ಕೊಳಕು ಎಲ್ಲಿ ಇರುವುದಲ್ಲಿ
ನೀನು ಹುಟ್ಟಿ ಬೆಳೆಯುವೆ
ನಾತ ಎಲ್ಲಿ ಬರುವುದಲ್ಲಿ
ಸುಖದಿ ಕಾಲ ಕಳೆಯುವೆ

ಕಂಡ ಎಡೆಗೆ ಹಾರಿ ಕಡೆಗೆ
ಸಿಕ್ಕಿದುದನು ಮುಕ್ಕುವೆ
ಹಣ್ಣು ಬೆಲ್ಲ ಹೊಲಸನೆಲ್ಲ
ಹಿಗ್ಗಿನಿಂದ ನೆಕ್ಕುವೆ

ಹಾಡುವಾಗ “ಡುಯಿಂ” ರಾಗ
ನಿನ್ನ ಜೊತೆಗೆ ಬರುವುದು
ನೀನು ಖುದ್ದು ಕೊಡುವ ಮುದ್ದು
ರೋಗ ರುಜಿನ ತರುವುದು

ಹೇಳಿ ಬಿಡುವೆ ನನ್ನ ಗೊಡವೆ
ಬೇಡ ನಿನಗೆ ಏ ನೊಣ
ನಾನು ಸಿಟ್ಟುಗೊಂಡು ಪೆಟ್ಟು
ಹೊಡೆದು ಬಿಡಲು ನೀ ಹೆಣ