ಜೋ ಜೋ ಜೋಗುಳ ಪಾಡುವೆನಣ್ಣ
ಸುಖದಲಿ ನಿದ್ರಿಸು ಮುದ್ದಿನ ಚಿಣ್ಣ ||ಜೋಜೋ||

ಬಿಗಿದಪ್ಪಿ ಮುದ್ದಿಸಿ ಕುರುಳು ನೇವರಿಸಿ
ಮಡಿಲಿನ ಮರೆಯಲಿ ಮೊಲೆವಾಲನುಣಿಸಿ
ಮೆತ್ತನೆ ಹಾಸಿನ ತೊಟ್ಟಿಲೊಳಿರಿಸಿ
ತೂಗುವೆ ಬೆಚ್ಚನೆ ಹೊದಿಕೆಯ ಹೊದಿಸಿ ||ಜೋಜೋ||

ಕಂದಯ್ಯ ನೀನೇ ವಂಶದ ಬಳ್ಳಿ
ಮನವನು ಮನೆಯನು ಬೆಳಗುವ ಬೆಳ್ಳಿ
ನಗೆಯನು ಸೂಸುವ ನಿನ್ನಯ ಮೊಗವ
ನೋಡುತ ಹರುಷದಿ ಮರೆವೆನು ಜಗವ ||ಜೋಜೋ||

ಉತ್ತಮ ನಡೆನುಡಿ ಪಡೆದವನಾಗು
ನಿತ್ಯವು ದೇವನ ನೆನೆಯುತ ಬಾಗು
ನಾಡಿನ ಒಳಿತಿಗೆ ನೀ ದುಡಿಯಣ್ಣ
ನಿನ್ನಯ ಜೀವನ ಬೆಳಗಲಿ ಚಿಣ್ಣ ||ಜೋಜೋ||