ಅಜ್ಜಿ ಅಜ್ಜಿ ನನ್ನ ಅಜ್ಜಿ
ಭಾರಿ ಒಳ್ಳೆಯಾ-ಕೆ
ಬಂದು ಬಂದು ತಂಟೆ ಗಿಂಟೆ
ಮಾಡ ಬೇಡಿ ಜೋ-ಕೆ

ಹಲ್ಲು ಗಿಲ್ಲು ಅವಳಿಗಿಲ್ಲ
ಬರಿಯ ಬೊಚ್ಚು ಬಾ-ಯಿ
ಹಣ್ಣು ಹಣ್ಣು ಮುದುಕಿ ಆಕೆ
ಅಮ್ಮಗವಳು ತಾ-ಯಿ

ಕಿವಿಯು ಕಿವುಡು ಕಣ್ಣು ಕುರುಡು
ಅವಳ ಬೆನ್ನು ಗೂ-ನು
ಆದರೇನು ಕೋಲನೂರಿ
ನಡೆಯುತಾಳೆ ತಾ-ನು

ಚಿಕ್ಕ ಪುಟ್ಟ ಮಕ್ಕಳಲ್ಲಿ
ಹೆಚ್ಚು ಅವಳ ಮೆ-ಚ್ಚು
ನಮ್ಮನೆಲ್ಲ ನಗಿಸಿ ನಲಿಸಿ
ತಣಿವುದಳ ಹು-ಚ್ಚು

ಕತೆಯು ಸಾಕೆ, ತಿಂಡಿ ಬೇಕೆ?
ಅವಳ ಬಳಿಗೆ ಬ-ನ್ನಿ
ಪ್ರೀತಿಯಿಂದ ಒಂದು ಬಾರಿ
“ನಮ್ಮ ಅಜ್ಜಿ” ಎ-ನ್ನಿ