ್ರಶ್ನಿಸಿದ ಮಾದ.

“ಮಾದಣ್ಣಾ ಊರಲ್ಲಿ ಉದ್ಯೋಗಗಳು ಎಷ್ಟಿಲ್ಲ ಹೇಳಿ? ಈ ಮರಕಡಿಯುವುದನ್ನು ಬಿಟ್ಟು ಬೇರೆ ಯಾವ ಕೆಲಸವನ್ನಾದರೂ ಮಾಡಬಹುದಲ್ಲಾ?” ಇನ್ನೊಬ್ಬ ಯುವಕ ಪ್ರಶ್ನೆ ಹಾಕಿದ.

ಆದರೆ ಮಾದ ಸುಮ್ಮನಿರುತ್ತಾನೆಯೇ.? “ನೋಡಿರಪ್ಪಾ, ನಾನು ನಿಮ್ಮ ಹಾಗೆ ಹೆಚ್ಚು ಓದಿದವನಲ್ಲ. ಹೆಚ್ಚು ತಿಳಿದವನೂ ಅಲ್ಲ. ಈಗ, ಮರಗಳ ಮೇಲೆ ನಿಮಗೇಕಿಷ್ಟು ಕಾಳಜಿ? ಮರಗಳನ್ನು ನಾವೇಕೆ ಕಡಿಯಬಾರದು? ಸ್ವಲ್ಪ ವಿವರಿಸಿ ಹೇಳುತ್ತೀರಾ?” ಅವನು ಮತ್ತೆ ಕೇಳಿದ.

“ಮಾದಣ್ಣಾ, ನಾವೆಲ್ಲಾ ಒಂದು ಗಳಿಗೆ ಕುಳಿತು ಮಾತಾಡೋಣ”. ಎನ್ನುತ್ತಾ ಗುಂಪಿನ ಮುಂದಾಳು ಚಾವಡಿ ಏರಿದ. ಉಳಿದವರು ಅವನನ್ನು ಹಿಂಬಾಲಿಸಿದರು. ಎಲ್ಲರೂ ಚಾವಡಿಯಲ್ಲಿ ಕೂತರು. ಮಾದ ನಿಂತೇ ಇದ್ದ. ಅವರು ಅವನನ್ನೂ ಕೂತುಕೊಳ್ಳುವಂತೆ ಕೇಳಿಕೊಂಡರು. ಅವರೆದುರು ಅವನೂ ಕೂತುಬಿಟ್ಟ. ಆಗ ಆ ಯುವಕನೇ ಮತ್ತೆ ಮಾತು ಮುಂದುವರಿಸಿದ,

“ಮಾದಣ್ಣಾ, ನಮ್ಮ ಬದುಕಿಗೆ ಬಲು ಮುಖ್ಯ ವಸ್ತು ಒಂದಿದೆ. ಅದು ಯಾವುದು ಹೇಳಿ ನೋಡೋಣ.”

“ಗಾಳಿ” ಮಾದ ಉತ್ತರಕೊಟ್ಟ

“ಸರಿಯಾಗಿ ಹೇಳಿದಿರಿ, ಮಾದಣ್ಣಾ. ನಾವು ಜೀವಿಸಿರಲು ಗಾಳಿ ಬೇಕು. ಆ ಗಾಳಿ ಶುದ್ಧವಾಗಿರಬೇಕು. ಮರಗಳು ಗಾಳಿಯ ಮಲಿನತೆಯನ್ನು ತೊಲಗಿಸುತ್ತವೆ. ಶುದ್ದಗಾಳಿಯನ್ನು ನಮಗೆ ಒದಗಿಸಿಕೊಡುತ್ತವೆ” ಅವನು ಹೇಳಿದ.

“ಮರಗಳಿಂದ ನಮಗೆ ಹೂ ಹಣ್ಣು, ಕಾಯಿ, ಬೀಜಗಳಂಥ ವಸ್ತುಗಳು ದೊರೆಯುತ್ತವೆ.” ಇನ್ನೊಬ್ಬ ಹೇಳಿದ.

“ಮನೆಕಟ್ಟಲು ಬೇಕಾಗುವ ಜಂತಿ, ಪಕಾಸು, ಬಾಗಿಲು, ಕಿಟಕಿಗಳನ್ನು ನಾವು ಮರದಿಂದ ತಯಾರಿಸಿಕೊಳ್ಳುತ್ತೇವೆ.” ಮತ್ತೊಬ್ಬ ಸೇರಿಸಿದ.

“ಬೆಂಚು, ಕುರ್ಚಿ, ಮೇಜು ಇತ್ಯಾದಿ ಪೀಠೋಪಕರಣಗಳಿಗೂ ಮರಗಳು ಬಳಸಲ್ಪಡುತ್ತವೆ.” ಯುವತಿಯೊಬ್ಬಳು ದನಿಗೂಡಿಸಿದಳು.

“ದನಗಳಿಗೆ ಮೇವನ್ನು, ಜನಗಳಿಗೆ ಉರುವಲು, ಔಷಧಗಳು, ಅಂಟು, ರಾಳ, ಗಂಧ ಮೊದಲಾದ ನೂರಾರು ವಸ್ತುಗಳನ್ನು ಸಹ ಮರಗಳೇ ಒದಗಿಸಿ ಕೊಡುತ್ತವೆ.” ಇನ್ನೊಬ್ಬಳು ಹೇಳಿದಳು.

“ಮರಗಳು ಮೋಡಗಳನ್ನು ತಡೆದು, ಹೆಚ್ಚು ಮಳೆ ಸುರಿಯುವಂತೆ ಮಾಡುತ್ತವೆ. ಮಳೆ ನೀರಿಗೆ ಭೂಮಿಯ ಮೇಲ್ಪದರದ ಮಣ್ಣು ಕೊಚ್ಚಿಹೋಗದಂತೆಯೂ ಅವು ರಕ್ಷಿಸುತ್ತವೆ. ಭೂಮಿ ನೀರನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳಲು, ಮಳೆ ನೀರು ಭೂಮಿಯಲ್ಲಿ ಇಂಗಲು ಅವು ನೆರವಾಗುತ್ತವೆ. .ನಮ್ಮ ಪುಸ್ತಕದಲ್ಲಿ ಇದನ್ನೆಲ್ಲ ವಿವರಿಸಿದ್ದಾರೆ.” ಹುಡುಗನೊಬ್ಬ ತಾನು ಓದಿ ತಿಳಿದುದರ ವರದಿ ಒಪ್ಪಿಸಿದ.

“ಮರಗಳು ಸಾವಿರಾರು ಜೀವಜಂತುಗಳಿಗೆ ಆಹಾರವನ್ನೂ ಆಸರೆಯನ್ನೂ, ಒದಗಿಸಿಕೊಡುತ್ತವೆ.” ಎನ್ನುತ್ತ, ತಾನೂ ಸ್ವಲ್ಪ ತಿಳಿದುಕೊಂಡಿದ್ದೇನೆ ಎನ್ನುವುದನ್ನು ಹೊರಗೆಡಹಿದ ಇನ್ನೊಬ್ಬ ಹುಡುಗ,

“ಮಾದಣ್ಣಾ, ಭೂಮಿಗೆ ನೆರಳಿನ ತಂಪು ಸಿಗುವುದು ಮರಗಳಿಂದ, ನೆಲಕ್ಕೆ ಹಸುರು ಹೊದಿಕೆ ಬರುವುದು ಮರಗಳಿಂದ. ಮರಗಳ ಹಸುರು ಮರೆಯಾದಲ್ಲಿ, ನೀರ ಸೆಲೆ ಬತ್ತುತ್ತದೆ. ಕುಡಿಯಲಿಕ್ಕೂ ನೀರು ಸಿಗದ ಪರಿಸ್ಥಿತಿ ತಲೆದೋರುತ್ತದೆ. ಭೂಮಿ ಬರಡಾಗುತ್ತದೆ. ಹಾಗಾಗಿಯೇ “ಮರಗಳು ದೇವರ ವರಗಳು” ಎನ್ನುತ್ತಾರೆ, ತಿಳಿದವರು. ಇಂಥ ಮರಗಳನ್ನು ನಾವು ಸಾಧ್ಯವಾದಷ್ಟು ಉಳಿಸಬೇಕು, ಬೆಳೆಸಬೇಕು. ಒಂದು ಮರ ಕಡಿವ ಮೊದಲು ನಾಲ್ಕನ್ನು ಬೆಳೆಸಬೇಕು. ಹಾಗೆ ಮಾಡದೆ ಮರಗಳನ್ನು ಕಡಿಯುತ್ತಲೇ ಹೋದರೆ, ನಮ್ಮ ಭೂಮಿ ಮರುಭೂಮಿಯಾಗುತ್ತದೆ.” ಗುಂಪಿನ ಮುಂದಾಳು ಭಾರೀ ಕಳಕಳಿಯಿಂದ ವಿವರಿಸಿ ಹೇಳಿದ.

“ಮಾದಣ್ಣಾ, ನಿಮಗೀಗ ಮರಗಳ ಮಹತ್ವ ಅರ್ಥವಾಯಿತಲ್ಲ? ಇನ್ನು ನನ್ನದೊಂದು ಪ್ರಶ್ನೆಗೆ ಉತ್ತರ ಹೇಳಿ. ಈವರೆಗೆ ನೀವು ಎಷ್ಟು ಮರಗಳನ್ನು ಕಡಿದಿರಬಹುದು.?” ಇನ್ನೊಬ್ಬ ಯುವಕ ಮಾದನನ್ನು ಕೇಳಿದ.

“ಅದನ್ನು ಯಾರು ನೆನಪು ಇಟ್ಟಿದ್ದಾರೆ, ಸ್ವಾಮಿ? ಸುಮಾರು ನೂರು ಇನ್ನೂರು ಆಗಬಹುದೋ ಏನೋ?” ಮಾದ ಉತ್ತರ ಕೊಟ್ಟ.

“ಈವರೆಗೆ ನೀವು ಎಷ್ಟು ಮರಗಳನ್ನು ನೆಟ್ಟು ಬೆಳೆಸಿದ್ದೀರಿ? ಅದಾದರೂ ನೆನಪಿದೆಯೇ?” ಯುವಕ ಮತ್ತೆ ಪ್ರಶ್ನೆ ಹಾಕಿದ.

“ನನಗೆ ಸ್ವಂತ ಜಾಗವೇ ಇಲ್ಲವಲ್ಲ?. ನಾನೆಲ್ಲಿ ಮರ ಬೆಳೆಸಲಿ?” ಮಾದ ತನ್ನ ಅಸಾಹಾಯಕತೆ ತೋಡಿಕೊಂಡ.

“ಸ್ವಂತ ಜಾಗ ಇಲ್ಲದವರು, ಸರಕಾರಿ ಸ್ಥಳದಲ್ಲಾದರೂ ಗಿಡ ನೆಡಬಹುದು, ಬೆಳೆಸಬಹುದು. “ಮನಸ್ಸಿದ್ದಲ್ಲಿ ಮಾರ್ಗವಿದೆ” ಎನ್ನುವುದು ಸುಳ್ಳಲ್ಲ. ಆದರೆ ನೀವು ಮಾತ್ರ ಒಂದು ಮರವನ್ನೂ ಬೆಳೆಸಲಿಲ್ಲ. ನೂರಾರು ಮರಗಳನ್ನು ಕಡಿದು ಉರುಳಿಸಿದಿರಿ. ಬಲುದೊಡ್ಡ ತಪ್ಪು ಮಾಡಿದಿರಿ. ಅಲ್ಲವೆ ಮಾದಣ್ಣಾ?” ಕೆದಕಿ ಕೇಳಿದ ಇನ್ನೊಬ್ಬ ಯುವಕ.

“ಹೂಂ ಒಂದು ರೀತಿಯಲ್ಲಿ ಹೌದು,” ಮಾದ ತಲೆಯಾಡಿಸಿದ.

“ಇನ್ನೂ ಒಂದು ವಿಚಾರವಿದೆ, ಮಾದಣ್ಣಾ. ಇಂದು ಅನುಮತಿ ಇಲ್ಲದೆ ಮರ ಕಡಿಯಬಾರದು. ಅದು ತಪ್ಪು. ಆದರೆ ಈಗ ಎಷ್ಟೋ ಮಂದಿ ಅನುಮತಿ ಪಡೆಯದೆ ಮರ ಕಡಿಯುತ್ತಾರೆ.,. ಮಾರಾಟ ಮಾಡುತ್ತಾರೆ. ಇದು ಕಾನೂನಿಗೆ ವಿರುದ್ಧ. ಇಂಥ ಕೆಲಸದಲ್ಲಿ ಸಹಕರಿಸಿದಾಗ ನೀವೂ ಅಪರಾಧಿ ಆಗುತ್ತೀರಿ. ಈ ಬಗ್ಗೆ ಎಂದಾದರೂ ನೀವು ಯೋಚಿಸಿದ್ದು ಇದೆಯೇ?” ಮತ್ತೊಬ್ಬ ಯುವಕನ ಪ್ರಶ್ನೆ ಇದು.

“ಇಲ್ಲಪ್ಪಾ ಇಲ್ಲ, ಇಂಥ ಸಂಗತಿ ಒಂದೂ ನನಗೆ ಗೊತ್ತಿಲ್ಲ” ಮಾದ ಒಪ್ಪಿಕೊಂಡ.

“ಮಾದಣ್ಣಾ, ಈವರೆಗೆ ವಿಷಯ ಗೊತ್ತಿಲ್ಲದೆ ನೀವು ತಪ್ಪು ಮಾಡಿದಿರಿ. ಈಗ ನಿಮಗೆಲ್ಲ ಗೊತ್ತಾಗಿದೆ. ಇನ್ನಾದರೂ ಈ ಕೆಲಸ ನೀವು ಬಿಡಬಾರದೆ.?”

“ನಾನು ಮರಕಡಿಯದಿದ್ದರೇನು? ಇನ್ನೊಬ್ಬರು ಆ ಕೆಲಸ ಮಾಡುವುದಿಲ್ಲವೇ? ಆಗ ಮರಗಳು ಉಳಿಯುತ್ತವೆಯೇ?” ಮಾದ ಸಂದೇಹ ವ್ಯಕ್ತಪಡಿಸಿದ.

“ಊರಲ್ಲಿ ಮರ ಕಡಿಸುವವರ ಅಥವಾ ಕಡಿಯುವವರ ಸುಳಿವು ಸಿಕ್ಕಿದರೆ ಸಾಕು, ನಾವು ಅಲ್ಲಿಗೆ ಹೋಗುತ್ತೇವೆ., ಮರ ಕಡಿಯದಂತೆ ಅವರನ್ನು ಬೇಡುತ್ತೇವೆ, ಕಾಡುತ್ತೇವೆ, ಅವರ ಮನ ಒಲಿಸುತ್ತೇವೆ. ಅವರು ಮರಕಡಿಯದಂತೆ ಮಾಡುತ್ತೇವೆ. ಇದು ನಮ್ಮ ಪ್ರತಿಜ್ಞೆ. ಹೀಗೆ ಪ್ರತಿಜ್ಞೆ ಮಾಡಿಯೇ ನಿಮ್ಮ ಬಳಿಗೆ ಬಂದವರು ನಾವು. ಈಗ ಕೈಮುಗಿದು ನಿಮ್ಮನ್ನು ಬೇಡಿಕೊಳ್ಳುತ್ತೇವೆ. ನೀವು ಯಾವ ಕೆಲಸವನ್ನಾದರೂ ಮಾಡಿ. ಆದರೆ ಮರ ಕಡಿಯುವುದನ್ನು ಬಿಟ್ಟು ಬಿಡಿ. ಇದು ನಮ್ಮೆಲ್ಲರ ಪ್ರಾರ್ಥನೆ.” ಎನ್ನುತ್ತಾ ಗುಂಪಿನ ಮುಂದಾಳು ಕೈಮುಗಿದು ಬೇಡಿಕೊಂಡ.

“ಹೌದು ಮಾದಣ್ಣಾ. ಅಷ್ಟು ಉಪಕಾರ ಮಾಡಬೇಕು, ನೀವು” ಎನ್ನುತ್ತ ಉಳಿದವರೂ ಮಾದನಿಗೆ ಕೈಮುಗಿದರು.

ಅವರ ಕಳಕಳಿಯ ಪ್ರಾರ್ಥನೆ ಮಾದನ ಮನವನ್ನು ಕರಗಿಸಿತು. “ಆಗಲಪ್ಪಾ ಆಗಲಿ, ನೀವು ಹೇಳಿದಂತೆಯೇ ಆಗಲಿ. ಮೇಲಿರುವ ಸೂರ್ಯದೇವನನ್ನು ನೋಡಿ ನಾನು ಮಾತುಕೊಡುತ್ತೇನೆ. ನಾನಿನ್ನು ಮರಕಡಿಯುವುದಿಲ್ಲ.” ಮಾದ ಶಪಥಮಾಡಿದ. ಅಂದಿನಿಂದ ಅವನು ಮರಕಡಿದುದನ್ನು ಯಾರೂ ಕಂಡಿಲ್ಲ.