ಬಾಗಿಲ ಮುಂದಿನ ಮರ ನೋಡಣ್ಣ
ಬಾಗುತ ವಂದನೆ ಮಾಡಣ್ಣ
ಹಸುರೆಲೆ ಚಪ್ಪರ ಹಾಕಿರುವಂತೆ
ಕೊಂಬೆಯ ರೆಂಬೆಯ ಹರಡಿಯೆ ನಿಂತೆ
ಕರೆವುದು ಮರವಿದು ಬನ್ನಿರಿ ಇಲ್ಲಿ
ನೆರಳಿನ ಮರೆಯಲಿ ಮೈಯನು ಚೆಲ್ಲಿ

ಕೀಟವೊ ಕ್ರಿಮಿಗಳೊ ಹಾಡುವ ಹಕ್ಕಿ
ಊಟಕೆ ಎಲೆ ಹೂ ಹಣ್‌ಗಳ ಹೆಕ್ಕಿ
ಪರಿವಾರದ ಜೊತೆ ಸಂತಸದಲ್ಲಿ
ವಿರಮಿಸು ತಿರುವವು ಈ ಮರದಲ್ಲಿ

ಕೂಡಲು ಬರುವುದು ಹಿರಿಯರ ಗುಂಪು
ಆಡಲು ಚಿಣ್ಣರ ಕರೆವುದು ತಂಪು
ಬೀಸುವ ಗಾಳಿಗೆ ಹರುಷವ ಹೊಂದಿ
ಬೇಸರ ಕಳೆವುದು ಪಯಣದ ಮಂದಿ

ನಿಂದರು ಸಾವಿರ ಫಲಗಳ ಹೊತ್ತು
ಎಂದಿಗು ತಿನ್ನದು ಹಣ್ಣಿನ ತುತ್ತು
ಇದ್ದುದನೆಲ್ಲವ ಲೋಕಕೆ ಇತ್ತು
ಇದ್ದು ಬಿಡುವ ಪರಿ ಇದಕೇ ಗೊತ್ತು