ಮಕ್ಕಳು ಬಹಳ ಬೇಗ ಕಂಪ್ಯೂಟರ್ ಬಳಕೆಯನ್ನು ಕಲಿತುಬಿಡುತ್ತಾರೆ. ಅಂತರಜಾಲದಲ್ಲಿ ಗೇಮ್ಸ್ ಆಡುವುದು, ಮಾಹಿತಿಗಾಗಿ ಹುಡುಕುವುದು ಎಲ್ಲವನ್ನೂ ಬಹಳ ಬೇಗ ಅರ್ಥ ಮಾಡಿಕೊಳ್ಳುತ್ತಾರೆ.  ಅಂತರಜಾಲ ಮಕ್ಕಳಿಗೂ ಹೊಸದೊಂದು ಲೋಕವನ್ನೇ ತೆರೆದಿಡುತ್ತದೆ. ಅವರ ಕಲಿಯುವ ಉತ್ಸಾಹ ಮತ್ತು ವೇಗವನ್ನು ನೋಡಿ ಸಂತೋಷಗೊಂಡ ಪಾಲಕರು ಮಕ್ಕಳಿಗೆ ಅಂತರಜಾಲ ಬಳಕೆಯ ಸ್ವಾತಂತ್ರ್ಯವನ್ನು ನೀಡುವ ಮೊದಲು ತಿಳಿದುಕೊಳ್ಳಬೇಕಾದ ಅನೇಕ ವಿಷಯಗಳಿವೆ.

ಅಂತರಜಾಲ ಅತ್ಯಂತ ಪ್ರಯೋಜನಕಾರಿ ಮಾಹಿತಿ ಸಾಗರವೇನೋ ಹೌದು, ಆದರೆ ಅದು ಸಂಪೂರ್ಣ ಸುರಕ್ಷಿತವಲ್ಲ. ಪತ್ರಿಕೆ, ದೂರದರ್ಶನ ಮುಂತಾದ ಮಾಧ್ಯಮಗಳಂತೆ ಅಂತರಜಾಲ ಏಕಮುಖಿ ಮಾಧ್ಯಮವಲ್ಲ, ಇಲ್ಲಿ ಎಲ್ಲ ಬಳಕೆದಾರರು ಮಾಹಿತಿದಾರರೂ ಆಗಲು ಸಾಧ್ಯವಿದೆ ಮತ್ತು ಆಗುತ್ತಾರೆ. ನಿರಂತರವಾಗಿ ಮಾಹಿತಿ ಹಂಚಿಕೆ ಜೊತೆಗೆ ಅಂತರಜಾಲದಲ್ಲಿ ವ್ಯಕ್ತಿಗಳ ನಡುವೆ ಸಂವಹನವನ್ನು ಸಾಧ್ಯವಾಗಿಸುವ ಅನೇಕ ಸಾಧ್ಯತೆಗಳು ಅಂತರಜಾಲದಲ್ಲಿವೆ. ಸುದ್ದಿತಾಣಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಜನರು ಪರಸ್ಪರ ಪರಿಚಿತರಾಗುತ್ತಾರೆ ಮತ್ತು ಸಂವಾದ ನಡೆಸುತ್ತಾರೆ. ಹೀಗೆ ಪರಿಚಯವಾಗುವ ಜನರಲ್ಲಿ ಕೆಲವರು ಸುಳ್ಳು ಹೆಸರು, ವಿಳಾಸದೊಂದಿಗೆ ಅಂತರಜಾಲದಲ್ಲಿ ಸೇರಿಕೊಂಡು ದುರುದ್ದೇಶದ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇಂತಹ ವ್ಯಕ್ತಿಗಳು, ಗುಂಪುಗಳು ಮತ್ತು ಸಂಘಟನೆಗಳು ನಡೆಸುವ ಸೈಬರ್ ಕ್ರೈಮ್ ಕುರಿತು ಅರಿವು ಮತ್ತು ಎಚ್ಚರ ಎಲ್ಲರಿಗೂ ಅಗತ್ಯ. ಮಕ್ಕಳಿಗೆ ಅಂತರಜಾಲದ ಬಳಕೆಗೆ ಅವಕಾಶ ನೀಡುವ ಪಾಲಕರು ಮತ್ತು ಶಿಕ್ಷಕರು ಕೂಡಾ ಈ ಕುರಿತು ತಿಳಿದುಕೊಂಡಿದ್ದು, ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕಾಗುತ್ತದೆ.

ಮೊದಲನೆಯದಾಗಿ ಮಾಹಿತಿ ಹುಡುಕಾಟದ ಸರ್ಚ್ ಎಂಜಿನ್‌ಗಳು. ನಾವು ಹುಡುಕುವ ಪದಗಳಿಗೆ ಅಥವಾ ಪದಗುಚ್ಛಗಳಿಗೆ ಉತ್ತರವಾಗಿ ಲಕ್ಷಾಂತರ ಪುಟಗಳು ತೆರೆದುಕೊಳ್ಳುತ್ತವೆ. ಈ ಪುಟಗಳಲ್ಲಿ ಪಠ್ಯಗಳಲ್ಲದೇ ಚಿತ್ರಗಳು ಮತ್ತು ವೀಡಿಯೋಗಳೂ ತೆರೆದುಕೊಳ್ಳುತ್ತವೆ. ಅವುಗಳಲ್ಲಿ ಕೆಲವು ಪುಟಗಳು ಮಕ್ಕಳು ಮತ್ತು ಅಪ್ರಾಪ್ತರು ನೋಡಬಾರದ ಲೈಂಗಿಕತೆ, ಕ್ರೌರ್ಯವನ್ನು ಪ್ರದರ್ಶಿಸುವ ಪುಟಗಳು ಸಹಾ ಇರುತ್ತವೆ. ಅಂತಹ ಪುಟಗಳನ್ನು ಶೋಧಿಸುವುದು ಮತ್ತು ನಿರ್ಭಂಧಿಸುವುದು ಸಾಧ್ಯವಿದೆ.

ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವುದು, ಮತ್ತು ಎಲ್ಲ ವಯಸ್ಸಿನವರೂ ಆಸಕ್ತಿಯಿಂದ ಪಾಲ್ಗೊಳ್ಳುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ. ಅದರಲ್ಲಿಯೂ ಫೇಸ್‌ಬುಕ್, ಆರ್ಕುಟ್ ಮುಂತಾದವುಗಳಲ್ಲಿ ಹದಿಹರಯದವರು ಮತ್ತು ಮಕ್ಕಳೂ ಸೇರಿದಂತೆ ಎಲ್ಲರೂ ಭಾಗವಹಿಸುತ್ತಾರೆ, ಹೊಸ ಸ್ನೇಹಿತರನ್ನು ಸಂಪಾದಿಸಿಕೊಳ್ಳುತ್ತಾರೆ ಮತ್ತು ಅನೇಕ ವಿಷಯಗಳನ್ನು ಚರ್ಚಿಸುತ್ತಾರೆ. ಇಂತಹ ತಾಣಗಳಲ್ಲಿ ಅನೇಕ ದುರುದ್ದೇಶದ ಜನರು ಮಕ್ಕಳು ಮತ್ತು ಹದಿಹರೆಯದವರೊಡನೆ ಮಾತಿಗೆ ತೊಡಗಿ ಅವರ ಸ್ನೇಹ ಸಂಪಾದಿಸಿಕೊಳ್ಳುತ್ತಾರೆ. ಅಂತಹ ಜನರು ಮಕ್ಕಳಿಂದ ಅವರ ಖಾಸಗಿ ಮಾಹಿತಿಗಳನ್ನು, ಮನೆಯ ವಿಳಾಸವನ್ನು ಪಡೆದುಕೊಂಡು ಅದನ್ನು ಕಳ್ಳತನಕ್ಕೆ ಬಳಸಿಕೊಳ್ಳಬಹುದು, ಅಥವಾ ಅಪ್ರಾಪ್ತರನ್ನು ಲೈಂಗಿಕವಾಗಿ ಬಳಸಿಕೊಳ್ಳಬಹುದು ಅಥವಾ ಮತಾಂತರ ಮಾಡಲು ಪ್ರಯತ್ನಿಸಬಹುದು, ಕಳ್ಳತನ ಅಥವಾ ಭಯೋತ್ಪಾದನೆಯಂತಹ ಕಾರ್ಯಗಳಿಗೂ ಬಳಸಿಕೊಳ್ಳಬಹುದು. ಹಾಗಾಗಿ ಇಂತಹ ತಾಣಗಳಲ್ಲಿ ಮಕ್ಕಳು ಯಾರ ಜೊತೆ ಮಾತನಾಡುತ್ತಿದ್ದಾರೆ ಎಂಬುದರ ಕುರಿತು ನಿಗಾ ಇಡಬೇಕು. ಅವರಿಗೆ ಅಂತರಜಾಲದ ಮಹತ್ವವನ್ನು ತಿಳಿಸುತ್ತಲೇ ಎಚ್ಚರವನ್ನೂ ಕಲಿಸಬೇಕಾಗುತ್ತದೆ. ಮಕ್ಕಳು ಯಾರನ್ನಾದರೂ ಸುಲಭದಲ್ಲಿ ನಂಬಿಬಿಡುತ್ತಾರಾದ್ದರಿಂದ, ಯಾರಾದರೂ ಮುಖತಃ ಭೇಟಿ ಬಯಸಿದಾಗ ಮನೆಯ ಹಿರಿಯರೊಡನೆ ತಿಳಿಸಬೇಕೆಂದು ಅವರಿಗೆ ಹೇಳಬೇಕು. ಪಾಸ್‌ವರ್ಡ್, ಬ್ಯಾಂಕ್ ವಿವರಗಳು, ಮನೆಯ ಅಥವಾ ಮನೆಯವರ ವಿವರಗಳನ್ನೂ ಅಪರಿಚಿತರಿಗೆ ಬಿಟ್ಟುಕೊಡಬಾರದು.

ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ ವೆಬ್ ಕ್ಯಾಮೆರಾ ಬಳಕೆ. ಈ ವೆಬ್ ಕ್ಯಾಮೆರಾಗಳ ಮೂಲಕ ಅಪರಿಚಿತರು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಮಾಡಬಹುದು. ಮಕ್ಕಳು ವೆಬ್ ಕ್ಯಾಮೆರಾ ಬಳಸುವುದನ್ನು ನಿರ್ಬಂಧಿಸುವುದು ಉತ್ತಮ.  ಒಂದು ವೇಳೆ ಬಳಸಿದರೂ, ಅಪರಿಚಿತರು ಕಳಿಸುವ ವೆಬ್ ಕ್ಯಾಮೆರಾ ಕೋರಿಕೆಗಳನ್ನು ಯಾವತ್ತೂ ಸ್ವೀಕರಿಸಬಾರದು ಎಂಬುದನ್ನು ಮಕ್ಕಳಿಗೆ ತಿಳಿಸಬೇಕು.

ಇನ್ನು ಖಾಸಗಿ ಚಾಟ್ ರೂಮ್‌ಗಳು. ಅವುಗಳಲ್ಲಿ ಬೇರೆ ಬೇರೆ ದೇಶದ, ವಿವಿಧ ಸಾಂಸ್ಕೃತಿಕ ಹಿನ್ನೆಲೆಯಿರುವ ಜನರು ಅನಾಮಿಕರಾಗಿ, ಬೇರೆ ಹೆಸರಿನಲ್ಲಿ ಪರಸ್ಪರ ಚಾಟ್ ಮಾಡುತ್ತಿರುತ್ತಾರೆ. ಅವರ ಆಸಕ್ತಿಗಳು, ಲೈಂಗಿಕ ಅಭ್ಯಾಸಗಳು ಸಹಾ ವಿವಿಧ ರೀತಿಯವಾಗಿರುತ್ತವೆ. ಅಂತಹ  ಚಾಟ್‌ರೂಮ್‌ಗಳಿಗೆ ಮಕ್ಕಳು ಪ್ರವೇಶಿಸದಂತೆ ನೋಡಿಕೊಳ್ಳುವುದು ಅತ್ಯಂತ ಅಗತ್ಯ. ಅಂತಹ ಚಾಟ್‌ರೂಮುಗಳನ್ನು ನಿರ್ಬಂಧಿಸುವ ಸುರಕ್ಷತಾ ವೈಶಿಷ್ಟ್ಯಗಳನ್ನು ಅಂತರಜಾಲ ಸೇವೆ ನೀಡುವವರು ಒದಗಿಸುತ್ತಾರೆ. ಫೇಸ್‌ಬುಕ್‌ನಂತಹ ಸಾಮಾಜಿಕ ತಾಣಗಳು ಮತ್ತು ಜಿಮೇಲ್‌ನಂತಹ ಇಮೇಲ್ ಸೇವೆಗಳಲ್ಲಿ ಚಾಟ್‌ವೈಶಿಷ್ಟ್ಯಗಳಿದ್ದು, ಅವುಗಳಲ್ಲಿ ಸ್ನೇಹಿತರೊಡನೆ ಚಾಟ್ ಮಾಡಬಹುದಾಗಿದೆ.

ಪೋಷಕರ ನಿಯಂತ್ರಣ ಸಾಧನಗಳು

ಅಂತರಜಾಲದ ಬಳಕೆಯಲ್ಲಿ ಆಗಬಹುದಾದ ಕೆಟ್ಟ ಅನುಭವಗಳನ್ನು  ತಪ್ಪಿಸಲು ಮತ್ತು ಸುರಕ್ಷಿತವಾಗಿ ಅಂತರಜಾಲದ ಸೌಲಭ್ಯಗಳನ್ನು ಆನಂದಿಸಲು ಅನೇಕ ಸಾಧನಗಳು ಲಭ್ಯವಿವೆ. ಸಾಧನಗಳನ್ನು ಸ್ಥಾಪಿಸಿಕೊಂಡಾಗ ನಿಮ್ಮ ಮಗುವಿನ ಇಮೇಲ್ ಖಾತೆಗೆ ಬರುವ ಇಮೇಲ್ಗಳು ನಿಮ್ಮ ಖಾತೆಗೆ ಬಂದು ಬೀಳುತ್ತವೆ. ಮೂಲಕ ನೀವು ಯಾರು ನಿಮ್ಮ ಮಕ್ಕಳ ಖಾತೆಗೆ ಇಮೇಲ್ ಕಳಿಸುತ್ತಿದ್ದಾರೆ ಎಂಬುದನ್ನು ನೋಡಬಹುದು ಮತ್ತು ನಿರ್ದಿಷ್ಟ ಇಮೇಲ್ ವಿಳಾಸಗಳಿಂದ ಇಮೇಲ್ ಬರುವಿಕೆಯನ್ನು ತಡೆಗಟ್ಟಬಹುದು ಕೂಡಾ. ಅಷ್ಟೇ ಅಲ್ಲ, ಅಸಭ್ಯ, ಲೈಂಗಿಕ ಸಂಗತಿಗಳ ಪದಗಳನ್ನು ಹೊಂದಿರುವ ಇಮೇಲ್ಗಳನ್ನು ನಿರ್ಬಂಧಿಸಬಹುದು. ಇಂತಹ ಸಾಧನಗಳನ್ನು ಇಂಟರ್ನೆಟ್ ಸೇವಾದಾರರಿಂದ ಅಥವಾ ಕಂಪ್ಯೂಟರ್ಮಾರಾಟಗಾರರಿಂದಲೂ ಕೊಳ್ಳಬಹುದಾಗಿದೆ. ಸಾಧನಗಳಲ್ಲಿ ವಿವಿಧ ಬಗೆಯವುಗಳಿದ್ದು, ಬೇರೆ ಬೇರೆ ಜನರ ಅಗತ್ಯಗಳಿಗೆ ತಕ್ಕಂತಹ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ. ನಿಮ್ಮ ಕೌಟುಂಬಿಕ ಬಳಕೆಗೆ ಬೇಕಾದ ಸಾಧನವನ್ನು ನೀವು ಕೊಳ್ಳಬಹುದು. ಸಾಧನಗಳು ಸಂಪೂರ್ಣವಾಗಿ ಸುರಕ್ಷಿತವಲ್ಲ ಎಂಬುದು ನೆನಪಿರಲಿ, ಹಾಗೆಯೇ ಮಕ್ಕಳ ಅಂತರಜಾಲದ ಬಳಕೆಯ ಕುರಿತು ನಿಗಾ ಕೂಡಾ ಇರಲಿ.

ಪೋಷಕರಿಗೆ ಸಲಹೆಗಳು:

  • ಮಕ್ಕಳೊಂದಿಗೆ ಅಂತರಜಾಲದಲ್ಲಿ ಸ್ವಲ್ಪ ಸಮಯ ಕಳೆಯಿರಿ ಮತ್ತು ಅಂತರಜಾಲದ ಬಳಕೆಯನ್ನು ಅವರಿಗೆ ಕಲಿಸಿ.
  • ಅವರು ತಮ್ಮದೇ ಆದ ಜಾಲನಾಮವನ್ನು ರಚಿಸಿಕೊಂಡು ಅದರ ಮೂಲಕ ಅಂತರಜಾಲದ ಬಳಕೆ ಮಾಡಿಕೊಳ್ಳಲು ಸಹಾಯ ಮಾಡಿ.
  • ಮಕ್ಕಳಿಗೆ ಇಷ್ಟವಾದ ಪುಟಗಳನ್ನು ಬುಕ್‌‍ಮಾರ್ಕ್ ಮಾಡಿಕೊಳ್ಳುವುದನ್ನು ಕಲಿಸಿ.
  • ಮಕ್ಕಳು ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಜಾಲತಾಣಗಳಲ್ಲಿ ಖರೀದಿ ಮಾಡಿಬಿಡುವ ಮತ್ತು ಮೋಸಹೋಗುವ ಸಾಧ್ಯತೆಯಿರುತ್ತದೆ. ಆ ಕುರಿತು ಎಚ್ಚರದಿಂದಿರಿ.
  • ಅಂತರಜಾಲದ ಬಳಕೆ ಸಮಯದಲ್ಲಿ ಮಕ್ಕಳಿಗೆ ಯಾರಿಂದಲಾದರೂ ಅಥವಾ ಯಾವುದೇ ರೀತಿಯಲ್ಲಿ ತೊಂದರೆ ಉಂಟಾದಲ್ಲಿ ಅದನ್ನು ನಿರ್ಲಕ್ಷಿಸಬೇಡಿ. ತಕ್ಷಣ ಪರಿಹಾರ ಕ್ರಮಗಳನ್ನು ಕಂಡುಕೊಳ್ಳಿ. ನಿಮ್ಮ ಅಂತರಜಾಲ ಸೇವೆ ನೀಡುವವರನ್ನು ಸಂಪರ್ಕಿಸಿ.