ಶಿಶು ಸಾಹಿತ್ಯ ರಚನೆಯಲ್ಲಿ ಪಳಗಿದ ಕೈ ಪಳಕಳ ಸೀತಾರಾಮ ಭಟ್ಟರದು. ಈಗಾಗಲೇ ಅವರು ಮಕ್ಕಳಿಗಾಗಿ ಸುಮಾರು ತೊಂಬತ್ತರಷ್ಟು ಕೃತಿಗಳನ್ನು ರಚಿಸಿ, ಜನಪ್ರಿಯರಾಗಿದ್ದಾರೆ. ವಿಚಾರ ಪ್ರಚೋದಕವೂ ವೈವಿಧ್ಯಪೂರ್ಣವೂ ಆದ ಅವರ ಕೃತಿಗಳು ನಿತ್ಯನೂತನವಾಗಿವೆ. ಸರಳ ಸುಂದರ ಶೈಲಿಯಲ್ಲಿದ್ದು, ನಿರ್ದಿಷ್ಟ ಉದ್ದೇಶ ಸಾಧನೆಯಲ್ಲಿ ಯಶ ಪಡೆಯುತ್ತವೆ. ದಶಕದ ಹಿಂದೆ ಮಕ್ಕಳಿಗಾಗಿಯೇ ಅವರು ರಚಿಸಿದ ಕೃತಿಯೊಂದು (ಸಂಬಳವಿಲ್ಲದ ಸೇವಕ – ಭೂಮಿಯೆಲ್ಲ ಬಂಗಾರ) ಕನ್ನಾಡ ಜನಪ್ರಿಯ ಕೃಷಿಪತ್ರಿಕೆಯೆಂದು ಹೆಸರಾದ “ಅಡಿಕೆ ಪತ್ರಿಕೆ”ಯ ಬಳಗವು ಸಾವಿರಾರು ಮೈಲಿಗಳ ಓಡಾಟ ನಡೆಸಿ, ಕೃಷಿ ಕ್ಷೇತ್ರದಲ್ಲಿ ಎರೆಹುಳುಗಳ ಪಾತ್ರದ ಬಗ್ಗೆ ಸಮಗ್ರ ಅಧ್ಯಯನ ಮಾಡಿ, ಸಚಿತ್ರ ಲೇಖನ ಮಾಲೆಯನ್ನೇ ಪ್ರಕಟಿಸಲು ಕಾರಣವಾದುದನ್ನು ಇಲ್ಲಿ ಸ್ಮರಿಸಬಹುದು.

ಸದ್ಯ ನಮ್ಮ ಮುಂದಿರುವ “ಪರಿಸರ ಕತೆಗಳು” ಸಂಗ್ರಹದಲ್ಲಿ ಒಟ್ಟು ಹತ್ತು ಕತೆಗಳಿವೆ. “ಒಂದು ಕಪ್ಪೆಯ ಕಥೆ – ವ್ಯಥೆ” ಎಳೆಯ ತಲೆಯೊಳಗೆ ಪರಿಸರ ಸಂರಕ್ಷಣೆಯ ಮಹತ್ವವನ್ನು ನುಸುಳಿಸಿ, ನಿಜ ಬದುಕಿನ ಅರಿವು ಮೂಡಿಸುತ್ತದೆ.” ಪರಿಸರ ಉಳಿಸು, ಎಲ್ಲರೂ ಉಳಿಯುತ್ತೇವೆ” ಎಂಬ ಸಂದೇಶವನ್ನೂ ಸಾರುತ್ತದೆ. “ಮಾದನ ಶಪಥ”ವು ಅಜ್ಞನಾಗಿದ್ದರೂ ಸರಳ ಸಜ್ಜನನಾಗಿದ್ದ ಮರುಕಟುಕನೊಬ್ಬನ ಮನಃಪರಿವರ್ತನೆಯ ಬಗೆಯನ್ನು ತಿಳಿಸುತ್ತದೆ. “ಸಣ್ಣ ಹಕ್ಕಿಯ ದೊಡ್ಡ ಕೆಲಸ” ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಳಸಿ, ಭತ್ತದ ಬೆಳೆಯ ಸರ್ವನಾಶ ಅನುಭವಿಸಿದ ಚೀನಾದ ಜನರ ಬೋಳೇತನದ ಕತೆಯಾಗಿದೆ. “ಸಹಕಾರದ ಸುಖ” ಪ್ರಾಣಿ – ಪಕ್ಷಿಗಳ ನಿಸರ್ಗಸಹಜ ಅವಲಂಬನೆಯನ್ನು  ತೋರಿಸುತ್ತದೆ. “ರಮೇಶಣ್ಣ ಮೇಸ್ಟ್ರು ಆದಾಗ” ಜನ, ಬೇರು ಸಹಿತ ಕಿತ್ತೊಗೆಯಬೇಕೆನ್ನುವ ಯುಪಟೋರಿಯಂ ಸಸ್ಯದ ಗುಣಾವಗುಣಗಳನ್ನೆಲ್ಲ ಕತೆಯಾಗಿಸಿ, ತಿಳಿಸಿಕೊಡುತ್ತದೆ. “ಗುಬ್ಬಚ್ಚಿಯ ಗೋಳು” ಕರಾವಳಿ – ಮಲೆನಾಡುಗಳ ಮನೆ ಮನೆಗಳಲ್ಲಿ ಮುದ್ದಾಗಿ ಚಿಲಿಪಿಲಿಗುಟ್ಟುತ್ತ ಇದ್ದ ಗುಬ್ಬಚ್ಚಿಗಳು ಈಗ ಕಣ್ಮರೆಯಾಗಿರಲು ಕಾರಣಗಳನ್ನು ಬಿಚ್ಚಿಡುತ್ತದೆ. “ಹೆಸರು ತಂದ ಮಕ್ಕಳು” ಸಣ್ಣ  ಊರಿನ ಶಾಲೆಯ ಸಣ್ಣ ಮಕ್ಕಳ ದೊಡ್ಡ ಕಾರ್ಯ, ಎಲ್ಲ ಊರುಗಳ ದೊಡ್ಡವರೂ ಸೇರಿ ಮಾಡಬೇಕಾದ ಇಂದಿನ ಅನಿವಾರ್ಯ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಹೀಗೆ ಇಲ್ಲಿನ ಪ್ರತಿಯೊಂದು ಕತೆಯಲ್ಲೂ ನಮಗೆ ಒಂದಲ್ಲ ಒಂದು ಸಂದೇಶವಿದೆ., ಎಚ್ಚರಿಕೆ ಇದೆ.

ಒಟ್ಟಿನಲ್ಲಿ ಹೇಳುವುದಾದರೆ ಇದು “ಜೀವೋ ಜೀವಸ್ಯ ಜೀವನಂ” ಎಂಬ ವೇದಾಂತದ ಅಂತರಾರ್ಥವನ್ನು ಮೆದುಮನದಾಳದಲ್ಲಿ ಪ್ರತಿಷ್ಠಾಪಿಸಬಲ್ಲ ಸಾರ್ಥಕಗಾಥೆ, ಬಾಲ ಮಧುರ ಕಾನನರ ಸಂದರ್ಭೋಚಿತ ಚಿತ್ರಗಳಿಂದ ಕಳೆಏರಿಸಿಕೊಂಡಿರುವ ಬಾಳ ಕಲಾಮಾತೆ.

ಈ “ಪರಿಸರ ಕತೆಗಳು” ಪಳಕಳರು ಎಳೆಯರಿಗಾಗಿ ಬೆಳೆಸಿ ನೀಡಿದ ರಸಬಾಳೆಯ ಗೊನೆಯಾದರೂ ಹಳೆಬರು ಸಹ ಸವಿದು ಅರಗಿಸಿಕೊಳ್ಳಬಹುದಾದ ಸ್ವಾದಿಷ್ಟ ಫಲವಾಗಿದೆ. ಇದು ಪರಿಸರ ಕುರಿತಾದ ನಿರಂತರ ಕಲಿಕೆಯ ರಸಘಟ್ಟಿ. ತಮಗಾಗಿ, ತಮ್ಮ ಮಕ್ಕಳಿಗಾಗಿ ಹೆತ್ತವರೆಲ್ಲ ಕೊಂಡಿಟ್ಟುಕೊಳ್ಳಬೇಕಾದ್ದು., ಶಿಕ್ಷಣ ಇಲಾಖೆ, ಸರಕಾರ ಕೊಂಡು ಸಹಕರಿಸಬೇಕಾದ್ದು.

ಪಳಕಳರ ಪುಸ್ತಕಕ್ಕೆ ನನ್ನ ಮುನ್ನುಡಿಯ ಅಗತ್ಯವಿಲ್ಲ. ಆದರೂ ಆತ್ಮೀಯತೆಯಿಂದ ಅವರು ಕೇಳಿದರು., ಅಭಿಮಾನದಿಂದ ನಾನು ಬರೆದೆ. ಅದು ನನ್ನ ಸೌಭಾಗ್ಯ. ಈ ಅವಕಾಶಕ್ಕಾಗಿ ನಾನು ಅವರಿಗೆ ಋಣಿ. ಅವರು ಇನ್ನಷ್ಟು ರಚನಾತ್ಮಕ ಕಾರ್ಯ ನಡೆಸುವಂತಾಗಲಿ ಎಂಬುದು ನನ್ನ ಮಹದಾಸೆ.

“ಲೋಕಾಃ ಸಮಸ್ತಾಃ ಸುಖಿನೋ ಭವಂತು” ಎಂದು-

ಶಂಪಾ ದೈದೋಟ, ಪಾಣಾಜೆ.