ಬಂತೂs ಬಂತೂs ಬಂತೂ
ಶುಭ ದೀಪಾವಳಿ ಬಂತೂs

ಮನೆ ಮನೆಗೆ ರಂಗವಲ್ಲಿ
ಸಿಂಗರವು ನೋಡಿದಲ್ಲಿ
ತುಂಬಿಹುದು ಕಾಳು ಕಣಜ
ಊರಿಗಿದು ಸುಗ್ಗಿ ಸಹಜ ||ಬಂತೂ||

ಇದು ಮಹಲು ಗುಡಿಸಲೆನದೆ
ಮಠ-ಗುಡಿಯ ಭೇದವಿರದೆ
ಎಲ್ಲೆಲ್ಲು ದೀಪ ಬೆಳಗಿ
ಇರುಳೆಲ್ಲ ಹಗಲೆ ಆಗಿ ||ಬಂತೂ||

ಸಿರಿತನವೆ ಸುತ್ತಲೆಲ್ಲೂ
ಅಡಗಿಹುದು ಬರದ ಸೊಲ್ಲು
ಹೊಮ್ಮುತಿದೆ ಹೊಸತು ಚೆಲುವು
ಜನಮನದಿ ತುಂಬ ಗೆಲುವು ||ಬಂತೂ||

ಧನಿಕನಿವ ತಿರುಕ ನೆನದೆ
ಹಿರಿಯನಿವ ಕಿರಿಯ ನೆನದೆ
ಉಂಡುಟ್ಟು ಹರುಷ ಹೊಂದಿ
ನಲಿಯುತಿದೆ ಜಗದ ಮಂದಿ            ||ಬಂತೂ||