ಆ ವಿಶಾಲ ಬಾನ ಬಯಲ
ಕರಿಯ ಮೋಡ ಮುಚ್ಚಿತು
ದೇವ ಡೋಲು ಬಡವನೆನಲು
ಗುಡುಗು ಸದ್ದು ಹೆಚ್ಚಿತು

ಗಾಳಿರೊಂಯ ಬೀಸಿತಯ್ಯ
ಮರಕೆ ಗಿಡಕೆ ಕಚಗುಳಿ
ಬಾಗಿ ಬಳುಕಿ ತೂಗಿ ಕುಲುಕಿ
ಹಸುರಿಗಾಯ್ತು ಗಲಿಬಿಲಿ

ಮುಗಿಲ ಮೇಲೆ ಬೆಳಕ ಮಾಲೆ
ಹೊಳೆವ ಮಿಂಚು ಫಳ ಫಳ
ಚದರಿ ಬಿತ್ತು ಹನಿಯ ಮುತ್ತು
ನೀರ ಹರಿವು ಥಳ ಥಳ

ಬೆಂದು ಹೋದ ಕರಟ ಕಾದ
ನೆಲವು ತಂಪು ಪಡೆಯಿತು
ಕೆಸರು ಕೊಚ್ಚೆಯಲ್ಲಿ ಪಚ್ಚೆ
ಹುಲ್ಲು ಚಿಗುರು ಒಡೆಯಿತು

ಹೊಸತು ಜೀವ ಹೊಸತು ಭಾವ
ಜಗದಿ ಜನದಿ ಉಕ್ಕಿತು
ಮೈಯ ಉದ್ದ ಹಸಿರು ಹೊದ್ದ
ಭೂಮಿ ತಾನೆ ನಕ್ಕಿತು