ಭಾರತ ಭಾರತ ಭಾರತ ಎನ್ನುತ
ಮಿಡಿಯುತ ಇರುವುದು ನನ್ನದೆಯು
ಭಾರತ ಭಾರತ ಎನ್ನುತ ಮೊರೆಯುತ
ಗಾಳಿಯು ಬೀಸುವು ದೆಲ್ಲೆಡೆಯು

ಭಾರತವೆನ್ನದೆ ಚಣವೂ ನಿಲ್ಲದೆ
ನಲಿಯುತ ಇರುವುದು ನಾಲಗೆಯು
ಭಾರತ ಭಾರತ ಎನ್ನುತ ಹಿಗ್ಗುತ
ಕುಣಿಯುತ ಇರುವುದು ಈ ಬಗೆಯು

ಭಾರತ ಭಾರತ ಭಾರತ ಎನ್ನುತ
ಕೆರೆ ತೊರೆ ಕಲಕಲ ಮಾಡುವುದು
ಭಾರತ ಎನುತಲಿ ಸಕ್ಕರೆ ದನಿಯಲಿ
ಕೋಗಿಲೆ ಬನದಲಿ ಹಾಡುವುದು

ಭಾರತ ಎಲ್ಲವು ಬೇರೆ ನಿಲ್ಲವು
ಹಗಲಿನ ಜಾಗೃತ ಮನಸಿನಲಿ
ಭಾರತ ಸುತ್ತಲು ಭಾರತ ವೆತ್ತಲು
ರಾತ್ರೆಯ ನಿದ್ರೆಯ ಕನಸಿನಲಿ