ಹಿಂದಿನ ರಾತ್ರಿ ಮಳೆ ಸುರಿದಿತ್ತು. ವರ್ಷದ ಮೊದಲ ಮಳೆ ಅದು. ಜೋರಾಗಿಯೇ ಸುರಿದಿತ್ತು. ಮಲಗಿದ್ದ ಕಿಟ್ಟನೂ ಆಗ ಎಚ್ಚರಗೊಂಡಿದ್ದ. ಮತ್ತೆ ಪುನಃ ನಿದ್ರೆಗೆ ಜಾರಿದ್ದ.

ಮರುದಿನ ಬೆಳಗ್ಗೆ ಕಿಟ್ಟನಿಗೆ ಬೇಗನೆ ಎಚ್ಚರಾಯಿತು. ರಾತ್ರಿ ಮಳೆ ಸುರಿದುದು ಅವನ ನೆನಪಿಗೆ ಬಂತು. “ನಮ್ಮ ಹಳೆಯ ಕೆರೆ ಬತ್ತಿ ಹೋಗಿತ್ತಲ್ಲ.? ಅದರಲ್ಲಿ ನೀರಾಗಿದೆಯೇ ನೋಡಬೇಕು” ಎನಿಸಿತು ಅವನಿಗೆ. ಒಡನೆ ಅವನು ಅಮ್ಮನನ್ನು ಕೂಗಿದ. “ಅಮ್ಮಾ, ತೋಟದ ಕಡೆಗೆ ಹೋಗಿ ಬರುತ್ತೇನೆ.” ಎಂದು ಹೇಳಿದ.. ಮನೆಯಿಂದ ಹೊರಟು ತೋಟಕ್ಕೆ ಬಂದ.

ಹಳೆಯ ಕೆರೆಯಲ್ಲಿ ಹೂಳು ತುಂಬಿತ್ತು. ಕಿಟ್ಟ ಇಣುಕಿ ನೋಡಿದ. ತಟಕು  ನೀರೂ ಅಲ್ಲಿರಲಿಲ್ಲ. ಮಣ್ಣು ಮಾತ್ರ ನೆನೆದಿತ್ತು. ಕಿಟ್ಟನಿಗೆ ನಿರಾಸೆಯಾಯಿತು. ಅವನು ಮನೆಗೆ ಹಿಂದಿರುಗಿ ಬರುವವನಿದ್ದ. ಆಗಲೇ ಅವನಿಗೆ “ಡ್ರಾಂಕ್‌… ಡ್ರಾಂಕ್‌….ಡ್ರಾಂಕ್‌” ಕೂಗು ಕೇಳಿಸಿತು. ಅವನು ಅತ್ತ ನೋಡಿದ. ಕಪ್ಪೆ ಕಾಣಿಸಲಿಲ್ಲ. ಆದರೆ ಅದರ ಕೂಗು ಇನ್ನೊಮ್ಮೆ ಕೇಳಿಸಿತು. ಕೆರೆಯ ಬದಿಯ ಬಿರುಕಿನಿಂದ ಸದ್ದು ಕೇಳಿ ಬರುತ್ತಿತ್ತು. ಕಿಟ್ಟ ಕೆಳಗೆ ಇಳಿದು ಬಂದ., ಬಿರುಕಿನತ್ತ ಬಗ್ಗಿ ನೋಡಿದ. ಕಪ್ಪೆಯೊಂದು ಅಲ್ಲಿ ತಬ್ಬಿ ಕೂತಿತ್ತು.

“ಏನು ಹುಡುಗಾ, ಯಾರನ್ನು ಹುಡುಕುತ್ತಿರುವಿ?” ಅದು ಪ್ರಶ್ನಿಸಿತು. “ನಿನ್ನ ಕೂಗು ಕೇಳಿಸಿತು. ನೀನು ಎಲ್ಲಿ ಅಡಗಿದ್ದೀ ಎಂದು ನೋಡುತ್ತಿದ್ದೇನೆ. ಬಾ, ಬಿರುಕಿನಿಂದ ಹೊರಗೆ ಬಾ. ಮಾತಾಡೋಣ”. ಕಿಟ್ಟ, ಕಪ್ಪೆಯನ್ನು ಕರೆದ.

“ಕೆಲವರು ಕೆಟ್ಟ ಹುಡುಗರು ಇರುತ್ತಾರೆ. ಅವರು ಕಲ್ಲು ಹೊಡೆದು ನಮಗೆ ತೊಂದರೆ ಕೊಡುತ್ತಾರೆ. ಅದೇ ಹೆದರಿಕೆ ನನಗೆ.” ಕಪ್ಪೆ ಭಯ ತೋಡಿಕೊಂಡಿತು.

“ನಾನು ಕೆಟ್ಟವನಲ್ಲ. ನಿನಗೆ ತೊಂದರೆ ಕೊಡುವುದಿಲ್ಲ. ಹೊರಗೆ ಬಾ.” ಕಿಟ್ಟ ಭರವಸೆ ನೀಡಿದ. ಕಪ್ಪೆ ಹೊರಕ್ಕೆ ಜಿಗಿಯಿತು.

‘ಹೂ, ಹೊರಗೆ ಬಂದಿದ್ದೇನೆ ನೋಡು. ನಿನಗೇನು ಹೇಳಲಿದೆಯೋ ಹೇಳಿಬಿಡು”. ಎಂದಿತು ಅದು.

“ಕಳೆದ ರಾತ್ರಿ ಮಳೆ ಬಂದಿತ್ತಲ್ಲ.?” ಅದು ನಿನಗೆ ಗೊತ್ತೇ.?” ಕಿಟ್ಟ ಕೇಳಿದ. “ಮಳೆ ಬರುವ ಸೂಚನೆಯನ್ನೂ ನಾನು ಗ್ರಹಿಸಬಲ್ಲೆ. ಮತ್ತೆ ಮಳೆ ಬಂದುದು ಗೊತ್ತಾಗದೆ ಇರುತ್ತದೆಯೇ?” ಕಪ್ಪೆ ಮರು ಪ್ರಶ್ನೆ ಹಾಕಿತು.

“ಇಷ್ಟು ದಿನ ನೀನು ಎಲ್ಲಿದ್ದೆ.? ಏನು ಮಾಡುತ್ತಿದ್ದೆ.?” ಕಿಟ್ಟ ಕುತೂಹಲ ವ್ಯಕ್ತಪಡಿಸಿದ.

“ಇಷ್ಟು ದಿನ ಕಲ್ಲುಗಳ ಎಡೆಯಲ್ಲೋ ಮಣ್ಣಿನ ಅಡಿಯಲ್ಲೋ ವಿಶ್ರಾಂತಿ ಪಡೆಯುತ್ತಿದ್ದೆ., ನಿದ್ದೆ ಮಾಡುತ್ತಿದ್ದೆ.” ಕಪ್ಪೆ ಹೇಳಿತು.

“ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮವರು ಕಾಣಿಸುತ್ತಿದ್ದರು. ಈಗ ಕಾಣಿಸುವುದಿಲ್ಲವಲ್ಲ.!” ಕಿಟ್ಟ ಕೇಳಿದ.

“ಇದ್ದವರು ಕಾಣಿಸಿಕೊಳ್ಳುತ್ತಾರೆ. ಇಲ್ಲದಿದ್ದವರು ಹೇಗೆ ಕಾಣಿಸಿಕೊಂಡಾರು?” ಕಪ್ಪೆ ಪ್ರಶ್ನೆ ಹಾಕಿತು. ಅದರ ಮಾತು ಕಿಟ್ಟನಿಗೆ ಅರ್ಥವಾಗಲಿಲ್ಲ. ಅವನು ಕಪ್ಪೆಯನ್ನೇ ಮಿಕಿಮಿಕಿ ನೋಡತೊಡಗಿದ.

ಕಪ್ಪೆ ಹೇಳಿತು. “ಪ್ರಾಣಿ -ಪಕ್ಷಿಗಳಂತೆ ಈಗ ನಮ್ಮವರ ಸಂಖ್ಯೆಯೂ ಕಡಿಮೆಯಾಗಿದೆ. ಮೊದಲಿನಂತೆ ನಾವೀಗ ಕಾಣ ಸಿಗುವುದಿಲ್ಲ.”

“ಯಾಕೆ ಹೀಗಾಯಿತು.? ಇದಕ್ಕೇನು ಕಾರಣ?” ಕಿಟ್ಟ ವಿಚಾರಿಸಿದ.

“ಏನು ಕಾರಣ ಎನ್ನಬೇಡ. ಯಾರು ಕಾರಣ ಎಂದು ಕೇಳು. ಒಂದೇ ಮಾತಿನಲ್ಲಿ ಉತ್ತರಕೊಡುತ್ತೇನೆ.” ಎಂದಿತು ಕಪ್ಪೆ.

“ಹೂಂ, ಹಾಗೇ ಆಗಲಿ. ಯಾರು ಕಾರಣ ಹೇಳಿಬಿಡು “ಕಿಟ್ಟ ಕೇಳಿಕೊಂಡ.

“ನೀವು, ಉಪಕಾರಕ್ಕೆ ಪ್ರತಿಯಾಗಿ ಅಪಕಾರ ಮಾಡುವ ಮನುಷ್ಯರು” ಕಿಟ್ಟನನ್ನೇ ತೋರಿಸುತ್ತಾ ಹೇಳಿತು ಕಪ್ಪೆ.

“ಅಂದರೆ, ಮನುಷ್ಯರಿಗೆ ನೀನು ಉಪಕಾರ ಮಾಡುತ್ತೀ. ಅವರು ನಿನಗೆ ಅಪಕಾರ ಮಾಡುತ್ತಾರೆ. ಇದು ನಿನ್ನ ಮಾತಿನ ಅರ್ಥವೇ?” ಅವನು ಕೇಳಿದ.

“ಹೌದು, ಅದನ್ನು ವಿವರಿಸಿ ಹೇಳಬೇಕೇ?” ಪ್ರಶ್ನಿಸಿತು ಕಪ್ಪೆ.

“ದಯವಿಟ್ಟು ಹಾಗೆ ಮಾಡು” ಕಿಟ್ಟ ಬೇಡಿಕೊಂಡ.

“ಸರಿ, ನಾನು ಹೇಳುವುದನ್ನು ಕಿವಿಗೊಟ್ಟು ಕೇಳು. ನಾವು, ಕಪ್ಪೆಗಳು, ಹೊಟ್ಟೆಬಾಕರು ನಿಜ. ದಿನವೂ ನಮ್ಮ ಸರಿತೂಕದ ಕ್ರಿಮಿಕೀಟಗಳನ್ನು ನಾವು ತಿಂದು ಮುಗಿಸುತ್ತೇವೆ. ಇವುಗಳಲ್ಲಿ ಹಲವು ರೈತರ ಬೆಳೆಗಳಿಗೆ ಹಾನಿ ಮಾಡುವವು. ಇನ್ನು ಕೆಲವು ರೋಗರುಜಿನಗಳನ್ನು ಹರಡುವವು. ಅಂದರೆ ನಾವು ರೈತರ ಬೆಳೆಗಳ ರಕ್ಷಣೆಗೂ ನೆರವಾಗುತ್ತೇವೆ. ರೋಗರುಜಿನಗಳನ್ನು ತಡೆಯುವಲ್ಲಿಯೂ ಸಹಾಯ ಮಾಡುತ್ತೇವೆ. ಕೆಲವು ರೋಗಗಳ ಚಿಕಿತ್ಸೆಯಲ್ಲಿ ಔಷಧಿಗಾಗಿ ಸಹ ನಮ್ಮನ್ನು ಬಳಸುತ್ತಾರೆ. ಕೆಲವು ಸಂಶೋಧನೆಗಳಲ್ಲಿ ನಮ್ಮನ್ನು ಉಪಯೋಗಿಸುತ್ತಾರೆ. ಕೆಲವೆಡೆ ನಮ್ಮ ಆಹಾರವನ್ನೂ ಜನ ಇಷ್ಟಪಟ್ಟು ತಿನ್ನುತ್ತಾರೆ. ವಿವಿಧ ರೀತಿಗಳಲ್ಲಿ ಮನುಷ್ಯರಿಗೆ ನಾವು ಉಪಕಾರ ಮಾಡುತ್ತೇವೆ. ಆದರೆ ಅವರು ಮಾತ್ರ ನಮಗೆ ಕೇಡು ಬಗೆಯುತ್ತಾರೆ, ಅಪಕಾರವನ್ನೇ ಮಾಡುತ್ತಾರೆ.” ಬೇಸರ ವ್ಯಕ್ತಪಡಿಸಿತು ಕಪ್ಪೆ.

“ನಾವು ಮನುಷ್ಯರು, ನಿಮಗೇನು ಅಪಕಾರ ಮಾಡುತ್ತೇವೆ? ಅದನ್ನೂ ಹೇಳಿಬಿಡು.” ಕಿಟ್ಟ ಮತ್ತೆ ಕೇಳಿಕೊಂಡ.

“ಭೂಮಿಯಲ್ಲಿ ಮನುಷ್ಯರ ಸಂಖ್ಯೆ ಹೆಚ್ಚಿದ ಹಾಗೆ, ಕೃಷಿ ವಿಸ್ತರಿಸಿತು. ಕಾಡು ಕಡಿಮೆಯಾಯಿತು. ಕೈಗಾರಿಕೆಗಳು ಬೆಳೆದವು. ಕೃಷಿಹೆಚ್ಚಿದಂತೆ ರಾಸಾಯನಿಕಗಳ, ಕೀಟನಾಶಕಗಳ ಬಳಕೆ ಹೆಚ್ಚಿತು. ಕೈಗಾರಿಕೆಗಳು ಬೆಳೆದಂತೆ ಯಂತ್ರೋಪಕರಣಗಳ ಉಪಯೋಗ ಹೆಚ್ಚಿತು. ಕೃಷಿಯಲ್ಲಿ ಬಳಸಿದ ರಾಸಾಯನಿಕ – ಕೀಟನಾಶಕಗಳಿಂದಾಗಿ, ವಾಹನಗಳು, ಯಂತ್ರಗಳು ಹೊರಬಿಡುವ ಧೂಳು, ಹೊಗೆ, ಕಶ್ಮಲ, ವಿಷಾನಿಲಗಳಿಂದಾಗಿ, ಗಾಳಿ ಕೆಟ್ಟಿತು. ನೀರು ಮಲಿನಗೊಂಡಿತು. ಆಹಾರ ವಿಷಯುಕ್ತವಾಯಿತು. ನಾವು ಕಪ್ಪೆಗಳು ಉಸಿರಾಡುವುದು ಚರ್ಮದ ಮೂಲಕ. ವಿಷವಸ್ತುಗಳಿಂದ ಕೂಡಿದ ಗಾಳಿ ಮತ್ತು ನೀರು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಚರ್ಮ ರೋಗಗಳಿಗೆ ನಾವು ತುತ್ತಾಗುತ್ತೇವೆ. ನಮ್ಮ ಚರ್ಮಕ್ಕೆ ಅಪಾಯ ತಟ್ಟುತ್ತದೆ. ನಮ್ಮ ಉಸಿರಾಟಕ್ಕೆ ತೊಡಕಾಗುತ್ತದೆ. ಬಹಳ ಮಂದಿ ನಮ್ಮವರು ಸಾವಿಗೆ ಈಡಾಗುತ್ತಾರೆ. ವಿಷಾಹಾರ ಸೇವನೆಯಿಂದಲೂ ನಮ್ಮವರು ಸಾಯುತ್ತಾರೆ. ಮಲಿನಗಾಳಿ, ನೀರು, ಆಹಾರ ಸೇವಿಸಿದವರು ತತ್‌ಕ್ಷಣ ಸಾಯದೆ ಇರಬಹುದು. ಆದರೆ, ಕ್ರಮೇಣ ನಮ್ಮ ಶಕ್ತಿ ಕುಂದುತ್ತದೆ. ಆರೋಗ್ಯ ಕೆಡುತ್ತದೆ. ನಾವು ಇರಿಸುವ ಮೊಟ್ಟೆಗಳ ಸಂಖ್ಯೆ ಕಡಿಮೆಯಾಗುತ್ತದೆ. ಇರಿಸಿದ ಮೊಟ್ಟೆಗಳೂ ಒಡೆಯುವುದಿಲ್ಲ. ಒಡೆದರೂ ಅಂಗವಿಕಲ ಮರಿಗಳು ಹುಟ್ಟಿಕೊಳ್ಳುತ್ತವೆ. ಅವು ಬದುಕಿ ಉಳಿಯುವುದಿಲ್ಲ. ನಮ್ಮ ಸಂತತಿ ಬೆಳೆಯುವುದಿಲ್ಲ. ದಿನದಿನಕ್ಕೆ ನಮ್ಮ ಸಂಖ್ಯೆ ಕಡಿಮೆಯಾಗುತ್ತಿದೆ. ಏನು ಹುಡುಗಾ, ನನ್ನ ಪುರಾಣ ಕೇಳಿ ಬೇಸರವಾಯಿತೆ ನಿನಗೆ?” ಕಪ್ಪೆ ಕಿಟ್ಟನನ್ನು ಪ್ರಶ್ನಿಸಿತು.

“ಇಲ್ಲಪ್ಪಾ ಇಲ್ಲ, ನಾನು ಕಿವಿಗೊಟ್ಟು ಕೇಳುತ್ತಲೇ ಇದ್ದೇನೆ. ಈಗ ನಿಮ್ಮವರು ಹೆಚ್ಚು ಸಂಖ್ಯೆಯಲ್ಲಿ ಕಾಣಸಿಗುವುದಿಲ್ಲ. ಅದಕ್ಕೆ ಕಾರಣವೇನು ಎನ್ನುವುದು ನನಗೆ ತಿಳಿದಂತಾಯಿತು” ಕಿಟ್ಟ ಹೇಳಿದ.

“ಪೂರ್ಣ ತಿಳಿದಂತೆ ಆಗಲಿಲ್ಲ ಹುಡುಗಾ. ತಿಳಿಯಬೇಕಾದುದು ಇನ್ನೂ ಇದೆ.” ಕಪ್ಪೆ ಹೇಳಿತು.

“ಇನ್ನೂ ಇದೆ? ಏನದು?” ಕಿಟ್ಟ ಕುತೂಹಲ ತೋರಿದ.

“ಹಣದ ಆಸೆಯಿಂದ ಈ ಮನುಷ್ಯರು ನಮ್ಮನ್ನೂ ಹಿಡಿದು ಮಾರಾಟ ಮಾಡುತ್ತಾರೆ. ಪ್ರತಿವರ್ಷ ಸಾವಿರಾರು ಟನ್ನುಗಳಷ್ಟು ಕಪ್ಪೆ ಆಹಾರ ಇಲ್ಲಿಂದ ಪರದೇಶಗಳಿಗೆ ರಫ್ತಾಗುತ್ತದೆ. ಅದರಲ್ಲೂ ನಮ್ಮ ಕಾಲುಗಳಿಗೆ ವಿಶೇಷ ಬೇಡಿಕೆಯಂತೆ. ನಿನಗಿದು ಗೊತ್ತೇ? ಒಂದು ಕೆ.ಜಿ. ಕಪ್ಪೆ ಕಾಲು ಸಿಗಲು ೩೦ ಮಂದಿ ನಮ್ಮವರು ಜೀವ ಬಿಡಬೇಕಾಗುತ್ತದೆ. ಹಾಗಾದರೆ ಸಾವಿರಾರು ಟನ್‌ಭಾರ ತೂಗಲು ನಮ್ಮಲ್ಲಿ ಎಷ್ಟು ಮಂದಿಯನ್ನು ಸಾಯಿಸುತ್ತಾರೆ, ನೀನೇ ಲೆಕ್ಕ ಹಾಕಿಕೋ,.”

“ಇನ್ನೂ ಹೇಳಬೇಕೆಂದರೆ, ಇಂದು ಹಸಿರು ಪರಿಸರ ನಾಶವಾಗಿದೆ. ಭೂಮಿಯ ಮೇಲಿನ ಓಜೋನ್‌ಪದರ ತೆಳ್ಳಗಾಗಿದೆ. ನೆಲದ ಮೇಲೆ ಬೀಳುವ ಅಲ್ಟ್ರಾವಾಯಿಲೆಟ್‌ವಿಶೇಷ ಕಿರಣಗಳು ನಮಗೆ ಅಪಾಯ ತಂದೊಡ್ಡುತ್ತವೆ. ಹಾಗೆಯೇ ಮಿತಿಮೀರಿದ ಕೈಗಾರಿಕಾ ತಾಜ್ಯಗಳು ಇಂದು ವಾತಾವರಣ ಸೇರುತ್ತವೆ. ಇದರಿಂದಾಗಿ ಆಮ್ಲ ಮಳೆಸುರಿಯುವುದೂ ಇದೆ. ಇದು ಸಹ ನಮಗೆ ಹಾನಿ ಉಂಟು ಮಾಡುತ್ತದೆ. ನಮ್ಮ ಸಂತತಿ ನಾಶಕ್ಕೆ ಇಂಥ ಹಲವು ಹತ್ತು ಕಾರಣಗಳಿವೆ. ಎಲ್ಲಕ್ಕೂ ಮೂಲ ಕಾರಣ ಮನುಷ್ಯ. ಅವನು ಮಾಡಿದ ಅನ್ಯಾಯದ ಫಲವಿದು. ಇದಕ್ಕೆ ತಕ್ಕ ಶಿಕ್ಷೆ ಅವನಿಗೂ ಆಗದಿರದು.” ದನಿ ಎತ್ತರಿಸಿ ಹೇಳಿತು ಕಪ್ಪೆ. ಅದಕ್ಕೆ ಬಾರೀ ಕೋಪ ಬಂದಿತ್ತು.

“ಮನುಷ್ಯರಿಗೆ ಶಿಕ್ಷೆಯಾಗುವುದೇ? ಏನು ಹೇಳುತ್ತಿರುವೆ ನೀನು?” ಕಿಟ್ಟ ಪ್ರಶ್ನಿಸಿದ.

“ನಾನು ನಿಜವನ್ನೇ ಹೇಳುತ್ತಿದ್ದೇನೆ. ಮನುಷ್ಯರ ಅನ್ಯಾಯಕ್ಕೆ ತಕ್ಕ ಶಿಕ್ಷೆ ಆಗಿಯೇ ತೀರುವುದು. ಇಷ್ಟರಲ್ಲಿಯೇ ಅಂತಹ ಸೂಚನೆಗಳು ಕಾಣಿಸತೊಡಗಿವೆ.” ದೃಢವಾಗಿ ಹೇಳಿತು ಕಪ್ಪೆ.

“ಅವರನ್ನು ಯಾರು ಶಿಕ್ಷಿಸುತ್ತಾರೆ? ಹೇಗೆ? ಅಂತಹ ಯಾವ ಸೂಚನೆಗಳು ಕಾಣಿಸಿಕೊಂಡಿವೆ.?” ಕೆಲವು ಪ್ರಶ್ನೆಗಳನ್ನು ಒಂದೇ ಉಸುರಿಗೆ ಕೇಳಿದ ಕಿಟ್ಟ.

“ಪರಿಸರ ಕೆಡಿಸಿದವರನ್ನು ಪ್ರಕೃತಿಯೇ ಶಿಕ್ಷಿಸುತ್ತದೆ. ಮನುಷ್ಯರು ಪರಿಸರವನ್ನು ಕೆಡಿಸಿದರು. ಪರಿಣಾಮವಾಗಿ ನಮ್ಮ ಸಂತತಿ ಕ್ಷೀಣಿಸಿತು. ನಮ್ಮನ್ನು ತಿಂದು ಬದುಕುವ ಹಾವು, ಹಕ್ಕಿಗಳಿಗೆ ಆಹಾರದ ಅಭಾವ ತಲೆದೋರಿತು. ಇನ್ನೊಂದೆಡೆ ಕೀಟನಾಶಕಗಳಿಗೆ ಬಗ್ಗದ ಕ್ರಿಮಿಕೀಟಗಳೂ ಹುಟ್ಟಿಕೊಂಡವು. ಬೆಳೆಗಳಿಗೆ ಕೀಟಬಾಧೆ ಹೆಚ್ಚಿತು. ಮಲೇರಿಯಾ ಮೊದಲಾದ ರೋಗಗಳು ಮತ್ತೆ ತಲೆ ಎತ್ತಿದವು. ಇಂಥ ಸಮಸ್ಯೆಗಳು ಇನ್ನಷ್ಟು ಹೆಚ್ಚಲಿವೆ. ಆಗ ಮನುಷ್ಯ ಭಾರೀ ಒದ್ದಾಡಬೇಕಾಗುತ್ತದೆ. ಆದರೇನು? ಆಗ ಅಳಿದು ಹೋದ ನಮ್ಮವರು ಬರುವುದೂ ಇಲ್ಲ, ನಾವೆಲ್ಲ ಬದುಕಿ ಇರುವುದೂ ಇಲ್ಲ. ನಮ್ಮ ಪಾಲಿಗೆ ಎಲ್ಲವೂ ಮುಗಿದುರುತ್ತದೆ. “ಹೀಗೆ ಹೇಳುತ್ತಾ ಕಪ್ಪೆ ನಿಟ್ಟುಸಿರುಬಿಟ್ಟಿತು. ಅದಕ್ಕೆ ಅಳು ಬರುವುದೊಂದು ಬಾಕಿ.

ಅಯ್ಯೋ ಪಾಪ ಎನಿಸಿತು ಕಿಟ್ಟನಿಗೆ. ಕಾತರದಿಂದ ಅವನು ಕೇಳಿದ “ಕಪ್ಪೆಯಣ್ನಾ, ನಿನಗಾಗಿ ನಾನೇನು ಮಾಡಲಿ ಹೇಳು.?”

“ಪರಿಸರವನ್ನು ಉಳಿಸು, ಆಗ ನೀವು-ನಾವು ಎಲ್ಲರೂ ಉಳಿಯುತ್ತೇವೆ.” ಎಂದಿತು ಕಪ್ಪೆ. ಅಷ್ಟು ಹೇಳಿ ಅದು ಹಿಂದಕ್ಕೆ ಜಿಗಿಯಿತು. ತನ್ನ ಜಾಗ ಸೇರಿಕೊಂಡಿತು.

ಆಗಲೇ ಕಿಟ್ಟನ ಅಮ್ಮ ಅವನನ್ನು ಕರೆಯುವುದು ಕೇಳಿಸಿತು.

“ಬಂದೆ ಅಮ್ಮಾ.” ಎನ್ನುತ್ತ ಅವನು ಮನೆಯ ಕಡೆ ನಡೆಯತೊಡಗಿದ.

“ಪರಿಸರ ಉಳಿಸು, ಎಲ್ಲರೂ ಉಳಿಯುತ್ತೇವೆ” ಈ ಮಾತು ಅವನ ಕಿವಿಗಳಲ್ಲಿ ಗುಯಿಂಗುಡುತ್ತಲೇ ಇತ್ತು.