ತಾಯಿ ಮಗುವ ಮೀಸಿ ತಂದು
ತೊಟ್ಟಿಲಲ್ಲಿ ಇಟ್ಟಳು
ಹೋಗಿ ಮಿಂದು ಬರುವೆನೆಂದು
ಬೇಗೆ ಮನೆಯ ಬಿಟ್ಟಳು
ಅಷ್ಟರಲ್ಲೆ ದೊಡ್ಡ ಸರ್ಪ
ಗುಡಿಸಲೊಳಗೆ ಓಡಿತು
ತೊಟ್ಟಿಲೆಡೆಗೆ ಸಾಗುವುದನು
ಮನೆಯ ನಾಯಿ ನೋಡಿತು
ಒಡನೆ ಫಕ್ಕ ನೆಗೆದ ನಾಯಿ
ಸರ್ಪವನ್ನು ತಡೆಯಿತು
ಕತ್ತು ಹಿಡಿದು ನೆಲಕೆ ಬಡಿದು
ಅದನು ಕೆಳಗೆ ಕೆಡವಿತು
ತಾಯಿ ಮಿಂದು ಮನೆಗೆ ಬಂದು
ನಾಯಿಯನ್ನು ಕಂಡಳು
ಮುಸುಡು ತುಂಬ ಕೆಂಪು ರಕುತ
ನೋಡಿ ದಿಗಿಲು ಗೊಂಡಳು
‘ಮಗುವ ನಾಯಿ ತಿಂದಿತಯ್ಯೊ!
ಮಾಡಲೇನು’ ಎಂದಳು
ಸಿಟ್ಟಿನಲ್ಲಿ ಬುದ್ಧಿ ಕೆಟ್ಟು
ನಾಯ ಹೊಡೆದು ಕೊಂದಳು
ಮನೆಯ ಒಳಗೆ ಸತ್ತ ಹಾವು!
ಎಂದಳವಳು ಎಲ ಎಲ!
ತೊಟ್ಟಿಲಲ್ಲಿ ಪುಟ್ಟ ಕಂದ
ನಗುತಲಿತ್ತು ಕಿಲ ಕಿಲ
ಹಾವ ಕೊಂದು ಮಗುವನಂದು
ಬದುಕಿಸಿತ್ತು ನಾಯಿಯು
ಅಂಥ ನಾಯ ಕೊಂದುದಕ್ಕೆ
ದುಃಖಿಸಿದಳು ತಾಯಿಯು
Leave A Comment