ದೊಡ್ಡಿಲಿಗಳು ಚಿಕ್ಕಿಲಿಗಳು
ಕಪ್ಪಿಲಿಗಳು ಬಿಳಿಯವುಗಳು
ಒಂದೆಡೆ ಕೂಡಿದವು
ಸಭೆಯನು ಮಾಡಿದವು

ಬೆಕ್ಕಿಗೆ ಸಿಕ್ಕದ ಹಾಗೆ
ಬದುಕುವ ನಿಜ ಬಗೆ ಹೇಗೆ
ಚರ್ಚೆಯ ಮಾಡಿದವು
ಸಲಹೆಯ ನೀಡಿದವು

ಗಂಟೆಯನೊಂದನು ತಂದು
ಬೆಕ್ಕಿಗೆ ಕಟ್ಟಲು ಬಂದು
ಚಿಂತೆಯು ತಮಗಿಲ್ಲ
ಎಂದೊಪ್ಪಿದುವೆಲ್ಲ

ಗಂಟೆಯ ಕಟ್ಟುವರಾರು?
ಎನುವಲ್ಲಿಯೆ ತಕರಾರು
ಅಂಜಿದ್ದವು ಎಲ್ಲಾ
ಚದುರಿದ್ದವು ಮೆಲ್ಲ