ಸೂರಿಯನೆಂದರೆ ಉರಿಯುವ ಗೋಲ
ಎನ್ನುವ ಸಂಗತಿ ನೆನಪಿಡು ಬಾಲ
ಬೆಳಕೂ ಉಷ್ಣವು ಅವನಿಂದ
ಬರುವುದು ಭೂಮಿಗೆ ತಿಳಿಕಂದ

ಸೂರಿಯನಿಲ್ಲದೆ ಜೀವನವಿಲ್ಲ
ಅವನನೆ ಹೊಂದಿವೆ ಜೀವಿಗಳೆಲ್ಲ
ಸಸ್ಯದ ಸಂಪದ ಮಳೆ-ಬೆಳೆಯು
ಪಡೆವುದು ಅವನಿಂದಲೆ ಇಳೆಯು

ಅಕ್ಷದಿ ತಿರುಗುವ ಭೂಮಿಯ ಭಾಗ
ಸೂರಿಯನೆದುರಿಗೆ ಬಂದಿರೆ ಬೇಗ
ಬೆಳಗಿದ ಜಾಗಕೆ ನಿಜ ಹಗಲು
ಹಿಂದಿನ ಭಾಗಕೆ ಬರೆ ಇರುಳು

ವರುಷದಿ ಒಮ್ಮೆಗೆ ಸೂರ್ಯನ ಸುತ್ತು
ಭೂಮಿಯು ತಿರುಗುತ ಬರುವುದು ಸತ್ಯ
ವಾರ್ಷಿಕ ಚಲನೆಯು ಇದು ನೋಡ
ಇದರಿಂದಾಗಿಯೆ ಋತು ಭೇದ