ಕೆಲವು ವರ್ಷಗಳ ಹಿಂದೆ ಹಿರಿಯಣ್ಣ ಶ್ರೀ ಸಿದ್ಧಯ್ಯ ಪುರಾಣಿಕ (ಕಾವ್ಯಾನಂದ ಅವರು ನನ್ನದೊಂದು ಮಕ್ಕಳ ಸಂಗ್ರಹಕ್ಕೆ ಮುನ್ನುಡಿ ಬರೆದು ಕೊಟ್ಟು ಹರಸಿದ್ದರು. ಅಂದು ಅವಳು ನನ್ನ ಆಯ್ದ ಕವನಗಳ ಪ್ರಾತಿನಿಧಿಕ ಸಂಗ್ರಹವೊಂದು ಬೆಳಕು ಕಾಣಲೆಂದು ಹಾರೈಸಿದ್ದರು. ಅವರ ಹರಕೆ-ಹಾರೈಕೆಗಳು ಇಂದು ಕೈಗೂಡುತ್ತಿವೆ. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಪ್ರಕಟಗೊಂಡ ನನ್ನ ಇಪ್ಪತ್ತು ಕವನ ಸಂಗ್ರಹಗಳಿಂದ ಆಯ್ದ ಕವನಗಳು ಇದೀಗ “ಮಕ್ಕಳ ಮಾಣಿಕ್ಯ” ಎಂಬ ಹೆಸರಲ್ಲಿ ಮತ್ತೆ ಬೆಳಕು ಗಾಣುತ್ತಿವೆ.

ಇಲ್ಲಿರುವ ಕವಿತೆಗಳು ಬಾಲವಾಡಿಯಿಂದ ಪ್ರೌಢ ಪ್ರಾಥಮಿಕ ಹಂತದವರೆಗಿನ ಮಕ್ಕಳಿಗಾಗಿ ರಚಿತವಾದವುಗಳು. ಇವುಗಳಲ್ಲಿ ಶಿಶುಗೀತೆಗಳು. ಶಿಶುಪ್ರಾಸಗಳು, ಅಭಿನಯ ಗೀತೆಗಳು, ದೇಶಭಕ್ತಿ ಗೀತೆಗಳು – ಹೀಗೆ ವಿವಿಧ ಪ್ರಕಾರಗಳ ಕವನಗಳಿವೆ. ಅವುಗಳನ್ನು ಇಲ್ಲಿ ಸ್ಥೂಲವಾಗಿ ವಿಂಗಡಿಸಿ, ಪ್ರತ್ನಪ್ರತ್ಯೇಕ ವಿಭಾಗಗಳಲ್ಲಿ ಪ್ರಕಟಿಸಲಾಗಿದೆ. ಹೀಗಿದ್ದರೂ ಒಟ್ಟು ಅರ್ಥದಲ್ಲಿ ಇವೆಲ್ಲ ಮಕ್ಕಳ ಕವನಗಳೇ ಅವುಗಳ ಸೂಕ್ಷ್ಮ ವಿಂಗಡಣೆ ಸುಲಭವೂ ಅಲ್ಲ; ಅನಿವಾರ್ಯವೂ ಅಲ್ಲ.

ಎಳೆಯು ಕವಿತೆಗಳಲ್ಲಿ ಭಾವ ಸಂಪತ್ತು, ಭಾಷಾ ಸೌಂದರ್ಯ. ಅರ್ಥ ಸ್ಫುಟಕ ಮತ್ತು ಅಲಂಕಾರರೋಕಲ್ತಿಗಳಿಗಿಂತಲೂ ತಾಳಲಯ ಬದ್ಧತೆ.  ಪ್ರಾಸ ವೈಭವ, ನಾದ ಮಾಧುರ್ಯ, ಸರಳ ಶೈಲಿ ಹಾಗೂ ಆಂಗಿಕ ಅಭಿನಯಕ್ಕೆ ಸಹಜ ಅವಕಾಶ-ಇವುಗಳಿಗೆ ಹೆಚ್ಚು ಪ್ರಾಶಸ್ತ್ಯ ಸಲ್ಲಬೇಕು. ಆರಿಸಿಕೊಂಡ ವಸ್ತುಗಳು ಮಕ್ಕಳ  ಅನುಭವ ಪ್ರಪಂಚಕ್ಕೆ ಸಂಬಂಧಿಸಿದವು ಆಗಿರಬೇಕು. ಈ ವಿಚಾರಗಳನ್ನೆಲ್ಲ ಗಮನದಲ್ಲಿರಿಸಿಕೊಂಡೇ ಇಲ್ಲಿನ ಕವಿತೆಗಳನ್ನು ಬರೆಯಲಾಗಿದೆ; ಆಯ್ದುಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ಪ್ರಚಲಿತ ಸನ್ನಿವೇಶದಲ್ಲಿ ನಮಗೆ ಅನಿವಾರ್ಯವಾಗಿರುವ ರಾಷ್ಟ್ರೀಯ ಭಾವೈಕ್ಯ, ದೇಶಪ್ರೇಮ ಕೋಮು ಸೌಹಾರ್ದ, ನಾಗರೀಕನ ಕರ್ತವ್ಯ, ಪರಿಸರ ಪ್ರಜ್ಞೆ, ಕಾಡಿನ ಮಹತ್ವ-ಇಂಥ ವಿಷಯಗಳ ಕುರಿತು ಬರೆದ ಹಾಡುಗಳೂ ಇಲ್ಲಿವೆ. ಸಣ್ಣ ಮಕ್ಕಳಿಗೂ ಅವರಿಗೆ ಕಲಿಸುವ ಅಧ್ಯಾಪಕ ಬಂಧು ಭಗಿನಿಯರಿಗೂ ಇನ್ನಷ್ಟು ಉಪಯುಕ್ತವಾಗಲಿ ಎಂಬ ದೃಷ್ಟಿಯಿಂದ ಶಿಶುಗೀತೆ-ಅಭಿನಯ ಗೀತೆಗಳಿಗೆ ಇಲ್ಲಿ ಹೆಚ್ಚು ಪ್ರಾಮುಖ್ಯ ಕೊಡಲಾಗಿದೆ. ಅವರು ಇವುಗಳ ಸದುಪಯೋಗ ಮಾಡಿಕೊಂಡರೆ ನನ್ನ ಶ್ರಮ ಸಾರ್ಥಕವಾಗುವುದು.

ಪ್ರಾತಿನಿಧಿಕವಾದ ಮಕ್ಕಳ ಕವನ ಸಂಗ್ರಹವೊಂದನ್ನು ಹೊರತರಬೇಕೆಂಬುದು ತನ್ನ ಬಹು ದಿನಗಳ ಆಸೆಯಾಗಿತ್ತು. ೫೦ನೆಯ ಪುಸ್ತಕವಾಗಿ ಅದನ್ನು ಪ್ರಕಟಿಸಬೇಕೆಂಬ ಹವಣಿಕೆ ನನ್ನದಿತ್ತು. ನಮ್ಮ ನಿರಂತರ ಪ್ರೋತ್ಸಾಹಕರೂ ಹಿರಿಯರೂ ಆದ ಶ್ರೀ ಕೊ.ಅ. ಉಡುಪರಲ್ಲಿ ಅದನ್ನು ನಾನು ತೋಡಿಕೊಂಡಿದ್ದೆ. ಯಾರನ್ನೂ ನಿರುತ್ಸಾಹಗೊಳಿಸದ ಅವರು ಆ ಕುರಿತು ಗಮನ ಹರಿಸುವ ಭರವಸೆ ನೀಡಿದ್ದರು. ಈ ಮಧ್ಯೆ ನನ್ನದೊಂದು ಪುಸ್ತಕ ಬಿಡುಗಡೆ ಆಗಮಿಸಿದ್ದ ಪ್ರಿಯ ಶ್ರೀ ಹರಿಕೃಷ್ಣ ಪುನರೂರು ಅವರು ನನ್ನ ೫೦ನೆಯ ಪುಸ್ತಕ ಪ್ರಕಾಶನದ ವಿಚಾರವನ್ನು ಶ್ರೀ ಉಡುಪರಿಂದ ತಿಳಿದುಕೊಂಡು ಅದರ ಸಂಪೂರ್ಣ ವೆಚ್ಚವನ್ನು ತಾನು ಭರಿಸುವೆನೆಂದು ಸಭೆಯಲ್ಲೆ ಘೋಷಿಸಿಬಿಟ್ಟರು. ತನ್ಮೂಲಕ ತನಗಿರುವ ಸಾಹಿತ್ಯಾಸಕ್ತಿಯನ್ನು ಮಾತ್ರವಲ್ಲದೆ ಬೇಡದೆಯೆ ನೀಡುವ ತನ್ನ ಉತ್ತಮಿಕೆಯನ್ನೂ ಘನ ಔದಾರ್ಯವನ್ನೂ ಪ್ರಕಟಿಸಿದರು. ಆಡಿದುದನ್ನು ಆಡಿದಂತೆ ಮಾಡಿಯೂ ತೋರಿಸಿದರು. ಆದುದರಿಂದ ಈ ಕೃತಿ ಪ್ರಕಾಶನದ ಸಂಪೂರ್ಣ ಶ್ರೇಯಸ್ಸು ಶ್ರೀ ಹರಿಕೃಷ್ಣ ಪುನರೂರು ಅವರಿಗೇ ಸಲ್ಲುವುದೆಂದು ವಿಜ್ಞಾಪಿಸಿಕೊಳ್ಳುತ್ತ ಶ್ರೀಯುತರ ಹೃದಯ ಶ್ರೀಮಂತಿಕೆಗೆ ತಲೆಬಾಗಿ ವಂದಿಸುತ್ತೇನೆ. ಹಾಗೆಯೇ ಜನರ ಜನತಾ ಜನಾರ್ದನರ ಸೇವಾ ಕಾರ್ಯಕ್ರಮಗಳು ಇತೋಪ್ಯತಿಶಯವಾಗಿ ನಡೆಯಲಿ. ಜೀವನದಲ್ಲಿ ಅವರು ಇನ್ನೂ ಹೆಚ್ಚಿನ ಶ್ರೇಯಸ್ಸನ್ನು ಪಡೆಯಲಿ, ಸುಖ ಶಾಂತಿಗಳ ತುಂಬು ಜೀವನ ಅವರದಾಗುವಂತೆ ಶ್ರೀ ಪರಮಾತ್ಮನು ಅನುಗ್ರಹಿಸಲಿ ಎಂದು ಹೃತ್ಪೂರ್ವಕ ಹಾರೈಸುತ್ತೇನೆ.

ಕಳೆದ ನಾಲ್ಕು ದಶಕಗಳಿಗೆ ಮಿಕ್ಕಿದ ಅವಧಿಯಲ್ಲಿ ಮಕ್ಕಳಿಗಾಗಿ ಸುಮಾರು ೫೦ ಪುಸ್ತಕಗಳನ್ನು ನಾನು ಬರೆದಿದ್ದರೆ ಅವುಗಳಲ್ಲಿ ಅರ್ಧ ಭಾಗಕ್ಕಿಂತ ಹೆಚ್ಚಿನದನ್ನು ಪ್ರಕಟಿಸಿ ಉಪಕಾರ ಮಾಡಿದವರು ನಮ್ಮ ನಿರಂತರ ಪ್ರೋತ್ಸಾಹಕರೂ ಹಿತೈಷಿಗಳೂ ಬಂಧುಗಳೂ ಆದ ಶ್ರೀ ಕೊ. ಅ . ಉಡುಪ ಅವರು. ಮಕ್ಕಳ ಸಾಹಿತ್ಯಕ್ಕೆ ನನ್ನಿಂದ ಸಂದ ಅಳಿಲ ಸೇವೆಗೆ ಅವರೇ ಪ್ರೇರಕ ಶಕ್ತಿ. ಈ “ಮಕ್ಕಳ ಮಾಣಿಕ್ಯ” ವನ್ನು ಸರ್ವಾಂಗ ಸುಂದರವಾಗಿ ಮುದ್ರಿಸಿಕೊಟ್ಟು ತಮ್ಮ ಪ್ರಕಟಣಾಲಯದ ಮೂಲಕ ಹೊರತಂದವರೂ ಅವರೇ. ಅವರಿಗೆ ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸುತ್ತೇನೆ. ಹಾಗೆಯೇ ಪುಸ್ತಕದ ಮುದ್ರಣಾಲಯದ ಕೆಲಸಗಾರ ಬಂಧು ಭಗಿನಿಯರಿಗೂ ನನ್ನ ಕೃತಜ್ಞತೆಗಳು.

ಆರಂಭದ ದಿನಗಳಲ್ಲಿ ನನ್ನ ಸಾಹಿತ್ಯ ರಚನೆಗೆ ಸಲಹೆ ಸೂಚನೆ ನೀಡಿದವರು. ಮಾರ್ಗದರ್ಶನ ಮಾಡಿದವರು ಆತ್ಮೀಯರಾದ ಶ್ರೀ ರಾ.ಮೊ. ವಿಶ್ವಾಮಿತ್ರ ಅವರು ಹಾಗೂ ಗುರುಗಳಾದ ಶ್ರೀ ಕಾಂತ ರೈ ಮತ್ತು ಶ್ರೀ ಟಿ. ರಘುಚಂದ್ರ ಶೆಟ್ಟಿ ಅವರು. ಅವರೆಲ್ಲರಿಗೂ ನಾನು ಚಿರ ಋಣಿ. ಬರವಣಿಗೆಯ ವಿಚಾರದಲ್ಲಿಲ ನನ್ನ ಸಹೋದ್ಯೋಗಿ ಮಿತ್ರರು ಶ್ರೀ ಬಿ. ಚಂದ್ರಯ್ಯ ಮುತ್ತು ಶ್ರೀ ಜಿ.ಆರ್. ಉಪಾಧ್ಯ – ಇವರ ಸಹಕಾರ ಸಹ ಸ್ಮರಣೀಯ ಅಂತೆಯೇ ಇಲ್ಲಿನ ಹಲವಾರು ಕವಿತೆಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿದ (ಚಂದಮಾಮ ಬಾಲಬಂಧು, ಬಾಲಮಿತ್ರ, ನವಭಾರತ, ತುತ್ತೂರಿ, ನೂತನ, ಬಾಲ ಭಾರತೀಯು ಯುಗಪುರುಷ, ಮಕ್ಕಳ ಮನೆ, ಸುಧಾ, ಉದಯವಾಣಿ,  ತರಂಗ ಇತ್ಯಾದಿ ಹಿಂದಿನ ಮತ್ತು ಇಂದಿನ) ಪತ್ರಿಕಾ ಸಂಪಾದಕರಿಗೆಲ್ಲ ನಾನು ಆಭಾರಿ. ಇದುವರೆಗೆ ನಾನು ಬರೆದ ಪ್ರಕಟಿಸಿದ ಪುಸ್ತಕಗಳನ್ನು “ಕೊಂಡು-ಆಡಿ” ಪ್ರೋತ್ಸಾಹಿಸಿದ ಮಕ್ಕಳು ಶಿಕ್ಷಕ ಬಂಧು ಭಗಿನಿಯರು ಹಾಗೂ ಹೆತ್ತವರನ್ನು ನಾನೆಂದು ಮರೆಯಲಾರೆ. ಈ ಪುಸ್ತಕದಲ್ಲಿ ಬಳಸಲು ಕೆಲವು ಪಡಿಯಚ್ಚುಗಳನ್ನು ಒದಿಗಿಸಿಕೊಟ್ಟ ಮೂಡುಬಿದಿರೆಯ ಶ್ರೀ ದಾಮೋದರ ಪ್ರಭು ಅವರಿಗೂ ನನ್ನ ನೆನೆಕೆಗಳು ಸಲ್ಲುತ್ತವೆ.

ಕೊನೆಯದಾಗಿ, ಮಕ್ಕಳಿಗೆಂದು ತಿಂಡಿ ತಿನಿಸುಗಳನ್ನು ಒಯ್ಯುವ ಹಿರಿಯರಿಗೆಲ್ಲ ಮಕ್ಕಳ ಹೆಚ್ಚಿನ ಓದಿಗಾಗಿ ಪುಸ್ತಕಗಳನ್ನು ಕೊಂಡುಕೊಳ್ಳುವ ಸದ್ಭುದ್ಧಿಯನ್ನು ಕನ್ನಡ ಭುವನೇಶ್ವರಿ ಅನುಗ್ರಹಿಸಲೆಂದು ಸದಾ ಪ್ರಾರ್ಥಿಸುತ್ತೇನೆ.

ಪಳಕಳ ಸೀತಾರಾಮ ಭಟ್ಟ
ಶಿಶು ಸಾಹಿತ್ಯ ಮಾಲೆ
ಮಿತ್ತಬೈಲು,
೧೯-೧೨-೧೯೮೯