ಇರುವೇ ಇರುವೇ ಓ ಇರುವೇ
ಎಲ್ಲಾ ಕಡೆಯೂ ನೀನಿರುವೆ

ಬಾಗಿಲ ಸಂದಿನ ಒಳಗೂ ಇರುವೆ
ಗೋಡೆಯ ಬಿರುಕಿನ ಹೊರಗೂ ಇರುವೆ
ಮನೆಗಳ ಮೆಟ್ಟಲ ಎಡೆಯಲಿ ಇರುವೆ
ಹಾಸಿದ ಚಾಪೆಯ ಅಡಿಯಲಿ ಇರುವೆ……………

ಅಕ್ಕಿಯ ಗೋಣಿಯ ಸುತ್ತಲು ಇರುವೆ
ಎಣ್ಣೆಯ ಡಬ್ಬಕೆ ಮುತ್ತಿಯು ಇರುವೆ
ಹಿಂಡಿಯ ಚೀಲಕೆ ಬಂದೂ ಇರುವೆ
ಬೆಲ್ಲದ ತುಂಡನು ತಿಂದೂ ಇರುವೆ …………

ಕೆಂಪಿನ ಕಪ್ಪಿನ ಬಣ್ಣದ ಇರುವೆ
ದೊಡ್ಡದು ಚಿಕ್ಕದು ಜಾತಿಯ ಇರುವೆ
ಸದ್ದನು ಮಾಡದೆ ದುಡಿಯುವ ಇರುವೆ
ಕೂಡಿಯೆ ಬಾಳುವ ಬುದ್ದಿಯ ಇರುವೆ…….