ಇಂದಿನ ಕಿರಿಯರೇ ಮುಂದಿನ ಹಿರಿಯರು. ಈ ಕಿರಿಯರಲ್ಲಿ ಕಿರು ಹರೆಯದಲ್ಲೇ ಹಿರಿಮೆಯ ತಿಳಿವು ಮೂಡಿದಾಗ ಮುಂದಿನ ಬಾಳು ಬೆಳಗಿ ಕಂಗೊಳಿಸಿತು.

ಈ ತಿಳಿ ಬಗೆಯಾಳದಳಲ್ಲಿ ತಳವೂರಲಿ ಹೊರ ಸೊಬಗಿಗಿಂತಲೂ ಬಗೆದಾವರೆಯನ್ನರಳಿಸುವ ತಿಳಿ ನೇಸರ ಹೊಂಬೆಳಗೇ ಏಳಿಗೆಯ ಮೊದಲ ಮೆಟ್ಟಲು. ಈ ದಿಸೆಯಲ್ಲಿ ಒಪ್ಪುವ ಮೆಚ್ಚುವ ಹೊಸ ಹೊಸ ಹೊತ್ತಗೆಗಳ ಮೂಲಕ ಗೆಳೆಯರಾದ ಶ್ರೀ ಪಳಕಳ ಸೀತಾರಾಮ ಭಟ್ಟರ ಹಗಲಿರುಳ ಹೋರಾಟ ಆ ಬಗೆಗೆ ವಹಿಸಿದ ಕಾಳಜಿ ನಡೆಸಿದ ಶಾರದೆಯ ಸಂಪೂಜನೆಗೆ ಹೊಗಳಿದಷ್ಟು ಕಡಿಮೆ.

ಬರೇ ಬಾಯಿ ಮಾತುಗಳ ಸುರಿಮಳೆಯಿಂದ ಈ ದಿಸೆಯ ಬೇಸಾಯ ಬೆಳೆಯಲಾಗದು. ಶ್ರೀ ಪಳಕಳರಂತೂ ಎಳೆಯರನ್ನು ಬಳಿ ಸೆಳೆಯುವಂತಹ ಅದರ ಬಗೆ ನಲಿಯುವಂತಹ ಚೆಲುವಿನ ಹತ್ತು ಹಲವು ದಾರಿಗಳಲ್ಲಿ ಮುನ್ನಡೆಸಿದ್ದಾರೆ. ಹಾಡಿನ ಮೂಲಕ ಕುಣಿದಾಡಬಹುದಾದ, ನಾಟಕದ ಮುಖಾಂತರ ಹುರುಪು ಹುಮ್ಮಸ್ಸು ಹುಟ್ಟಿಸುವಂತಹ, ಕಿರುಗತೆಗಳ ಹೆಸರಲ್ಲಿ ತಮ್ಮನ್ನೆ ತಾವು ಮರೆಯುವಂತಹ, ಒಟ್ಟಿನ ಮೇಲೆ ಸಾಹಿತ್ಯದ ವಿವಿಧ ಪ್ರಾಕಾರಗಳ ಹಲವಾರು ಹೊತ್ತಗೆಗಳ ರಚನೆಗೈದು ನವ ಚೈತನ್ಯ ಹುಟ್ಟಿಸಿದ ಸಂಗತಿ ಕಿರಿದಲ್ಲ. ಹಾಗಾಗಿಯೇ ೧೯೮೮ರಲ್ಲಿ ಮುಲ್ಲಕಿಯ ಜ್ಞಾನಮಂದಿರದಲ್ಲಿ ಶ್ರೀ ಹರಿಕೃಷ್ಣ ಪುನರೂರು ಹಾಗೂ ಅವರ ಬಳಗದವರ ನೇತೃತ್ವದಲ್ಲಿ ಜರುಗಿದ್ದ ಅಪೂರ್ವ ವೈಭವದ “ಬಾಲ ಭಾರತಿ” ಮಕ್ಕಳ ಮೇಳದಲ್ಲಿ ಶ್ರೀ ಪಳಕಳ ಸೀತಾರಾಮ ಭಟ್ಟರೇ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವಂತಾಯಿತೆಂಬುದು ಗಮನಾರ್ಹ.

ಶ್ರೀಯುತರ ಈ ಬಾಲೋಪಯೋಗಿಯಾದ ೩೦ಕ್ಕೂ ಮಿಕ್ಕಿದ ಬಗೆ ಬಗೆಯ ಕಿರು ಹೊತ್ತಗೆಗಳನ್ನು ಬೆಳಕಿಗೆ ತರುವ ಸಂಗತಿಯಿಂದ ಯುಗಪುರುಷ ಪ್ರಕಟಣಾಲಯಲಕ್ಕೆ ಹೇಗೆ ಹಿರಿ ಹೆಮ್ಮೆಯೋ ಹಾಗೆಯೇ ಶಿಶು ಸಾಹಿತ್ಯಕ್ಕೆ ಸಂಬಂಧಿಸಿದ ಸತ್ಕೃತಿ ಹೊನ್ನಹಬ್ಬದ ಕುರುಹಾದ ಈ “ಮಕ್ಕಳ ಮಾಣಿಕ್ಯ”ವನ್ನು ಪ್ರಕಟಿಸಲನುವು ಮಾಡಿ ಕೊಟ್ಟುದುದು ಸಂತಸದ ಸಂಗತಿ. ಹಾಗಾಗಿ ಕೃತಿ ರಚಯಿತ ಶ್ರೀ ಪಳಕಳ ಸೀತಾರಾಮ ಭಟ್ಟರಿಗೂ, ಆ ಕುರಿತು ತಗಲುವ ಎಲ್ಲಾ ವೆಚ್ಚದ ಹೊರೆಯನ್ನು ಕಂಪಿನ ನರುಗಂಪಿನಲರೆಂದು ಬಗೆದು ಹಗುರಗೊಳಿಸಿ ನೆರವಿತ್ತ ಶ್ರೀ ಹರಿಕೃಷ್ಣ ಪುನರೂರರಿಗೂ ಹಾರ್ದಿಕ ಚಿರಕೃತಜ್ಞತೆಗಳು. ಅಂತೆಯೇ ಈ ಹೊತ್ತಗೆಯ ಮುದ್ರಣದ ದಿಶೆಯಲ್ಲಿ ಸಹಕರಿಸಿದ ಯುಗಪುರುಷ ಮುದ್ರಣಾಲಯದವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಕೊಡತ್ತೂರು ಅನಂತಪದ್ಮನಾಭ ಉಡುಪ
ಸಂಪಾದಕ/ಪ್ರಕಾಶಕ
ಕಿನ್ನಿಗೋಳಿ,
೧೯.೧೨.೧೯೮೯