ಮೂಡಲಲ್ಲಿ ಮೂಡುವಾಗ
ಪಡುವಲಲ್ಲಿ ಕಂತುವಾಗ
ಚಿಣ್ಣ ನೀನು ಸೂರ್ಯನನ್ನು
ಕಂಡೆಯೇನು?
ಕಂಡು ಅವನ ಚೆಲುವ ನೀನು
ಉಂಡೆಯೇನು?

ಮೂಡುವಾಗ ಮುಳುಗುವಾಗ
ಸೂರ್ಯ ತಾನು ಬೇಗ ಬೇಗ
ಕೆಂಪಗಿರುವ ತಂಪು ಕಿರಣ
ಬೀರುತಾ-ನೆ
ಬಿಸಿಯನುಳಿದು ತಂಪು ತಳೆದು
ತೋರುತಾ-ನೆ

ಅಂತೆ ನಾವು ಬಾಳಿನಲ್ಲಿ
ಬರುವ ಕಷ್ಟ ಸುಖಗಳಲ್ಲಿ
ತಾಳ್ಮೆಗೆಡದೆ ಸಮತೆಯಲ್ಲಿ
ನಡೆಯೆ ಮುಂ-ದೆ
ಬರುವುದಣ್ಣ ಗೆಲವು ನಮ್ಮ
ಬೆನ್ನ ಹಿಂ-ದೆ