ಸೂರ್ಯ ಮೂಡಿ ಬಂದ ನೋಡಿ
ಓಡಿತಣ್ಣ ಕತ್ತಲು
ಹೊನ್ನ ಬಣ್ಣ ಬೆಳಗಿತಣ್ಣ
ಸುತ್ತ ಮುತ್ತ ಎತ್ತಲು
ಸದ್ದನೆಲ್ಲ ಮಾಡಲಿಲ್ಲ
ಗಾಳಿ ಮೆಲ್ಲ ಬೀಸಿತು
ಮರಕೆ ಗಿಡಕೆ ಜೀವ ಜಗಕೆ
ತಂಪನೆಲ್ಲ ಸೂಸಿತು
ತುಂಬಿ ಹಿಂಡು ಹಾಡಿಕೊಂಡು
ಹೂವಿನೆಡೆಗೆ ಹಾರಿತು
ಹಾರಿ ಬಂದು ಮುದ್ದನೊಂದು
ನೀಡಿ ಜೇನು ಹೀರಿತು
ಹಸಿರು ಬಳ್ಳಿ ಮರಗಳಲ್ಲಿ
ಹಕ್ಕಿ ಬಳಗ ಹಾಡಿತು
ಕಾಡಿನಿಂದ ಹೊರಟು ಬಂದ
ಮಿಗವು ಹಿಂದೆ ಓಡಿತು
ಊರ ಮಂದಿ ಗೆಲವು ಹೊಂದಿ
ದೇವನನ್ನು ನೆನೆಯಿತು
ಎದ್ದು ಬಂದು ಉಂಡು ತಿಂದು
ಕೆಲಸಕೆಂದು ನಡೆಯಿತು
Leave A Comment