ದೊಡ್ಡ ತಪ್ಪನು ಮಾಡಿದವಳನು
ಜನರು ಬಂಧಿಸಿ ತಂದರು
ಗುರುವಿನೆದುರಿಗೆ ನಿಲಿಸಿ, ‘ಇವಳಿಗೆ
ಶಿಕ್ಷೆ ನೀಡಿರಿ’ ಎಂದರು

‘ಕಲ್ಲು ಹೊಡೆವುದು ಇಲ್ಲೆ ಕೊಲುವುದು
ಈಕೆ ಮಾಡಿದ ತಪ್ಪಿಗೆ
ಬೇಡ ರಕ್ಷೆಯು ಸಿಗಲಿ ಶಿಕ್ಷೆಯು
ನಮ್ಮದೆಲ್ಲರ ಒಪ್ಪಿಗೆ’

ಕಿರಿಚಿಕೊಂಡರು ಕಲ್ಲು ತಂದರು
ಸುತ್ತ ನಿಂದರು ಜನಗಳು
ಅವರ ಕಂಡರು ಮರುಕಗೊಂಡರು
ಮತ್ತೆ ಎಂದರು ಗುರುಗಳು-

‘ಯಾರು ಇಂದಿಗು ತಪ್ಪನೆಂದಿಗು
ಮಾಡಲಿಲ್ಲವೊ ಕೇಳಿರಿ
ಅವರೆ ಮೊದಲಲಿ ಕಲ್ಲು ಹೊಡೆಯಲಿ
ಆಗಬಹುದೇ ಹೇಳಿರಿ’

ಏಸು ಸಾಮಿಯ ಮಾತು ಮಂದಿಯ
ಮನವ ಮುಟ್ಟಿತು ತಟ್ಟತು
ದನಿಯ ಕುಗ್ಗಿಸಿ ತಲೆಯ ತಗ್ಗಿಸಿ
ಜಗವು ಜಾಗವ ಬಿಟ್ಟಿತು