ಕಳೆದ ಸುಮಾರು ೫೦ ವರುಷಗಳಿಂದ ಕನ್ನಡ ಮಕ್ಕಳ ಸಾಹಿತ್ಯಕ್ಕೆ ಅಳಿಲ ಸೇವೆ ಸಲ್ಲಿಸುತ್ತ ಬಂದಿರುವ ನನಗೆ ನನ್ನ ಆತ್ಮೀಯರಾದ ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದ ಉಡುಪ ಬಂಧುಗಳು ನಿರಂತರ ಬೆಂಬಲ ನೀಡಿದ್ದಾರೆ. ನನ್ನ ೫೦ಕ್ಕಿಂತ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ, ಉಪಕಾರ ಮಾಡಿದ್ದಾರೆ.

ನಾಡಿನ ಮಕ್ಕಳು, ಹೆತ್ತವರು, ಶಿಕ್ಷಕ ಬಂಧು, ಭಗಿನಿಯರು ನನ್ನ ಪುಸ್ತಕಗಳನ್ನು ಕೊಂಡು ಓದಿ, ಮೆಚ್ಚುಗೆ ಸೂಚಿಸಿ, ನನ್ನಲ್ಲಿ ಉತ್ಸಾಹ ತುಂಬಿದ್ದಾರೆ.ಸಹೃದಯಿಗಳೂ, ಸಾಹಿತ್ಯ ಪ್ರೇಮಿಗಳೂ ಆದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು, ಮೂಲ್ಕಿ, ಶ್ರೀ ಬೊಳುವಾರು ಮಾಧವ ನಾಯಕ್‌, ಪುತ್ತೂರು, ಕನ್ನಡ ಪೂಜಾರಿ ಕಣ್ಣನ್‌, ಹಿರೇಮಗಳೂರು, ಇವರು ಸ್ವಯಂಪ್ರೇರಣೆಯಿಂದ ಆರ್ಥಿಕ ನೆರವು ನೀಡಿ, ಪ್ರೋತ್ಸಾಹಿಸಿದ್ದಾರೆ. ಇವರೆಲ್ಲರ ಉಪಕರವನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ.

ದ.ಕ. ಪರಿಸರಾಸಕ್ತರ ಒಕ್ಕೂಟದ ಅಧ್ಯಕ್ಷರೂ “ನಿಸರ್ಗ” ಪತ್ರಿಕೆಯ ಸಂಪಾದಕರೂ ನನ್ನ ಆತ್ಮೀಯ ಸಾಹಿತಿ ಮಿತ್ರರೂ ಆದ ಶ್ರೀ ಶಂಪಾ ದೈತೋಟ ಅವರು ಇದೀಗ ಹೊರಬರುತ್ತಿರುವ “ಪರಿಸರ ಕತೆಗಳು” ಪುಸ್ತಕದ ಉಪಯುಕ್ತತೆಯ ಬಗ್ಗೆ ಮೆಚ್ಚುನುಡಿಯಾಡಿ, ಶುಭ ಹಾರೈಸಿದ್ದಾರೆ.

ನನ್ನ ಕಲಾವಿದ ಮಿತ್ರ ಬಾಲ ಮಧುರ ಕಾನನ, ಬೇಳ (ಕಾಸರಗೋಡು) ಅವರು ಅಂದವಾದ ಚಿತ್ರಗಳನ್ನು ಬರೆದುಕೊಟ್ಟು, ಈ ಪುಸ್ತಕಕ್ಕೆ ಹೆಚ್ಚಿನ ಮೆರುಗು ನೀಡಿದ್ದಾರೆ.

“ಉದಯವಾಣಿ”, “ತರಂಗ”, “ವಿಜಯಕರ್ನಾಟಕ” ಪತ್ರಿಕೆಗಳ ಸಂಪಾದಕರು ಈ ಪುಸ್ತಕದ ಕೆಲವು ಕತೆಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದ್ದಾರೆ.

ಅನುಭವಿಗಳನೇಕರು ತಮ್ಮ ಭಾಷಣ, ಲೇಖನ, ಪತ್ರಿಕಾ ವರದಿಗಳ ಮೂಲಕ ಮಾಹಿತಿ ಸಂಗ್ರಹಿಸಲು ನನಗೆ ನೆರವಾಗಿದ್ದಾರೆ.

ದಿನಾರ್ ಗ್ರಾಫಿಕ್ಸ್‌, ಮೂಡಬಿದಿರೆ ಅವರು ಈ ಪುಸ್ತಕವನ್ನು ಅಂದವಾಗಿ ಮುದ್ರಿಸಿಕೊಟ್ಟು ಸಹಕರಿಸಿದ್ದಾರೆ. ಇವರೆಲ್ಲರಿಗೂ ನನ್ನ ತುಂಬು ಹೃದಯದ ವಂದನೆಗಳು

ಪಳಕಳ ಸೀತಾರಾಮ ಭಟ್ಟ
ಶಿಶುಸಾಹಿತ್ಯಮಾಲೆ
ಮಿತ್ತಬೈಲು
೦೫.೦೬.೨೦೦೦