ಸೂರಿಯ ದೇವನ ಚಂದಿರ ಮಾಮನ
ಆಡಿಸುವಾತನು ಯಾರವನು?
ಬಾನಲಿ ಮಿನುಗುವ ಸಾವಿರ ಬೆಳಕನು
ಮೂಡಿಸುವಾತನು ಯಾರವನು?

ಚಿಲಿಪಿಲಿಗುಟ್ಟುವ ಹಕ್ಕಿಯ ಬಳಗಕೆ
ಹಾಡನು ಯಾವನು ಕಲಿಸಿದನು?
ಚೆಲುವಿನ ಬಣ್ಣದ ನವಿಲಿಗೆ ನರ್ತನ
ಮಾಡಲು ಯಾವನು ತಿಳಿಸಿದನು?

ಮರಗಿಡ ಬಳ್ಳಿಗೆ ಒಪ್ಪುವ ಪಚ್ಚೆಯ
ಬಣ್ಣವನಾವನು ಕೊಟ್ಟವನು?
ಹಣ್ಣಿನ ಹೊಟ್ಟೆಯ ಪೆಟ್ಟಿಗೆಯೊಳಗಡೆ
ಬೀಜವನಾವನು ಇಟ್ಟವನು?

ಮೋಡದ ಕೊಡಗಳ ತುಂಬಿದ ನೀರನು
ಯಾವನು ಭೂಮಿಗೆ ಸೂಸಿದನು?
ಮೌನದ ನಗುವಿನ ಹೂಗಳಿಗೆಲ್ಲಕೆ
ಯಾವನು ಪರಿಮಳ ಪೂಸಿದನು?

ಕೋಟಿಯ ಸಂಖ್ಯೆಯ ಜೀವಿಗಳೆಲ್ಲವ
ಯಾವನು ಸೃಷ್ಟಿಯ ಮಾಡಿದನು?
ಅವುಗಳಿಗೆಲ್ಲಕೆ ಅಲ್ಲಿಗೆ ಅಲ್ಲಿಗೆ
ಯಾವನು ಉಣ್ಣಲು ನೀಡಿದನು?