ಧನಿಕನ ಭಾರೀ ಕಟ್ಟಡಕಾಗಿ
ಮರಗಳ ಕೊಯ್ಯುವ ಕೆಲಸವು ಸಾಗಿ
ಇದ್ದಿರುವಾಗಲೆ ಒಂದು ದಿನ
ಊಟಕೆ ಹಿಓಗಿರ ದುಡಿವ ಜನ

ಕಾಡಿನ ಮಂಗಗಳಲ್ಲಿಗೆ ಬಂದು
ಸುತ್ತಿಗೆ ಉಳಿ ಗರಗಸೆಗಳ ಕಂಡು
ಕಚ್ಚುತ ಮೂಸಿಯೆ ನೋಡಿದವು
ಎತ್ತಿ ಬಿಸಾಡುತ ಆಡಿದವು

ಆಗಲೆ ಮಂಗವು ದೊಡ್ಡದು ಒಂದು
ಅರ್ದಕೆ ಸಿಗಿದಾ ಮರದೆಡೆ ಬಂದು
ಮಧ್ಯಕೆ ಜಡಿದಿಹ ಕೀಲನ್ನು
ಎಳೆಯಿತು ನೀಡುತ ಕಾಲನ್ನು

ಭರದಲಿ ಎಳೆಯಲು ಜಾರಿತು ಕೀಲು
ಮರದೆಡೆ ಬಾಲವು, ಸೊಂಟವು, ಕಾಲು
ಆದವು ಅಲ್ಲಿಯೆ ಅಪ್ಪಚ್ಚಿ
ಸತ್ತಿತು ಮಂಗವು ಕಣ್ಣ್‌ಮುಚ್ಚಿ

ಸಲ್ಲದ ಕೆಲಸಕೆ ಹೋದರೆ ನಿತ್ಯ
ಸಂಕಟ ಯಾರಿಗು ಸಲ್ಲದು-ಸತ್ಯ
ಎನ್ನುತ ಜನಗಳು ತಮ್ಮೊಳಗೆ
ನುಡಿಯುತ ನಡೆದರು ಮನೆಗಳಿಗೆ