ಅಮ್ಮ ಇಂದು ಪ್ರಶ್ನೆ ಒಂದು
ಕೇಳುತೇನೆ ನಿನ್ನನು
ಬಿಡದೆ ಹೊರಗೆ ಮನೆಯ ಒಳಗೆ
ತಡೆವೆ ಏಕೆ ನನ್ನನು?

ಉಂಟು ಅಲ್ಲಿ ಹಸಿರಿನಲ್ಲಿ
ಹೊಳೆವ ಬೆಳಕು ಥಳಥಳ
ಗಾಳಿ ಬೀಸಿ ತಂಪು ಸೂಸಿ
ಬಯಲು ತುಂಬ ಪರಿಮಳ

ನಗೆಯ ಬೀರಿ ಚೆಲುವು ತೋರಿ
ಮೆರೆವ ಹೂವು ಅಲ್ಲಿದೆ
ಹಕ್ಕಿ ಗಾನ ಕರೆವ ತಾಣ
ಇಲ್ಲಿ ಬೇರೆ ಎಲ್ಲಿದೆ?

ಆಡಲುಂಟು ಓಡಲುಂಟು
ನೋಡಲುಂಟು ಹೊರಗಡೆ
ಹೇಳು ನಾನು ಇಲ್ಲಿ ಏನು
ಮಾಡಲುಂಟು ಒಳಗಡೆ?