ಕಿಟ್ಟು-ನಮ್ಮ ಪುಟ್ಟ ತಮ್ಮ-
ಬಂದಿದಾನೆ ಮ-ಲ್ಲಿ
ತುಂಬಿ ತನ್ನ ಚೀಲವನ್ನ
ತಂದಿದಾನೆ ಇ-ಲ್ಲಿ

ಹಳೆಯ ಪೈಸೆ, ಹಾಳು ಸೀಸೆ
ರಿಬ್ಬನಿನದು ತುಂ-ಡು
ಒಡಕು ಬಳೆಯು, ಮೊಟಕು ಮೊಳೆಯು
ರಬ್ಬರಿನದು ಚೆಂ-ಡು

ದುಂಡು ಕಲ್ಲು, ಗೊಂಡೆ ಹುಲ್ಲು,
ಹೂವು, ಕಾಯಿ, ಹ-ಣ್ಣು
ನಕಲಿ ಮುತ್ತು ಪಿನ್ನು ಮತ್ತು
ಬಳಪ, ಕಡ್ಡಿ,  ಪೆ-ನ್ನು

ಗೊಂಬೆ, ಗಾಲಿ, ಗೆಜ್ಜೆ, ಗೋಲಿ
ಬಣ್ಣದುಂಡೆ ನೂ-ಲು
ನವಿಲ ಗರಿಯು, ಮಿರುಗು ಜರಿಯು
ಚಿತ್ರ, ಚಿಣ್ಣಿ ಕೋ-ಲು

ಏನು ಉಂಟು ಎಷ್ಟು ಉಂಟು
ಹೇಳಲಾರೆ ನಾ-ನು
ಒಮ್ಮೆ ಬಂದು ಇಣುಕಿ ನಿಂದು
ನೋಡಬೇಕು ನೀ-ನು