ಸಾವಿರ ಸಾವಿರ ಜನಗಳು ಸೇರುತ
ಬಾಳುವ ಭಾರತ ದೊಡ್ಡ ಮನೆ
ಜಳ್ಳೂ ಕಾಳೂ ಕೂಡಿದ ಹೊಲವೆನೆ
ಬಂದಿದೆ ನಿಂದಿದೆ ತುಂಬ ತೆನೆ

ಹಳೆಯದು  ಹಿರಿಯದು ಹೆಸರಿನ ಮನೆಯಿದು
ಯಜಮಾನಿತಿ ಭಾರತ ಮಾತೆ
ಲೆಕ್ಕಕೆ ಸಿಕ್ಕದ ಮಕ್ಕಳ ತಾಯಿಯು
ಲೋಕದಿ  ಈಕೆಯು ವಿಖ್ಯಾತೆ

ಕನ್ನಡ ಕಾಶ್ಮೀರ ತಮಿಳು ರಾಜ್ಯಗಳು
ಕಟ್ಟಡ ವೊಂಧರ ಕೊಠಡಿಗಳು
ಯಾವುದು ಕುಸಿದರುಕುಸಿವವು ಎಲ್ಲವು
ಭಾರತ ಮಹಲಿನ ಮಹಡಿಗಳು

ಭಾಷೆಯು ಧರ್ಮವು ಬಗೆಬಗೆಯಾದರು
ನಮ್ಮದು ಸೋದರ ಸಂಬಂಧ
ಜನ ಜನ ಮನಗಳ ಸೆಳೆಯಲಿ ಬೆಸೆಯಲಿ
ಸಕ್ಕರೆ ಪ್ರೀತಿಯ ಸವಿಗಂಧ

ಒಗ್ಗಟ್ಟಿನ ಬಲ ಕೂಡಿ ದುಡಿವ ಛಲ
ಬೆಳೆಯಲಿ ಬೆಳಗಲಿ ಭಾರತವು
ಬಾನಿನ ಬಯಲಲಿ ಏರಲಿ ಹಾರಲಿ
ದೇಶದ ಕೀರ್ತಿಯ ಬಾವುಟವು