ಹಳೆಯ ವರುಷವು ಕಳೆದು ಹೋಯಿತು
ಹೊಸ ಯುಗಾದಿಯು ಬಂದಿತು
ಕಷ್ಟ ಕೋಟಿಯ ಕಹಿಯ ನುಂಡಿಹ
ಜನಕೆ ಹರುಷವ ತಂದಿತು

ಬೇನೆ ಬೇಸರ ಮಾಯವಾಯಿತು
ಸುತ್ತ ಚೇತನ ಚಿಮ್ಮಿತು
ಮಹಲು ಗುಡಿಸಲಿನೊಳಗು ಹೊರಗೂ
ಹೊಸತು ಚೆಲುವಿಕೆ ಹೊಮ್ಮಿತು

ಚಿನ್ನದೊಡವೆಯ ಬಣ್ಣದುಡುಗೆಯ
ಮಂದಿ ಎತ್ತಲು ಮೆರೆಯಿತು
ಹಬ್ಬದೂಟದ ಸುಖದ ಸವಿಯನು
ಹೀರಿ ಸಂತಸ ಗೊಂಡಿತು

ಭೇದ ಬುದ್ಧಿಯ ಮರೆತು ಜನತೆಯು
ಕೂಡಿ ನಲಿ ನಲಿದಾಡಿತು
ದೇವ ದೇವನ ಪುಣ್ಯ ನಾಮವ
ಪಾಡಿತು ಕೊಂಡಾಡಿತು