ಓಹೊ ಬಂತು ಬಂತು ರಜ
ಆಹ ಈಗ ಎಂಥ ಮಜ!

ನಿದ್ರೆ ಕೆಡಿಸ ಬರುವರಿಲ್ಲ
ಎದ್ದು ಓದು ಎನುವರಿಲ್ಲ
ಪಾಠ ಕಲಿವ ಕಾಟವಿಲ್ಲ
ಆಟ ಊಟ ಓಟ ಎಲ್ಲ

ಸೂರ್ಯ ಮೂಡಿ ಬಂದ ಮೇಲೆ
ನಿದ್ದೆ ಬಿಟ್ಟು ಬಂದು ವೇಳೆ
ಕಳೆಯಲೆಂದೆ ನೂರು ಪ್ಲಾನು
ಮಾಡಲುಂಟು ಬಲ್ಲೆಯೇನು?

ಬಂಧು ಬಳಗದವರ ಮನೆಗೆ
ಅಚ್ಚು ಮೆಚ್ಚಿನವರ ಕಡೆಗೆ
ಹೋಗಿ ಕೂತು ಉಂಡು ತಿಂದು
ಬರುವುದೆಲ್ಲ ನಡೆವುದಿಂದು

ಬೆಳಗಿನಿಂದ ಬೈಗು ವರೆಗೆ
ಎಳೆಯ ಗೆಳೆಯ ಬಳಗ ಜೊತೆಗೆ
ಕೂಡಿ ಓಡಿ ಆಡಲುಂಟು
ನಗುತ ಕುಣಿದು ಹಾಡಲುಂಟು

ಹಳ್ಳಿಯೂರ ಗದ್ದೆ ತೋಟ
ಅಲ್ಲೆ ಗುಡ್ಡ ಬಯಲ ನೋಟ
ಸುಳಿದು ಸುತ್ತಿ ನೋಡಿ ಹಿಗ್ಗಿ
ನಲಿವ ಮನಕೆ ಸುಖದ ಸುಗ್ಗಿ

ದಿನವು ಕ್ರಿಕೆಟು, “ವಾಲಿ ಬಾಲು”
ತಣಿಪ ಕಬಡಿ, ಚಿಣ್ಣಿ ಕೋಲು
ದಣಿವ ತನಕ ಹರಟೆ, ಈಜು
ಸಿನಿಮ, ‘ಆಟ’, ಜಾತ್ರೆ, ಮೋಜು