ಜೋ ಜೋ ಜೋ ಜೋ ಮಲಗಿರು ಚಿಣ್ಣ
ಜೋಗುಳ ಹಾಡಿಯೆ ತೂಗುವೆನಣ್ಣ ||ಜೋ ಜೋ||

ಹಾಸಿಗೆ ಹಾಸಿದೆ ತೊಟ್ಟಿಲಿನಲ್ಲಿ
ಬೆಚ್ಚಗೆ ಹೊದಿಕೆಯ ಹೊದೆಸುವೆನಿಲ್ಲಿ
ಕಂಗಳ ಮುಚ್ಚುತ ನಿದ್ರಿಸು ಚಿನ್ನ
ಚೆಲುವಿನ ಕನಸನು ಕಾಣೆಲೆ ರನ್ನ     || ಜೋ ಜೋ||

ಬಿದಿಗೆಯ ಚಂದಿರನಂದದಿ ಬಳೆದು
ಮೊಗದಲಿ ನಗುವಿನ ಕಳೆಯನು ತಳೆದು
ಮನವನು ಮನೆಯನು ಬೆಳಗಿಸು ಕಂದ
ನೀನೆಂತಿದ್ದರು ನನಗಿದು ಚಂದ        ||ಜೋ ಜೋ||

ಜೋ ಜೋ ಜೋ ಜೋ ಮುದ್ದಿನ ಗಿಣಿಯೆ
ಜೋ ಜೋ ಜೋ ಜೋ ಚೆಲುವಿನ ಗಣಿಯೆ
ನಿನ್ನಯ ಬಾಳುವೆ ಬೆಳಗಲಿ ಮುಂದೆ
ನಾಡಿನ ಕೀರುತಿ ಹೆಚ್ಚಲಿ ತಂದೆ        ||ಜೋ ಜೋ||