ಕೇಳೆ ಅಮ್ಮ ಪುಟ್ಟ ತಮ್ಮ
ಅಳಲು ತೊಡಗಿದಾ-ಗ
ಓಡಿ ಬಂದು ಎತ್ತಿಕೊಂಡು
ಹಾಲು ಕೊಡುವೆ ಬೇ-ಗ

ಅತ್ತು ನಾನು ಕರೆದರೇನು
ಗೊಡವೆ ನಿನಗೆ ಇ-ಲ್ಲ
ಬಂದು ಮೆಲ್ಲ ಕೊಡುವುದಿಲ್ಲ
ಉಂಡೆ, ಲಾಡು, ಬೆ-ಲ್ಲ

ಮುದ್ದು ಪುಟ್ಟು ಎಷ್ಟು ಹೊತ್ತು
ನಿದ್ರಿಸಿದ್ದರೇ – ನು
ಬಳಿಗೆ ಹೋಗಿ ಕೂಗಿ ರೇಗಿ
ಎಬ್ಬಿಸುವೆಯ ನೀ-ನು?

ಬೆಳಗು ಚಳಿಗೆ ಮುಸುಕಿನೊಳಗೆ
ಕನಸು ಕಾಣುವಂ-ದು
ನನ್ನ ತಟ್ಟಿ ಕರೆವೆ ಗಟ್ಟಿ
“ಬೇಗ ಏಳೊ” ಎಂ-ದು

ಪುಟ್ಟು ಅಲ್ಲೆ ಹಾಸಿನಲ್ಲೆ
ಹೊಲಸು ಮಾಡಿ ಬಿ-ಟ್ಟು
ತಾನು ಉರುಳಿ ಹೊರಳುತಿರಲಿ
ಇಲ್ಲ ನಿನಗೆ ಸಿ-ಟ್ಟು

“ಇಸ್ಸಿ” ಇರಲಿ ಉಚ್ಚೆ ಬರಲಿ
ನಾನು ಮಾತ್ರ ಪಾ-ಪ
ಹೊರಗೆ ಹೋಗದಿರಲು ಬೇಗ
ನಿನಗೆ ಭಾರಿ ಕೋ-ಪ

ಎಣ್ಣೆ ಪೂಸಿ ನೀರು ಕಾಸಿ
ಮಗುವ ಮೀಸಿ ನೀ-ನು
ಹಾಡಿ ಲಾಲಿ ತೊಟ್ಟಿಲಲ್ಲಿ
ತೂಗುತಿಲ್ಲ ವೇ-ನು?

ಬಲ್ಲೆ ನಾನು ನನ್ನ ನೀನು
ಪ್ರೀತಿ ಮಾಡು ತಿ-ಲ್ಲ
“ಹೋಗಿ ಮಿಂದು ಬಾರೊ” ಎಂದು
ಹೇಳಿ ಬಿಡುವೆಯ-ಲ್ಲ

ಪುಟ್ಟುವನ್ನ ಎತ್ತಿ ನಿನ್ನ
ತೊಡೆಯ ಮೇಲೆ ಇ-ಟ್ಟು
ಕರುಳು ತೀಡಿ ನಗುವೆ ನೀಡಿ
ಕೆನ್ನೆ ತುಂಬ ಮು-ತ್ತು

ನನ್ನ ತಬ್ಬಿ ಹಿಡಿದು ಉಬ್ಬಿ
ಕೊಡುವ ಬದಲು ಮು-ದ್ದು
ಸಿಟ್ಟು ಬಂದು ಬೆನ್ನಿಗೊಂದು
ಕೊಟ್ಟು ಬಿಡುವೆ ಗು-ದ್ದು

ಕೇಳೆ ನನ್ನ ಅಮ್ಮ ನಿನ್ನ
ರೀತಿ ಏಕೆ ಹೀ-ಗೆ?
ನಾನು ಮತ್ತು ಮುದ್ದು ಪುಟ್ಟು
ಬೇರೆ ಬೇರೆ ಹೇ-ಗೆ?