ಕಾಡಿನ ಮರದಲಿ ಗೂಡಿನ ಮನೆಯಲಿ
ಹಕ್ಕಿಯು ವಾಸವ ಮಾಡಿತ್ತು
ಮರಿಗಳ ಜೊತೆಯಲಿ ಭಾರೀ ಖುಷಿಯಲಿ
ಹಾಡುತ ನಲಿ ನಲಿದಾಡಿತ್ತು

ಆನೆಯು ದೊಡ್ಡದು ಆಕಡೆ ಬಂದುದು
ಮೈಯನು ತಿಕ್ಕಿತು ಆ ಮರಕೆ
ಹೆದರಿಕೆಯಾಗಲು ಮರಿಗಳು ಕೂಗಲು
ತಾಯಿಯು ಬೇಡಿತು ಆ ಚಣಕೆ-

‘ದಮ್ಮಯ ಹಿರಿಯನೆ ನಿನಗಿದೊ ವಂದನೆ
ಮರಿಗಳು ಬೆದರಿವೆ ಕರುಣೆಯಿಡು
ಇಲ್ಲಿಗೆ ಬಂದರೆ ಕೊಡದಿರು ತೊಂದರೆ
ಬೇಗನೆ ದೂರಕೆ ಹೋಗಿಬಿಡು’

‘ದಿನವೂ ಬರುವೆನು ತೊಂದರೆ ಕೊಡುವೆ
ದಂಡಿಸಬಲ್ಲೆಯ ನೀನೆಂ’ದೆ
ಆನೆಯು ನಕ್ಕಿತು ಮತ್ತೂ ತಿಕ್ಕಿತು
ನುಡಿಯಿತು ‘ಶಿಕ್ಷಿಸು ನೀನೆಂದೆ’

ಹಕ್ಕಿಯು ಹಾರಿತು ಆನೆಯ ಸೇರಿತು
ಕುಕ್ಕಿತು ಪರಚಿತು ಕಿವಿಯೊಳಗೆ
ಹುಚ್ಚೇ ಹಿಡಿಯಿತು ದಿಗಿಲೇ ಬಡಿಯಿತು
ಓಡಿತು ಆನೆಯು ಕ್ಷಣದೊಳಗೆ

ಮಾಡುತ ಸದ್ದು ಬಿದ್ದೂ ಎದ್ದೂ
ಓಡಿತು ಸೋತಿತು ಆ ಆನೆ
ಹೇಳಿತು ಹಕ್ಕಿಗೆ, ‘ನಿನ್ನಯ ತಳ್ಳಿಗೆ
ಬಾರೆನು ಎಂದಿಗು ನಿನ್ನಾಣೆ’

ಸೊಕ್ಕಿನ ಆನೆಯ ಕೂಗಿನ ದಮ್ಮಯ
ಕೇಳುವ ವರೆಗೂ ಒಳಗಿದ್ದು
ಮರಿಗಳ ರಕ್ಷಿಸಿ ಆನೆಯ ಶಿಕ್ಷಿಸಿ
ಹಾರಿತು ಹಕ್ಕಿಯು ಹೊರಗೆದ್ದು