ಗಿಡವ ನೆಡುವ ಗಿಡವ ನೆಡುವ
ನೆಟ್ಟು ಬೆಳೆವ ಮರಗಳ
ಮುಂದೆ ಅವು ನೀಡದಿರವು
ದಿನಕೆ ನೂರು ವರಗಳ

ಮರಗಳಿಂದ ಕೇಳು ಕಂದ
ಉಳಲು ನೊಗವು ನೇಗಿಲು
ಮನೆಗೆ ಜಂತಿ ಮೇಜು ಕುರ್ಚಿ
ಏಣಿ ಕಿಟಕಿ ಬಾಗಿಲು

ಮಣ್ಣ ಹೊನ್ನು ಹೂವು ಹಣ್ಣು
ಪತ್ರೆ ಗಂಧ ಚಂದನ
ಗೋಂದು ರಾಳ ಮೂಲಿಕೆಗಳ
ಅಡವಿ ನಮಗೆ ನಂದನ

ಸುತ್ತ ಸೊಂಪು ಸುಮದ ಕಂಪು
ನೆರಳ ತಂಪು ಕಾಡಲಿ
ನೆಲಕೆ ಮಳೆಯು ಹೊಲಕೆ ಬೆಳೆಯು
ಕಾಡು ಮೆರೆವ ನಾಡಲಿ

ಹಕ್ಕಿ ಹಿಂಡು ಪ್ರಾಣಿ ದಂಡು
ಕೋಟಿ ಜೀವ ಸಾಗರ
ಕೂಡಿ ಆಡಿ ಹಿಗ್ಗಿ ಹಾಡಿ
ನಲಿವ ಚೆಲುವಿ ನಾಗರ

ತೋಪು ಕಾಡು ನಲಿವ ನಾಡು
ಶಾಂತಿ ಸುಖದ ಮಂದಿರ
ಸೃಷ್ಟಿ ಸಮತೆ ನೆಲೆಸಿ ಜನಕೆ
ಬಾಳು ಸಹಜ ಸುಂದರ