ಗಾಳಿಯೆ ಕೇಳು ನನ್ನೊಳು ಹೇಳು
ಎಲ್ಲಿರುವೆಯೊ ನೀನು?
ಆ ಕಡೆ ಈ ಕಡೆ ಕಣ್ಣೋಡಿಸಿದೆಡೆ
ಕಂಡಿಲ್ಲವು ನಾನು

ಆದರು ಮೆಲ್ಲ ಮರ ಗಿಡಕೆಲ್ಲ
ಕಚಗುಳಿಯಿಟ್ಟಾಗ
ಅಲ್ಲಿಹೆ ನೀನು ಬಲ್ಲೆನು ನಾನು
ಹಸುರೆಲೆ ನಕ್ಕಾಗ

ದೂರದ ತೆಂಗು ತೋಟದ ಕಂಗು
ತಲೆ ಬಾಗಿಸುವಾಗ
ಅಲ್ಲಿಗೆ ನೀನು ಬಂದುದ ನಾನು
ತಿಳಿವೆನು ಬಲು ಬೇಗ

ಚಲಿಸುತಲಿರುವೆ ತಂಪನು ತರುವೆ
ಓ ಗಾಳಿಯೆ ನೀನು
ಮಳೆಯನು ಕೊಡುವೆ ಮಂಜನು ಬಿಡುವೆ
ಕೈ ಮುಗಿವೆನು ನಾನು